ADVERTISEMENT

ಸುರೇಶ್ ರೈನಾರನ್ನು ಏಕೆ ಖರೀದಿಸಲಿಲ್ಲ? ಸತ್ಯ ಬಿಚ್ಚಿಟ್ಟ ಸಿಎಸ್‌ಕೆ ಸಿಇಒ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಫೆಬ್ರುವರಿ 2022, 12:21 IST
Last Updated 15 ಫೆಬ್ರುವರಿ 2022, 12:21 IST
ಸುರೇಶ್ ರೈನಾ: ಎಎಫ್‌ಪಿ ಚಿತ್ರ
ಸುರೇಶ್ ರೈನಾ: ಎಎಫ್‌ಪಿ ಚಿತ್ರ   

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತಮ್ಮ ಹೊಡಿಬಡಿ ಆಟದ ಮೂಲಕ ಗಮನ ಸೆಳೆಯುತ್ತಿದ್ದ ಮಧ್ಯಮ ಕ್ರಮಾಂಕದ ಬ್ಯಾಟರ್ ಸುರೇಶ್ ರೈನಾ ಅವರು, ಈ ಬಾರಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಸೇಲ್ ಆಗದೆ ಉಳಿದುಕೊಂಡರು. ಹಲವು ವರ್ಷಗಳಿಂದ ಸ್ಫೋಟಕ ಬ್ಯಾಟಿಂಗ್ ಮೂಲಕ ಚೆನ್ನೈ ತಂಡದ ಪರ ಗಮನ ಸೆಳೆದಿದ್ದ ರೈನಾ ಅವರನ್ನು ಖರೀದಿಸದಿರುವುದು ಅಭಿಮಾನಿಗಳಲ್ಲಿ ಭಾರೀ ಅಚ್ಚರಿ ಮೂಡಿಸಿದೆ.

2008ರಿಂದ 2015 ಮತ್ತು 2018ರಿಂದ 2021ರವರೆಗೆ ರೈನಾ ಚೆನ್ನೈ ಪರ ಆಡಿದ್ದರು. 205 ಐಪಿಎಲ್ ಪಂದ್ಯಗಳನ್ನು ಆಡಿರುವ ಅವರು 5,528 ರನ್ ಗಳಿಸುವ ಮೂಲಕ ಐಪಿಎಲ್‌ನಲ್ಲಿ ಅಧಿಕ ರನ್ ಕಲೆ ಹಾಕಿದ ಐದನೇ ಆಟಗಾರರೆನಿಸಿದ್ದಾರೆ. ಸಿಎಸ್‌ಕೆ ಪರ 4,687 ರನ್ ಸಿಡಿಸಿದ್ದಾರೆ.

ರೈನಾ ಅವರನ್ನು ಖರೀದಿಸದ ಬಗ್ಗೆ ಯೂಟ್ಯೂಬ್‌ನಲ್ಲಿ ಪ್ರತಿಕ್ರಿಯಿಸಿರುವ ಚೆನ್ನೈ ತಂಡದ ಸಿಇಒ ಕಾಶಿ ವಿಶ್ವನಾಥ್, ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ADVERTISEMENT

‘ಕಳೆದ 12 ವರ್ಷಗಳಿಂದ ರೈನಾ ಸಿಎಸ್‌ಕೆ ತಂಡದಲ್ಲಿ ಅತ್ಯಂತ ಸ್ಥಿರವಾದ ಪ್ರದರ್ಶನ ನೀಡಿದ್ದಾರೆ. ಆದರೆ, ಈ ಬಾರಿ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳದ ಕಠಿಣ ಸ್ಥಿತಿ ಬಗ್ಗೆ ಬೇಸರವಿದೆ. ಪಂದ್ಯದ ಸಂಯೋಜನೆ ಆಟಗಾರರ ಫಾರ್ಮ್ ಮೇಲೆ ಆಧಾರಿತವಾಗಿರುತ್ತದೆ ಎಂಬುದನ್ನು ನೀವು ಮರೆಯುವಂತಿಲ್ಲ’ಎಂದು ಹೇಳುವ ಮೂಲಕ ಕಳಪೆ ಫಾರ್ಮ್‌ನಲ್ಲಿದ್ದ ರೈನಾ ಅವರನ್ನು ಖರೀದಿಸಿಲ್ಲ ಎಂದು ಕಾಶಿ ವಿಶ್ವಾನಾಥ್ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ವೇಗಿ ದೀಪಕ್ ಚಾಹರ್ ಅವರನ್ನು ₹14 ಕೋಟಿಗೆ ಚೆನ್ನೈ ತಂಡ ಖರೀದಿಸಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಬೆಲೆಗೆ ಬಿಕರಿಯಾದ ಭಾರತದ ಬೌಲರ್ ಆಗಿ ಚಾಹರ್ ಹೊರಹೊಮ್ಮಿದ್ದಾರೆ.

ಅಂಬಟಿ ರಾಯುಡು, ಬ್ರಾವೊ, ಉತ್ತಪ್ಪ ಅವರನ್ನು ಕ್ರವಾಗಿ ₹6.75 ಕೋಟಿ, ₹ 4.40 ಕೋಟಿ ಮತ್ತು ₹ 2 ಕೋಟಿಗೆ ಖರೀದಿಸಲಾಗಿದೆ.

ಈ ಮಧ್ಯೆ, ಕಳೆದ ಸೀಸನ್ನನಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದಕ್ಷಿಣ ಆಫ್ರಿಕಾದ ಆಟಗಾರ ಫಪ್ ಡು ಡುಪ್ಲೆಸಿ ಅವರನ್ನು ಖರೀದಿಸಲಾಗದ ಬಗ್ಗೆ ಸಿಇಒ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಕಳೆದ ದಶಕದಿಂದ ಫಫ್ ನಮ್ಮ ಜೊತೆಗಿದ್ದರು. ನಾವು ಖಂಡಿತಾ ಅವರನ್ನು ಮಿಸ್ ಮಾಡಿಕೊಳ್ಳುತ್ತೇವೆ. ಹರಾಜಿನ ಪ್ರಕ್ರಿಯೆಯಲ್ಲಿ ಇದು ಸಾಮಾನ್ಯ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.