ADVERTISEMENT

ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌: ಒಂಬತ್ತನೇ ಸ್ಥಾನಕ್ಕೆ ಬೂಮ್ರಾ

ಪಿಟಿಐ
Published 8 ಸೆಪ್ಟೆಂಬರ್ 2021, 15:21 IST
Last Updated 8 ಸೆಪ್ಟೆಂಬರ್ 2021, 15:21 IST
ಜಸ್‌ಪ್ರೀತ್ ಬೂಮ್ರಾ– ಎಎಫ್‌ಪಿ ಚಿತ್ರ
ಜಸ್‌ಪ್ರೀತ್ ಬೂಮ್ರಾ– ಎಎಫ್‌ಪಿ ಚಿತ್ರ   

ದುಬೈ: ಇಂಗ್ಲೆಂಡ್‌ ಎದುರಿನ ನಾಲ್ಕನೇ ಟೆಸ್ಟ್‌ನಲ್ಲಿ ಪರಿಣಾಮಕಾರಿ ಬೌಲಿಂಗ್ ಮಾಡಿದ್ದ ಭಾರತದ ಜಸ್‌ಪ್ರೀತ್ ಬೂಮ್ರಾ ಅವರು ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನ ಬೌಲರ್‌ಗಳ ವಿಭಾಗದಲ್ಲಿ ಒಂಬತ್ತನೇ ಸ್ಥಾನಕ್ಕೇರಿದ್ದಾರೆ.

ಓವಲ್‌ನಲ್ಲಿ ನಡೆದ ಈ ಪಂದ್ಯದಲ್ಲಿ ವೇಗಿ ಬೂಮ್ರಾ ಎದುರಾಳಿ ತಂಡದ ಒಲಿ ಪೋಪ್‌ ಮತ್ತು ಜಾನಿ ಬೇಸ್ಟೊ ಅವರನ್ನು ಬೌಲ್ಡ್ ಮಾಡಿದ್ದರು. ಭಾರತ ಪಂದ್ಯವನ್ನು 157 ರನ್‌ಗಳಿಂದ ಗೆದ್ದುಕೊಂಡಿತ್ತು.

ಶಾರ್ದೂಲ್ ಠಾಕೂರ್ ಅವರು ಬ್ಯಾಟ್ಸ್‌ಮನ್‌ಗಳ ವಿಭಾಗದಲ್ಲಿ 59 ಸ್ಥಾನಗಳ ಬಡ್ತಿ ಪಡೆದು 79ನೇ ಸ್ಥಾನಕ್ಕೇರಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಅವರು 49ನೇ ಸ್ಥಾನದಲ್ಲಿದ್ದಾರೆ. ಬೌಲರ್‌ಗಳ ಪೈಕಿ ಅಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಅಗ್ರಸ್ಥಾನದಲ್ಲಿದ್ದು, ಭಾರತದ ಆರ್‌. ಅಶ್ವಿನ್ ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ADVERTISEMENT

ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಅಶ್ವಿನ್‌ ಅವರು ಒಂದು ಸ್ಥಾನ ಕುಸಿತ ಕಂಡು ಐದನೇ ಸ್ಥಾನದಲ್ಲಿದ್ದಾರೆ. ಜಡೇಜ ಮೂರನೇ ಸ್ಥಾನದಲ್ಲಿ ಸ್ಥಿರವಾಗಿದ್ದಾರೆ.

ಅಗ್ರ 10 ಮಂದಿ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇಂಗ್ಲೆಂಡ್‌ನ ಜೋ ರೂಟ್‌ ಮೊದಲ ಸ್ಥಾನದಲ್ಲಿದ್ದರೆ, ಭಾರತದ ರೋಹಿತ್ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಕ್ರಮವಾಗಿ ಐದು ಮತ್ತು ಆರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.