ADVERTISEMENT

ಬಾಬರ್‌ ಆಜಂ ಶತಕ ವ್ಯರ್ಥ ಆಸ್ಟ್ರೇಲಿಯಕ್ಕೆ ಇನಿಂಗ್ಸ್ ಜಯ

ಏಜೆನ್ಸೀಸ್
Published 24 ನವೆಂಬರ್ 2019, 19:53 IST
Last Updated 24 ನವೆಂಬರ್ 2019, 19:53 IST

ಬ್ರಿಸ್ಬೇನ್‌: ಮೊದಲ ಎರಡು ಅವಧಿಯಲ್ಲಿ ಪ್ರತಿರೋಧವನ್ನು ಎದುರಿಸಿದ ಆಸ್ಟ್ರೇಲಿಯಾ ಭಾನುವಾರ ಅಂತಿಮವಾಗಿ ಪಾಕಿಸ್ತಾನ ವಿರುದ್ಧದ ಮೊದಲ ಕ್ರಿಕೆಟ್‌ ಟೆಸ್ಟ್‌ ಪಂದ್ಯವನ್ನು ಇನಿಂಗ್ಸ್‌ ಮತ್ತು ಐದು ರನ್‌ಗಳಿಂದ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು.

340 ರನ್‌ಗಳ ಮೊದಲ ಇನಿಂಗ್ಸ್‌ ಹಿನ್ನಡೆಯಿಂದ ಇನಿಂಗ್ಸ್‌ ಆರಂಭಿಸಿದ ಪ್ರವಾಸಿ ಪಾಕ್‌ ತಂಡ (ಶನಿವಾರ: 3 ವಿಕೆಟ್‌ಗೆ 64) ನಾಲ್ಕನೇ ದಿನದ ಮೊದಲ ಎರಡು ಅವಧಿಯಲ್ಲಿ ಹೋರಾಟ ತೋರಿತು. ಕೊನೆಯ ಅವಧಿಯಲ್ಲಿ ಕುಸಿಯಿತು. ಎರಡು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 1–0 ಮುನ್ನಡೆ ಪಡೆಯಿತು.

ಮೊದಲ ಇನಿಂಗ್ಸ್‌ನಲ್ಲಿ ಕೆಟ್ಟ ಹೊಡೆತಕ್ಕೆ ಹೋಗಿ ನಿರಾಶೆ ಅನುಭವಿಸಿದ್ದ ಬಾಬರ್‌ ಆಜಂ (104) ಈ ಬಾರಿ ಅದನ್ನು ಮರೆಮಾಚುವಂತೆ ಆಕರ್ಷಕ ಶತಕ ಗಳಿಸಿದರು. ವಿಕೆಟ್‌ ಕೀಪರ್‌ ಮೊಹಮ್ಮದ್‌ ರಿಜ್ವಾನ್‌ ಐದು ರನ್‌ಗಳಿಂದ ಚೊಚ್ಚಲ ಶತಕದ ಅವಕಾಶ ಕಳೆದುಕೊಂಡರು. ದಿನದಾಟ ಮುಗಿಯುವ ಸ್ವಲ್ಪ ಮೊದಲು ಪಾಕಿಸ್ತಾನ ಎರಡನೇ ಇನಿಂಗ್ಸ್‌ನಲ್ಲಿ 335 ರನ್‌ಗಳಿಗೆ ಆಲೌಟ್‌ ಆಯಿತು.

ADVERTISEMENT

ಬಾಬರ್‌ ಮತ್ತು ರಿಜ್ವಾನ್‌ 132 ರನ್‌ಗಳ ಶತಕದ ಜೊತೆಯಾಟದಲ್ಲೂ ಭಾಗಿಯಾದರು. ಲೆಗ್‌ ಸ್ಪಿನ್ನರ್‌ ಯಾಸಿರ್‌ ಷಾ ಕೂಡ ಹೋರಾಟದ 42 ರನ್‌ ಗಳಿಸಿದರು. ಇದು ಟೆಸ್ಟ್‌ನಲ್ಲಿ ಅವರ ಗರಿಷ್ಠ ವೈಯಕ್ತಿಕ ಮೊತ್ತ.

ಪಾಕಿಸ್ತಾನ ಮೇಲುಗೈ ಸಾಧಿಸುವ ಹಂತದಲ್ಲಿರುವಾಗ ವಿಕೆಟ್‌ಗಳನ್ನು ಗಳಿಸುವ ಮೂಲಕ ಆಸ್ಟ್ರೇಲಿಯಾ ಪದ್ಯ ಕೈಜಾರದಂತೆ ನೋಡಿಕೊಂಡಿತು. ಜೋಸ್‌ ಹೇಜಲ್‌ವುಡ್‌ 63 ರನ್ನಿಗೆ 4 ವಿಕೆಟ ಪಡೆದರೆ, ಮಿಷೆಲ್‌ ಸ್ಟಾರ್ಕ್‌ 73 ರನ್ನಿಗೆ 3 ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ತಾನ: 240 ಮತ್ತು 84.2 ಓವರುಗಳಲ್ಲಿ 335 (ಶಾನ್‌ ಮಸೂದ್‌ 42, ಬಾಬರ್‌ ಆಜಂ 104, ಮೊಹಮ್ಮದ್‌ ರಿಜ್ವಾನ್‌ 95, ಯಾಸಿರ್‌ ಷಾ 42; ಮಿಷೆಲ್‌ ಸ್ಟಾರ್ಕ್‌ 73ಕ್ಕೆ3, ಪಿ.ಜೆ.ಕುಮಿನ್ಸ್‌ 69ಕ್ಕೆ2, ಹೇಜಲ್‌ವುಡ್‌ 63ಕ್ಕೆ4); ಆಸ್ಟ್ರೇಲಿಯಾ: 580.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.