ADVERTISEMENT

ನಿಂದನೆ: ಕ್ಷಮೆ ಕೋರಿದ ಮಾರ್ಕ್ ಬೌಷರ್‌

ಪಿಟಿಐ
Published 23 ಆಗಸ್ಟ್ 2021, 13:25 IST
Last Updated 23 ಆಗಸ್ಟ್ 2021, 13:25 IST
ಮಾರ್ಕ್ ಬೌಷರ್‌ -ಎಎಫ್‌ಪಿ ಚಿತ್ರ
ಮಾರ್ಕ್ ಬೌಷರ್‌ -ಎಎಫ್‌ಪಿ ಚಿತ್ರ   

ಜೊಹಾನ್ಸ್‌ಬರ್ಗ್‌: ಸಹ ಆಟಗಾರರನ್ನು ನಿಂದಿಸುವ ರೀತಿಯಲ್ಲಿ ‘ಬಣ್ಣಿಸಿ’ ಹಾಡು ರಚಿಸಿ ಹಾಡಿದ ಮತ್ತು ಅಡ್ಡಹೆಸರುಗಳ ಮೂಲಕ ಗೇಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಹಾಲಿ ಕೋಚ್‌ ಮಾರ್ಕ್ ಬೌಷರ್ ಕ್ಷಮೆ ಕೋರಿದ್ದಾರೆ.

ವರ್ಷಗಳ ಹಿಂದೆ ತಂಡದಲ್ಲಿ ಆಡುತ್ತಿದ್ದ ಸಂದರ್ಭದಲ್ಲಿ ನಡೆದ ಈ ಘಟನೆಯ ಹಿನ್ನೆಲೆಯಲ್ಲಿ ಪಾಲ್ ಆ್ಯಡಮ್ಸ್‌ ಒಳಗೊಂಡಂತೆ ಅನೇಕ ಆಟಗಾರರು ಬೌಷರ್ ಅವರನ್ನು ಟೀಕಿಸಿದ್ದರು. ಬೌಷರ್ ವರ್ಣಭೇದ ನೀತಿಯನ್ನು ಅನುಸರಿಸುತ್ತಿದ್ದರು ಎಂದು ದೂರಿದ್ದರು.

ಇದರ ಬೆನ್ನಲ್ಲೇ ಬೌಷರ್ ಅವರು ಕ್ರಿಕೆಟ್ ದಕ್ಷಿಣ ಆಫ್ರಿಕಾದ ಸಾಮಾಜಿಕ ನ್ಯಾಯ ಮತ್ತು ರಾಷ್ಟ್ರನಿರ್ಮಾಣ ಸಮಿತಿಗೆ 14 ಪುಟಗಳ ಅಫಿಡವಿಟ್ ಸಲ್ಲಿಸಿದ್ದಾರೆ. ಅದರ ಆಧಾರದಲ್ಲಿ ಇಎಸ್‌ಪಿಎನ್ ಕ್ರಿಕ್‌ಇನ್ಫೊ ವೆಬ್‌ಸೈಟ್ ಸುದ್ದಿ ಮಾಡಿದೆ.

ADVERTISEMENT

ಸಾಮಾಜಿಕ ನ್ಯಾಯ ಮತ್ತು ರಾಷ್ಟ್ರನಿರ್ಮಾಣ ಸಮಿತಿಗೆ ನೀಡಿರುವ ಹೇಳಿಕೆಯಲ್ಲಿ ತಮ್ಮನ್ನು ಗುರಿಯಾಗಿಸಿ ಹಾಡುಗಳನ್ನು ಹಾಡಲಾಗುತ್ತಿತ್ತು ಎಂದು ಆ್ಯಡಮ್ಸ್‌ ಹೇಳಿದ್ದಾರೆ. ಉತ್ತರಿಸಿರುವ ಬೌಷರ್ ತಾವು ಆ್ಯಡಮ್ಸ್‌ ಅವರನ್ನು ಅಡ್ಡ ಹೆಸರಿನಿಂದ ಕರೆಯುತ್ತಿರಲಿಲ್ಲ ಎಂದಿದ್ದಾರೆ.

‘ನಾನು ಮತ್ತು ತಂಡದ ಸಹ ಆಟಗಾರರು ತುಂಬ ಸೂಕ್ಷ್ಮವಾಗಿರಬೇಕಾಗಿತ್ತು. ನನ್ನಿಂದ ಯಾವುದಾದರೂ ತಪ್ಪು ಆಗಿದ್ದರೆ ಕ್ಷಮೆ ಕೋರುತ್ತೇನೆ’ ಎಂದು ಬೌಷರ್ ಅವರು ಅಫಿಡವಿಟ್‌ನಲ್ಲಿ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ತಂಡದಲ್ಲಿ 147 ಟೆಸ್ಟ್ ಮತ್ತು 295 ಏಕದಿನ ಪಂದ್ಯಗಳನ್ನು ಅವರು ಆಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.