ADVERTISEMENT

ಬೆಂಗಳೂರು: ಮಹಾರಾಜ ಟ್ರೋಫಿ ಟೂರ್ನಿಗಿಲ್ಲ ಪ್ರೇಕ್ಷಕರು?

ಆಗಸ್ಟ್‌ನಲ್ಲಿ ಟಿ20 ಲೀಗ್ ಆಯೋಜನೆಗೆ ಸಿದ್ಧತೆ; ಬೆಂಗಳೂರಿನಲ್ಲಿಯೇ ಎಲ್ಲ ಪಂದ್ಯಗಳು

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 19:38 IST
Last Updated 1 ಜುಲೈ 2025, 19:38 IST
ಹೋದ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹಾರಾಜ ಟ್ರೋಫಿ ಪಂದ್ಯ  –ಪ್ರಜಾವಾಣಿ ಸಂಗ್ರಹದಿಂದ
ಹೋದ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹಾರಾಜ ಟ್ರೋಫಿ ಪಂದ್ಯ  –ಪ್ರಜಾವಾಣಿ ಸಂಗ್ರಹದಿಂದ   

ಬೆಂಗಳೂರು: ಮುಂಬರುವ ಆಗಸ್ಟ್ ತಿಂಗಳಲ್ಲಿ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಈ ವರ್ಷದ ಆಯೋಜನೆಗೆ ಸಿದ್ಧತೆಗಳು ಆರಂಭವಾಗಿವೆ. ಆದರೆ ಈ ಬಾರಿ ಟೂರ್ನಿಯ ಪಂದ್ಯಗಳ ವೀಕ್ಷಣೆಗೆ ಪ್ರೇಕ್ಷಕರಿಗೆ ಅವಕಾಶ ನಿರ್ಬಂಧಿಸುವ ಸಾಧ್ಯತೆ ಇದೆ. 

ಸೋಮವಾರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ)ಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಫ್ರ್ಯಾಂಚೈಸಿಗಳ ಮಾಲೀಕರು, ಪ್ರತಿನಿಧಿಗಳು ಹಾಗೂ ಕೆಎಸ್‌ಸಿಎ ಪದಾಧಿಕಾರಿಗಳು ಭಾಗವಹಿಸಿದ್ದರು. 

‘ಸಭೆಯಲ್ಲಿ ಮಹಾರಾಜ ಟ್ರೋಫಿ ಆಯೋಜನೆಯ ಕುರಿತು ಚರ್ಚೆ ನಡೆಯಿತು. ಗ್ರಾಮಾಂತರ ಭಾಗಗಳ ಯುವ ಪ್ರತಿಭಾವಂತ ಆಟಗಾರರಿಗೆ ಪ್ರೋತ್ಸಾಹ ನೀಡಲು ಇದು ಉತ್ತಮ ಟೂರ್ನಿಯಾಗಿದೆ. ಈ ವರ್ಷವೂ ಆಗಸ್ಟ್‌ನಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಜುಲೈ 15ರಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಹುಬ್ಬಳ್ಳಿ, ಮೈಸೂರು ನಗರಗಳಲ್ಲಿ ಮಳೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿರುವುದರಿಂದ ಟೂರ್ನಿಯ ಎಲ್ಲ ಪಂದ್ಯಗಳನ್ನೂ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸುವ ಸಾಧ್ಯತೆ ಇದೆ. ಪಂದ್ಯ ವೀಕ್ಷಣೆಗೆ ಪ್ರೇಕ್ಷಕರಿಗೆ ಪ್ರವೇಶ ನೀಡುವ ಸಾಧ್ಯತೆ ಇಲ್ಲ. ಅದಕ್ಕಾಗಿ ಪೊಲೀಸ್ ಇಲಾಖೆಯಿಂದ ಅನುಮತಿ ಕೋರಿದ್ದೇವೆ. ಒಂದೊಮ್ಮೆ ಅನುಮತಿ ಸಿಕ್ಕರೂ ಸೀಮಿತ ಸಂಖ್ಯೆ ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗುವುದು. ಪೊಲೀಸರಿಂದ ಹಸಿರು ನಿಶಾನೆ ಸಿಗದಿದ್ದರೆ ಪ್ರೇಕ್ಷಕರಿಗೆ ಅವಕಾಶ ನೀಡುವುದಿಲ್ಲ’ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. 

ADVERTISEMENT

ಈಚೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸಂಭ್ರಮಾಚರಣೆಯ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿತ್ತು. ಅದರಲ್ಲಿ 11 ಅಭಿಮಾನಿಗಳು ಮೃತಪಟ್ಟಿದ್ದರು. ಹಲವರು ಗಾಯಗೊಂಡಿದ್ದರು. ಅದರಿಂದಾಗಿ ಮಹಾರಾಜ ಟ್ರೋಫಿ ಟೂರ್ನಿಗೆ ಜನರಿಗೆ ಅವಕಾಶ ಕೊಡುವ ಕುರಿತು ಕೆಎಸ್‌ಸಿಎ ಹಿಂಜರಿಯುತ್ತಿದೆ ಎನ್ನಲಾಗಿದೆ. 

ಈ ಸಲವೂ ಆರು ತಂಡಗಳು ಟೂರ್ನಿಯಲ್ಲಿ ಆಡಲಿವೆ. ಹೋದ ವರ್ಷ ಮೈಸೂರು ವಾರಿಯರ್ಸ್ ಚಾಂಪಿಯನ್ ಮತ್ತು ಬೆಂಗಳೂರು ಬ್ಲಾಸ್ಟರ್ಸ್ ರನ್ನರ್ಸ್ ಅಪ್ ಆಗಿದ್ದವು.

‘ಈ ಸಲ ಪ್ರತಿ ತಂಡಕ್ಕೂ ನಾಲ್ವರು ಆಟಗಾರರನ್ನು ರಿಟೇನ್ ಮಾಡಿಕೊಳ್ಳಲು ಅವಕಶ ನೀಡುವ ನಿರೀಕ್ಷೆ ಇದೆ’ ಎಂದೂ ಮೂಲಗಳು ತಿಳಿಸಿವೆ.

ಟೂರ್ನಿಯ ಆಯೋಜನೆ ಕುರಿತು ಪ್ರತಿಕ್ರಿಯೆಗಾಗಿ ‘ಪ್ರಜಾವಾಣಿ’ಯು ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿತು. ಆದರೆ ಅವರು ಸಂಪರ್ಕಕ್ಕೆ ಲಭ್ಯರಾಗಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.