ADVERTISEMENT

ಕ್ರಿಕೆಟ್: ಆಯ್ಕೆ ಸಮಿತಿಗೆ ಮತ್ತೆ ಚೇತನ್ ಶರ್ಮಾ ಮುಖ್ಯಸ್ಥ

​ಪ್ರಜಾವಾಣಿ ವಾರ್ತೆ
Published 7 ಜನವರಿ 2023, 14:43 IST
Last Updated 7 ಜನವರಿ 2023, 14:43 IST
ಚೇತನ್ ಶರ್ಮಾ 
ಚೇತನ್ ಶರ್ಮಾ    

ನವದೆಹಲಿ (ಪಿಟಿಐ): ಮಾಜಿ ಕ್ರಿಕೆಟಿಗ ಚೇತನ್ ಶರ್ಮಾ ಅವರನ್ನು ಮತ್ತೆ ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಗೆ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.

ಹೋದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಸೆಮಿಫೈನಲ್‌ನಲ್ಲಿ ಸೋತಿತ್ತು. ಅದರ ನಂತರದ ಬೆಳವಣಿಗೆಯಲ್ಲಿ ಚೇತನ್ ಅವರೇ ಮುಖ್ಯಸ್ಥರಾಗಿದ್ದ ಆಯ್ಕೆ ಸಮಿತಿಯನ್ನು ವಜಾಗೊಳಿಸಲಾಗಿತ್ತು. ಆದರೆ ಈಗ ಮರಳಿ ಅವರನ್ನೇ ನೇಮಕ ಮಾಡಲಾಗಿದೆ. 57 ವರ್ಷದ ಚೇತನ್ ಅವರು ಮರುಆಯ್ಕೆಯಾಗುವ ಕುರಿತು ಈಚೆಗೆ ಸುದ್ದಿಗಳು ಹರಿದಾಡಿದ್ದವು.

ಆದರೆ ಈ ಸಮಿತಿಯ ವಲಯ ಪ್ರತಿನಿಧಿಗಳು ಹಳೆಯ ಸಮಿತಿಯಲ್ಲಿದ್ದವರಲ್ಲಿ ಯಾರೂ ಇಲ್ಲ. ಈ ಮೊದಲು ಇದ್ದ ಹರವಿಂದರ್ ಸಿಂಗ್ ಅವರು ಪುನರಾಯ್ಕೆ ಬಯಸಿ ಅರ್ಜಿ ಹಾಕಿದ್ದರು. ಆದರೆ ಅವರು ಸಂದರ್ಶನದಲ್ಲಿ ತೃಪ್ತಿಕರ ಮಟ್ಟದಲ್ಲಿ ಅಂಕ ಪಡೆಯಲಿಲ್ಲ ಎನ್ನಲಾಗಿದೆ.

ADVERTISEMENT

ದಕ್ಷಿಣ ವಲಯದಿಂದ ತಮಿಳುನಾಡಿನ ಪ್ರಥಮದರ್ಜೆ ಆಟಗಾರರಾಗಿದ್ದ ಎಸ್‌. ಶರತ್ ಅವರನ್ನು ಆಯ್ಕೆ ಮಾಡಲಾಗಿದೆ. ರಾಷ್ಟ್ರೀಯ ಜೂನಿಯರ್ ಆಯ್ಕೆ ಸಮಿತಿಯಲ್ಲಿದ್ದ ಅವರಿಗೆ ಬಡ್ತಿ ಲಭಿಸಿದಂತಾಗಿದೆ.

ಪೂರ್ವ ವಲಯದಿಂದ ಸುಬ್ರತೊ ಬ್ಯಾನರ್ಜಿ, ಪಶ್ಚಿಮ ವಲಯದಿಂದ ಸಲೀಲ್ ಅಂಕೋಲಾ ಮತ್ತು ಕೇಂದ್ರ ವಲಯದಿಂದ ಶಿವಸುಂದರ್ ದಾಸ್ ಅವರನ್ನು ಆಯ್ಕೆ ಮಾಡಲಾಗಿದೆ.

‘ಐದು ಸ್ಥಾನಗಳಿಗಾಗಿ ಸುಮಾರು 600 ಅರ್ಜಿಗಳು ಸಲ್ಲಿಕೆಯಾಗಿದ್ದವು. 2022ರ ನವೆಂಬರ್ 18ರಂದು ಬಿಸಿಸಿಐ ವೆಬ್‌ಸೈಟ್‌ನಲ್ಲಿ ಅರ್ಜಿ ಅಹ್ವಾನಿಸಸಲಾಗಿತ್ತು’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.

‘ಕ್ರಿಕೆಟ್ ಸಲಹಾ ಸಮಿತಿಯು (ಸಿಎಸಿ) ವೈಯಕ್ತಿಕ ಸಂದರ್ಶನಕ್ಕಾಗಿ 11 ಅಭ್ಯರ್ಥಿಗಳನ್ನು ಅಂತಿಮಗೊಳಿಸಿತ್ತು. ಸಂದರ್ಶನದ ನಂತರ ಆಯ್ಕೆಪಟ್ಟಿಯನ್ನು ಸಿಎಸಿಯು ಶಿಫಾರಸು ಮಾಡಿತ್ತು’ ಎಂದು ತಿಳಿಸಿದರು.

ಭಾರತ ತಂಡದ ಮಾಜಿ ವೇಗದ ಬೌಲರ್ ಚೇತನ್ 23 ಟೆಸ್ಟ್ ಹಾಗೂ 65 ಏಕದಿನ ಪಂದ್ಯಗಳಲ್ಲಿ ಆಡಿರುವ ಅನುಭವಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.