ADVERTISEMENT

ಸೂಪರ್ ಕಿಂಗ್ಸ್‌ಗೆ ಹ್ಯಾಟ್ರಿಕ್‌ ಗೆಲುವು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 1:04 IST
Last Updated 1 ಏಪ್ರಿಲ್ 2019, 1:04 IST
ರಾಜಸ್ಥಾನ್ ರಾಯಲ್ಸ್ ಎದುರಿನ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಬ್ಯಾಟಿಂಗ್ ವೈಖರಿ –ಎಎಫ್‌ಪಿ ಚಿತ್ರ
ರಾಜಸ್ಥಾನ್ ರಾಯಲ್ಸ್ ಎದುರಿನ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಬ್ಯಾಟಿಂಗ್ ವೈಖರಿ –ಎಎಫ್‌ಪಿ ಚಿತ್ರ   

ಚೆನ್ನೈ:‌ ಮಹೇಂದ್ರಸಿಂಗ್ ಧೋನಿ ಚೆನ್ನೈ ಅಭಿಮಾನಿಗಳಿಗೆ ಭರ ಪೂರ ಸಂತಸವನ್ನು ಉಣಬಡಿಸಿದರು. ಎಂ ಚಿದಂಬರಂ ಕ್ರೀಡಾಂಗಣದ ಪಿಚ್ ಕೂಡ ಪರೀಕ್ಷೆಯಲ್ಲಿ ಪಾಸ್ ಆಯಿತು.

ಭಾನುವಾರ ರಾತ್ರಿ ಇಲ್ಲಿ ನಡೆದ ಪಂದ್ಯದಲ್ಲಿ ಧೋನಿ (ಔಟಾಗದೆ 75; 46ಎಸೆತ, 4ಬೌಂಡರಿ, 4ಸಿಕ್ಸರ್‌) ನಾಯಕನಿಗೆ ತಕ್ಕ ಆಟವಾಡಿದರು. ಅವರ ಅಮೋಘ ಬ್ಯಾಟಿಂಗ್ ಮತ್ತು ಬೌಲರ್‌ಗಳ ಕರಾರುವಾಕ್ ದಾಳಿಯ ನೆರವಿನಿಂದ ಚೆನ್ನೈ ಸೂಪ‍ರ್ ಕಿಂಗ್ಸ್‌ ತಂಡ ರಾಜಸ್ಥಾನ್ ರಾಯಲ್ಸ್‌ ಎದುರು ಎಂಟು ರನ್‌ಗಳಿಂದ ಗೆದ್ದಿತು. ಇದು ತಂಡದ ಸತತ ಮೂರನೇ ಗೆಲುವು.

176 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ರಾಯಲ್ಸ್‌ ತಂಡ ರಾಹುಲ್ ತ್ರಿಪಾಠಿ ಮತ್ತು ಬೆನ್‌ ಸ್ಟೋಕ್ಸ್ ಅವರ ದಿಟ್ಟ ಆಟದಿಂದಾಗಿ ಗೆಲುವಿನ ಹಾದಿಯಲ್ಲಿ ಹೆಜ್ಜೆ ಹಾಕಿತ್ತು. ಆದರೆ ಅಂತಿಮ ಓವರ್‌ನಲ್ಲಿ ಡ್ವೇನ್‌ ಬ್ರಾವೊ ಪರಿಣಾಮಕಾರಿ ಬೌಲಿಂಗ್ ಮಾಡಿ ಎದುರಾಳಿ ತಂಡದವರನ್ನು ನಿಯಂತ್ರಿಸಿದರು.

ADVERTISEMENT

ಟಾಸ್ ಗೆದ್ದ ರಾಯಲ್ಸ್ ಬಳಗ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಎರಡನೇ ಓವರ್‌ನಲ್ಲಿ ಅಂಬಟಿ ರಾಯುಡು ಔಟಾದರು. ನಾಲ್ಕನೇ ಓವರ್‌ನಲ್ಲಿ ಶೇನ್ ವಾಟ್ಸನ್ ಕೂಡ ಡಗ್‌ಔಟ್ ಸೇರಿದರು.

ಸುರೇಶ್ ರೈನಾ ಜೊತೆಗೂಡಿದ ಧೋನಿ ನಿಧಾನವಾಗಿ ಇನಿಂಗ್ಸ್‌ ಕಟ್ಟಿದರು. 14ನೇ ಓವರ್‌ನಲ್ಲಿ ರೈನಾ ಔಟಾದ ನಂತರ ಏಕಾಂಗಿ ಹೋರಾಟ ನಡೆಸಿದರು.

ಸಂಕ್ಷಿಪ್ತ ಸ್ಕೋರು
ಚೆನ್ನೈ ಸೂಪರ್‌ ಕಿಂಗ್ಸ್‌: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 175 (ಶೇನ್ ವಾಟ್ಸನ್ 13, ಸುರೇಶ್ ರೈನಾ 36, ಮಹೇಂದ್ರಸಿಂಗ್ ಧೋನಿ ಔಟಾಗದೆ 75, ಡ್ವೇನ್ ಬ್ರಾವೊ 27, ರವೀಂದ್ರ ಜಡೇಜ ಔಟಾಗದೆ 8; ಜೋಫ್ರಾ ಆರ್ಚರ್ 17ಕ್ಕೆ2, ಧವಳ್ ಕುಲಕರ್ಣಿ 37ಕ್ಕೆ1, ಬೆನ್ ಸ್ಟೋಕ್ಸ್‌ 30ಕ್ಕೆ1)
ರಾಜಸ್ಥಾನ್ ರಾಯಲ್ಸ್‌: 20 ಓವರ್‌ಗಳಲ್ಲಿ 8ಕ್ಕೆ 167 (ರಾಹುಲ್ ತ್ರಿಪಾಠಿ 39, ಸ್ಟೀವ್ ಸ್ಮಿತ್‌ 28, ಬೆನ್ ಸ್ಟೋಕ್ಸ್ 46, ಜೊಫ್ರಾ ಆರ್ಚರ್ ಔಟಾಗದೆ 24; ದೀಪಕ್‌ ಚಾಹರ್‌ 19ಕ್ಕೆ2, ಶಾರ್ದೂಲ್ ಠಾಕೂರ್ 42ಕ್ಕೆ2, ಇಮ್ರಾನ್ ತಾಹಿರ್ 23ಕ್ಕೆ2, ಡ್ವೇನ್ ಬ್ರಾವೊ 32ಕ್ಕೆ2).
ಫಲಿತಾಂಶ: ಚೆನ್ನೈ ಸೂಪರ್‌ ಕಿಂಗ್ಸ್‌ಗೆ 8 ರನ್‌ಗಳ ಜಯ.
ಪಂದ್ಯಶ್ರೇಷ್ಠ: ಮಹೇಂದ್ರ ಸಿಂಗ್ ಧೋನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.