ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಸಂಘರ್ಷಕ್ಕೆ ವಿರಾಮ ಘೋಷಣೆಯಾಗಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯನ್ನು ಮತ್ತೆ ಆರಂಭಿಸುವ ಕುರಿತು ಇಂದು (ಭಾನುವಾರ) ಸಭೆ ನಡೆಯಲಿದೆ.
‘ಉಭಯ ದೇಶಗಳ ನಡುವಣ ಸಂಘರ್ಷವಿದ್ದ ಕಾರಣಕ್ಕೆ ಟೂರ್ನಿಯನ್ನು ಮಧ್ಯದಲ್ಲಿಯೇ ಸ್ಥಗಿತಗೊಳಿಸಲಾಗಿತ್ತು. ಟೂರ್ನಿಯಲ್ಲಿ ಇನ್ನೂ 16 ಪಂದ್ಯಗಳು ಬಾಕಿ ಇವೆ. ಸದ್ಯ ಸಂಘರ್ಷಕ್ಕೆ ವಿರಾಮ ಘೋಷಣೆಯಾಗಿದೆ. ಆದ್ದರಿಂದ ಟೂರ್ನಿಯನ್ನು ಆರಂಭಿಸುವ ಕುರಿತು ಐಪಿಎಲ್ ಆಡಳಿತ ಸಮಿತಿಯೊಂದಿಗೆ ಸಭೆ ನಡೆಸಲಾಗುವುದು’ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಉಪಾಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ.
ಟೂರ್ನಿಯ ಉಳಿದ ಪಂದ್ಯಗಳನ್ನು ದಕ್ಷಿಣ ಭಾರತದ ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್ ನಗರಗಳಲ್ಲಿ ಆಡಿಸುವ ಸಾಧ್ಯತೆ ಇದೆ ಎನ್ನಲಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ಶುಕ್ಲಾ, ‘ಸಂಘರ್ಷ ಸಂದರ್ಭದಲ್ಲಿ ದಕ್ಷಿಣದ ನಗರಗಳಲ್ಲಿ ಪಂದ್ಯಗಳ ಆಯೋಜಿಸುವ ಕುರಿತು ಒಂದು ಆಯ್ಕೆ ನಮ್ಮ ಮುಂದಿತ್ತು. ಈಗ ಸ್ಥಿತಿ ಬದಲಾಗಿದೆ. ಸ್ವಲ್ಪ ಸಮಯ ಕೊಡಿ. ಎಲ್ಲವೂ ಸ್ಪಷ್ಟವಾಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.