ADVERTISEMENT

ಐಪಿಎಲ್ ಟೂರ್ನಿಗೆ ಸುರೇಶ್ ರೈನಾ ಇಲ್ಲ

ಏಜೆನ್ಸೀಸ್
Published 29 ಆಗಸ್ಟ್ 2020, 10:40 IST
Last Updated 29 ಆಗಸ್ಟ್ 2020, 10:40 IST
ಸುರೇಶ್ ರೈನಾ –ಎಎಫ್‌ಪಿ ಚಿತ್ರ
ಸುರೇಶ್ ರೈನಾ –ಎಎಫ್‌ಪಿ ಚಿತ್ರ   

ದುಬೈ: ಇಬ್ಬರು ಆಟಗಾರರು ಮತ್ತು ನೆರವು ಸಿಬ್ಬಂದಿಗೆ ಕೋವಿಡ್ ದೃಢವಾದ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೊಂದು ಆಘಾತವಾಗಿದೆ. ತಂಡದ ಪ್ರಮುಖ ಬ್ಯಾಟ್ಸ್‌ಮನ್ ಸುರೇಶ್ ರೈನಾ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಕ್ರಿಕೆಟ್ ಟೂರ್ನಿಯ ಈ ಆವೃತ್ತಿಯಲ್ಲಿ ಆಡದೇ ಇರಲು ನಿರ್ಧರಿಸಿದ್ದಾರೆ.

‘ವೈಯಕ್ತಿಕ‘ ಕಾರಣಗಳಿಂದ ಆಡುತ್ತಿಲ್ಲ ಎಂದು ರೈನಾ ಹೇಳಿದ್ದಾರೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ತಂಡದ ಮೇಲೆ ರೈನಾ ಅವರ ನಿರ್ಧಾರದಿಂದ ಒತ್ತಡ ಹೆಚ್ಚಾಗಿದ್ದು ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಪಾಲ್ಗೊಳ್ಳುವುದರ ಮೇಲೆ ಸದೇಹ ಮೂಡಿದೆ.

ತಂಡದ ಇಬ್ಬರು ಆಟಗಾರರು ಮತ್ತು ಎಂಟು ಮಂದಿ ನೆರವು ಸಿಬ್ಬಂದಿಗೆ ಕೋವಿಡ್ ಇರುವುದು ಶುಕ್ರವಾರ ದೃಢಪಟ್ಟಿದ್ದು ಅವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಆದರೆ ಈ ಕುರಿತು ತಂಡ ಅಧಿಕೃತವಾಗಿ ಮಾಹಿತಿ ಬಿಡುಗಡೆ ಮಾಡಲಿಲ್ಲ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಿಡುಗಡೆ ಮಾಡಿರುವ ಮಾಹಿತಿಯ ಆಧಾರದಲ್ಲಿ ಶುಕ್ರವಾರ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

ADVERTISEMENT

‘ವೈಯಕ್ತಿಕ ಕಾರಣಗಳಿಂದ ಸುರೇಶ್ ರೈನಾ ತವರಿಗೆ ಮರಳಿದ್ದಾರೆ. ಹೀಗಾಗಿ ಅವರು ಐಪಿಎಲ್ ಟೂರ್ನಿಯ ಯಾವ ಪಂದ್ಯಕ್ಕೂ ಲಭ್ಯ ಇರುವುದಿಲ್ಲ. ಅವರಿಗೂ ಅವರ ಕುಟುಂಬಕ್ಕೂ ಚೆನ್ನೈ ಸೂಪರ್ ಕಿಂಗ್ಸ್‌ನ ಪೂರ್ಣ ಬೆಂಬಲವಿದೆ’ ಎಂದು ತಂಡ ಟ್ವೀಟ್ ಮಾಡಿದೆ. ಆದರೆ ಕೋವಿಡ್‌ನಿಂದಾಗಿ ಅವರು ಮರಳಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

ಐಪಿಎಲ್‌ಗೆ ಸಜ್ಜಾಗಿರುವ ತಂಡಗಳ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ ಮಾತ್ರ ಭಾರತದಲ್ಲಿ ಅಭ್ಯಾಸ ನಡೆಸಿತ್ತು. ತವರು ಅಂಗಣವಾದ ಚೆನ್ನೈನಲ್ಲಿ ಅಭ್ಯಾಸ ಮಾಡಿದ್ದೇ ಸೋಂಕು ತಗುಲಲು ಕಾರಣವೇ ಎಂಬ ಸಂದೇಹಗಳು ಎದ್ದಿದ್ದು ಆತುರದಿಂದ ಅಭ್ಯಾಸ ನಡೆಸಿದ್ದು ಪ್ರಮಾದವಾಯಿತೇ ಎಂಬ ಪ್ರಶ್ನೆ ಏಳುವಂತೆ ಮಾಡಿದೆ.

ಮಾರ್ಚ್ ತಿಂಗಳಲ್ಲಿ ನಡೆಯಬೇಕಾಗಿದ್ದ ಟೂರ್ನಿಯನ್ನು ಕೋವಿಡ್‌–19ರಿಂದಾಗಿ ಮುಂದೂಡಲಾಗಿತ್ತು. ನಂತರ ಯುಎಇಯಲ್ಲಿ ಆಯೋಜಿಸಲು ನಿರ್ಧರಿಸಲಾಯಿತು. ಸೆಪ್ಟೆಂಬರ್ 19ರಂದು ಟೂರ್ನಿಗೆ ಚಾಲನೆ ಸಿಗಲಿದ್ದು ನವೆಂಬರ್ 10ರ ವರೆಗೆ ನಡೆಯಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಲಿವೆ. ಕಳೆದ ಬಾರಿಯ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್‌ಗೆ ಚೆನ್ನೈ ತಂಡ ಮಣಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.