ADVERTISEMENT

ಭಾರತ– ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ಸರಣಿ: ರಾಹುಲ್‌, ಶುಭಮನ್‌ ಅಭ್ಯಾಸ

ನಾಳೆಯಿಂದ ಮೂರನೇ ಟೆಸ್ಟ್‌

ಪಿಟಿಐ
Published 28 ಫೆಬ್ರುವರಿ 2023, 6:42 IST
Last Updated 28 ಫೆಬ್ರುವರಿ 2023, 6:42 IST
ಶುಭಮನ್‌ ಗಿಲ್ ಮತ್ತು ರಾಹುಲ್‌ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದರು –ಪಿಟಿಐ ಚಿತ್ರ
ಶುಭಮನ್‌ ಗಿಲ್ ಮತ್ತು ರಾಹುಲ್‌ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದರು –ಪಿಟಿಐ ಚಿತ್ರ   

ಇಂದೋರ್‌: ಆಸ್ಟ್ರೇಲಿಯಾ ತಂಡದ ವಿರುದ್ಧದ ಮೂರನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯಕ್ಕೆ ಸಜ್ಜಾಗುತ್ತಿರುವ ಭಾರತ ತಂಡದ ಆಟಗಾರರು ಸೋಮವಾರ ಹೋಳ್ಕರ್‌ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರು.

ಸತತ ವೈಫಲ್ಯ ಅನುಭವಿಸಿರುವ ಕೆ.ಎಲ್‌.ರಾಹುಲ್‌ ಮತ್ತು ಅಂತಿಮ ಇಲೆವೆನ್‌ನಲ್ಲಿ ಸ್ಥಾನ ಪಡೆಯಲು ಸ್ಪರ್ಧೆಯಲ್ಲಿರುವ ಯುವ ಆಟಗಾರ ಶುಭಮನ್‌ ಗಿಲ್‌ ಅವರು ಏಕಕಾಲದಲ್ಲಿ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದ್ದು ಗಮನ ಸೆಳೆಯಿತು.

ಕೋಚ್‌ ರಾಹುಲ್‌ ದ್ರಾವಿಡ್ ಅವರ ಸಮ್ಮುಖದಲ್ಲಿ ಇಬ್ಬರೂ ಅಕ್ಕಪಕ್ಕದ ನೆಟ್ಸ್‌ನಲ್ಲಿ ಸುಮಾರು 30 ನಿಮಿಷ ಬ್ಯಾಟ್‌ ಮಾಡಿದರು. ಸ್ಪಿನ್ ಹಾಗೂ ವೇಗದ ಬೌಲರ್‌ಗಳ ಮುಂದೆ ಆಡಿದರು. ಆ ಬಳಿಕ ಕೆಲಹೊತ್ತು ಥ್ರೋಡೌನ್‌ಗಳನ್ನೂ ಎದುರಿಸಿದರು.

ADVERTISEMENT

47 ಟೆಸ್ಟ್‌ಗಳಿಂದ 33.44ರ ಸರಾಸರಿ ಹೊಂದಿರುವ ರಾಹುಲ್‌, ಈಚೆಗಿನ 5 ಟೆಸ್ಟ್‌ಗಳಲ್ಲಿ ಅಲ್ಪಮೊತ್ತಕ್ಕೆ ವಿಕೆಟ್‌ ಒಪ್ಪಿಸಿದ್ದರು. ಇದರಿಂದ ಟೀಕೆಗೆ ಗುರಿಯಾಗಿದ್ದರು. ಗಿಲ್‌ ಬದಲು ರಾಹುಲ್‌ಗೆ ಮತ್ತೆ ಮತ್ತೆ ಅವಕಾಶ ನೀಡಿದ್ದನ್ನು ಮಾಜಿ ಆಟಗಾರರು ಪ್ರಶ್ನಿಸಿದ್ದರು.

ಆದ್ದರಿಂದ ಬುಧವಾರ ಆರಂಭವಾಗುವ ಮೂರನೇ ಟೆಸ್ಟ್‌ಗೆ ಅಂತಿಮ ಇಲೆವೆನ್‌ನಲ್ಲಿ ಸ್ಥಾನ ಪಡೆಯಲು ರಾಹುಲ್‌– ಗಿಲ್‌ ನಡುವೆ ಸ್ಪರ್ಧೆ ಏರ್ಪಟ್ಟಿದೆ. ತಂಡದ ವ್ಯವಸ್ಥಾಪನ ಮಂಡಳಿಯು ಯಾರಿಗೆ ಅವಕಾಶ ನೀಡಲಿದೆ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಬಾರ್ಡರ್‌– ಗಾವಸ್ಕರ್‌ ಟೆಸ್ಟ್ ಸರಣಿಯಲ್ಲಿ ಭಾರತ ಈಗಾಗಲೇ 2–0 ಯಿಂದ ಮುನ್ನಡೆ ಸಾಧಿಸಿರುವುದರಿಂದ ಮೂರನೇ ಟೆಸ್ಟ್‌ಗೆ ತಂಡದಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂಬ ಮಾತುಗಳೂ ಕೇಳಿಬಂದಿವೆ. ಹಾಗಾದಲ್ಲಿ ಫಾರ್ಮ್‌ ಕಂಡುಕೊಳ್ಳಲು ರಾಹುಲ್‌ಗೆ ಕೊನೆಯ ಅವಕಾಶ ಸಿಗುವ ಸಾಧ್ಯತೆಯಿದೆ.

ರೋಹಿತ್‌ ಶರ್ಮ ಮತ್ತು ವಿರಾಟ್ ಕೊಹ್ಲಿ ನೆಟ್ಸ್‌ನಲ್ಲಿ ‘ಆಕ್ರಮಣಕಾರಿ’ ಮೂಡ್‌ನಲ್ಲಿದ್ದರು. ರೋಹಿತ್‌, ಪುಲ್‌, ಸ್ಟೀಪ್‌ ಮತ್ತು ರಿವರ್ಸ್‌ ಸ್ವೀಪ್‌ ಹೊಡೆತಗಳತ್ತ ಗಮನ ಹರಿಸಿದ್ದು ಕಂಡುಬಂತು.

ಕಳೆದ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್‌ನಲ್ಲೂ ಮಿಂಚಿದ್ದ ಆರ್‌.ಅಶ್ವಿನ್‌ ಮತ್ತು ಅಕ್ಷರ್‌ ಪಟೇಲ್‌ ಅವರು ಬೌಲಿಂಗ್‌ ಜತೆ ಬ್ಯಾಟಿಂಗ್‌ ಅಭ್ಯಾಸ ನಡೆಸುವತ್ತಲೂ ಗಮನ ಹರಿಸಿದರು. ಆಸ್ಟ್ರೇಲಿಯಾ ತಂಡದ ಆಟಗಾರರೂ ಪೂರ್ಣಪ್ರಮಾಣದ ತಾಲೀಮು ಕೈಗೊಂಡರು.

ಮೂರನೇ ಟೆಸ್ಟ್‌ನಲ್ಲಿ ಆಡುವೆ: ಸ್ಟಾರ್ಕ್‌
‘ಗಾಯದಿಂದ ಚೇತರಿಸಿಕೊಂಡಿದ್ದರೂ ಶೇ 100 ರಷ್ಟು ಫಿಟ್‌ನೆಸ್‌ ಪಡೆದುಕೊಂಡಿಲ್ಲ. ಆದರೂ ಮೂರನೇ ಟೆಸ್ಟ್‌ನಲ್ಲಿ ಕಣಕ್ಕಿಳಿಯಲಿದ್ದೇನೆ’ ಎಂದು ಆಸ್ಟ್ರೇಲಿಯಾ ತಂಡದ ವೇಗದ ಬೌಲರ್‌ ಮಿಷೆಲ್‌ ಸ್ಟಾರ್ಕ್‌ ಹೇಳಿದ್ದಾರೆ.

ನಾಯಕ ಪ್ಯಾಟ್‌ ಕಮಿನ್ಸ್‌ ಈ ಪಂದ್ಯಕ್ಕೆ ಅಲಭ್ಯರಾಗಿರುವ ಕಾರಣ, ಸ್ಟಾರ್ಕ್‌ ಅವರು ವೇಗದ ಬೌಲಿಂಗ್‌ ವಿಭಾಗಕ್ಕೆ ಬಲ ತುಂಬಲಿದ್ದಾರೆ.

'ಉತ್ತಮ ಲಯದಲ್ಲಿ ಬೌಲ್‌ ಮಾಡಲು ಆಗುತ್ತಿದೆ. ಆದರೂ ಒಮ್ಮೊಮ್ಮೆ ಅಲ್ಪ ಸಮಸ್ಯೆ ಎದುರಿಸುತ್ತೇನೆ. ಶೇ 100 ರಷ್ಟು ಫಿಟ್‌ನೆಸ್‌ ಹೊಂದಿಲ್ಲದೆ ಇದ್ದಾಗ ಈ ಹಿಂದೆ ಕೂಡಾ ಪಂದ್ಯಗಳನ್ನು ಆಡಿದ್ದೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.