
‘ಬಾಲ್ಯದಲ್ಲಿ ನನ್ನ ಕಣ್ಣಿಗೆ ಚಿಕಿತ್ಸೆ ಕೊಡಿಸಲು ಸಾಲ ಮಾಡಿಕೊಂಡು ಒದ್ದಾಡುತ್ತಿದ್ದ ಅಪ್ಪ. ನೆರೆಹೊರೆಯವರ ಹೀಯಾಳಿಕೆಗಳಿಗೆ ಇವತ್ತು ಉತ್ತರ ಕೊಟ್ಟಿದ್ದೇನೆ. ನನ್ನ ನಾಯಕತ್ವದ ತಂಡವು ಇವತ್ತು ದೇಶಕ್ಕೆ ವಿಶ್ವಕಪ್ ಜಯಿಸಿದೆ. ಕುರುಡುತನ ಶಾಪವಲ್ಲ. ಅವಕಾಶ ಸಿಕ್ಕರೆ ನಾವೂ ಸಾಧಿಸಬಲ್ಲೆವು’–
ಭಾನುವಾರ ಕೊಲಂಬೊದಲ್ಲಿ ಅಂಧ ಮಹಿಳೆಯರ ಟಿ20 ಕ್ರಿಕೆಟ್ ವಿಶ್ವಕಪ್ ಜಯಿಸಿದ ಭಾರತ ತಂಡದ ನಾಯಕಿ ದೀಪಿಕಾ ಟಿ.ಸಿ. (ಬಿ3 ಕೆಟಗರಿ ಆಟಗಾರ್ತಿ) ಅವರ ಭಾವುಕ ಮಾತುಗಳಿವು. ಫೈನಲ್ ನಂತರ ‘ಪ್ರಜಾವಾಣಿ’ಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರ ದನಿ ಗದ್ಗದಿತವಾಗಿತ್ತು.
‘ನಮ್ಮದು ತುಮಕೂರು ಜಿಲ್ಲೆಯ ಕರಿತಿಮ್ಮನಹಳ್ಳಿ. ಆಂಧ್ರ ಗಡಿಯ ಸಮೀಪವಿದೆ. ಅಪ್ಪ ಚಿಕ್ಕತಿಮ್ಮಪ್ಪ ಮತ್ತು ಅಮ್ಮ ಚಿತ್ತಮ್ಮ ಕೂಲಿ ಕೆಲಸ ಮಾಡುತ್ತಿದ್ದರು. ಸ್ವಂತ ಜಮೀನಿಲ್ಲ. ನಾನು ಐದು ತಿಂಗಳ ಮಗುವಾಗಿದ್ದ ಸಂದರ್ಭದಲ್ಲಿ ಉಗುರು ಚುಚ್ಚಿಕೊಂಡಿದ್ದರಿಂದ ಬಲಗಣ್ಣಿನ ದೃಷ್ಟಿ ನಂದಿತ್ತು. 10 ವರ್ಷ ವಯಸ್ಸಿನಲ್ಲಿ ಶಸ್ತ್ರಚಿಕಿತ್ಸೆ ಮಾಡುವುದಾಗಿ ವೈದ್ಯರು ಹೇಳಿದರು. ಆದರೆ ದೃಷ್ಟಿ ಮರಳುವ ಸಾಧ್ಯತೆ ಕಡಿಮೆ ಎಂದರು. ನನಗೆ 12ನೇ ವಯಸ್ಸಿನಲ್ಲಿದ್ದಾಗ ಶಸ್ತ್ರಚಿಕಿತ್ಸೆ ಮಾಡಿಸಲು ಅಪ್ಪ ಬಹಳಷ್ಟು ಪ್ರಯತ್ನಪಟ್ಟರು. ಸಾಲಮಾಡಿ ಶಸ್ತ್ರಚಿಕಿತ್ಸೆ ಮಾಡೋದು ಬೇಡ. ಒಂದು ಕಣ್ಣಿನ ದೃಷ್ಟಿ ಇದೆ. ಅದರಲ್ಲಿಯೇ ಸಾಧನೆ ಮಾಡುವೆ ಎಂಬ ಭರವಸೆ ನೀಡಿದೆ’ ಎಂದು ದೀಪಿಕಾ ವಿವರಿಸಿದರು.
ದೊಡ್ಡಬಾಣಗೆರೆ, ಕುಣಿಗಲ್ ನ ಅಂಧ ಮಕ್ಕಳ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಮುಗಿದ ಮೇಲೆ ಮೈಸೂರಿನ ರಂಗರಾವ್ ಪ್ರೌಢಶಾಲೆಗೆ ಸೇರಿಕೊಂಡರು. ಅಲ್ಲಿದ್ದ ಕೆಲವು ಮಕ್ಕಳು ಅಂಧ ಕ್ರಿಕೆಟ್ ಆಡುತ್ತಿದ್ದಾಗ ಚೆಂಡಿನ ಕಿಣಿ..ಕಿಣಿ.. ಸದ್ದಿಗೆ ಮಾರುಹೋಗಿ ಬ್ಯಾಟ್ ಕೈಗೆತ್ತಿಕೊಂಡರು. ಅವರ ಆಸಕ್ತಿ ಮತ್ತು ಪ್ರತಿಭೆಯನ್ನು ನೊಡಿದ ದೈಹಿಕ ಶಿಕ್ಷಕ ಮೋಹನಕುಮಾರ್ ಮತ್ತು ಹರಿ ಎಂಬುವವರು ಬೆನ್ನು ತಟ್ಟಿದರು. ರಾಜ್ಯ ಟೂರ್ನಿಯಲ್ಲಿ ಆಡಿದರು.
2019ರಲ್ಲಿ ಕರ್ನಾಟಕ ತಂಡದ ಆಯ್ಕೆ ಪ್ರಕ್ರಿಯೆ ಇತ್ತು. ಮ್ಯಾನೇಜರ್ ಶಿಖಾ ಶೆಟ್ಟಿ ಅವರಿಂದ ದೀಪಿಕಾಗೆ ಕರೆ ಬಂದಿತ್ತು. ಆದರೆ ಅಪ್ಪ, ಅಮ್ಮನನ್ನು ಕೇಳಿದಾಗ ಕೂಡಲೇ ಅನುಮತಿ ದೊರೆಯಲಿಲ್ಲ. ಪಾಲಕರನ್ನು ಒಪ್ಪಿಸುವಲ್ಲಿ ದೀಪಿಕಾ ಯಶಸ್ವಿಯಾದರು. ಆದರೆ ತಮ್ಮ ಊರಿನಿಂದ ಬೆಂಗಳೂರಿಗೆ ಹೋಗಲು ಅವರ ಬಳಿ ದುಡ್ಡಿರಲಿಲ್ಲ.
‘ಶಾಲೆಯಲ್ಲಿ ನನಗೆ ಹಿರಿಯಣ್ಣನಂತಿದ್ದ ಮೋಹನಕುಮಾರ್ ನೆರವಿಗೆ ನಿಂತರು. ಬೆಂಗಳೂರಿಗೆ ಹೋಗಲು, ಒಳ್ಳೆಯ ಬಟ್ಟೆ, ಊಟಕ್ಕೆ ದುಡ್ಡು ನೀಡಿದರು. ಅವತ್ತು ಅವರು ಸಹಾಯ ಮಾಡದಿದ್ದರೆ ನನಗೆ ಕ್ರಿಕೆಟ್ ಆಡಲು ಸಾಧ್ಯವಾಗುತ್ತಿರಲಿಲ್ಲ. ಸಮರ್ಥನಂ ಟ್ರಸ್ಟ್‌ನ ಮಹಾಂತೇಶ್ ಸರ್, ಮ್ಯಾನೇಜರ್ ಶಿಖಾ ಶೆಟ್ಟಿ, ತರಬೇತುದಾರರು ನೆರವಿಗೆ ನಿಂತರು’ ಎಂದು ದೀಪಿಕಾ ಹೇಳಿದರು.
‘ನಮ್ಮ ತಂಡದಲ್ಲಿರುವ 16 ಹುಡುಗಿಯರು ಕೂಡ ಬೇರೆ ಬೇರೆ ರಾಜ್ಯ, ಭಾಷೆಯ ಹಿನ್ನೆಲೆಯುಳ್ಳವರು. ಅದರೆ ಎಲ್ಲ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಬಡತನವೇ ಆಗಿದೆ. ನಾನು ಕೆಲವು ತಿಂಗಳುಗಳ ಹಿಂದೆ ಬರ್ಮಿಂಗ್‌ಹ್ಯಾಮ್ ಅಂತರರಾಷ್ಟ್ರಿಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ತಂಡದಲ್ಲಿ ಆಡಿದ್ದೆ. ಅದಕ್ಕಾಗಿ ಮುಂಬೈ ಆದಾಯ ತೆರಿಗೆ ಇಲಾಖೆಯಲ್ಲಿ ನೌಕರಿ ಲಭಿಸಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.