ADVERTISEMENT

ಚೆಂಡಿನ ಹೊಳಪಿಗೆ ಪರ್ಯಾಯ ದಾರಿ ಇದ್ದೇ ಇರುತ್ತದೆ: ಕ್ರಿಸ್ ವೋಕ್ಸ್

ಪಿಟಿಐ
Published 23 ಮೇ 2020, 19:38 IST
Last Updated 23 ಮೇ 2020, 19:38 IST
ಕ್ರಿಸ್ ವೋಕ್ಸ್ –ಎಎಫ್‌ಪಿ ಚಿತ್ರ
ಕ್ರಿಸ್ ವೋಕ್ಸ್ –ಎಎಫ್‌ಪಿ ಚಿತ್ರ   

ಲಂಡನ್: ಚೆಂಡಿನ ಹೊಳಪಿಗಾಗಿ ಎಂಜಲು ಸವರುವುದನ್ನು ನಿಷೇಧಿಸಿದರೂ ಬೌಲರ್‌ಗಳು ಬೇರೆ ಯಾವುದಾದರೂ ದಾರಿ ಕಂಡುಕೊಳ್ಳಲಿದ್ದಾರೆ ಎಂದು ಇಂಗ್ಲೆಂಡ್‌ ಕ್ರಿಕೆಟ್ ತಂಡದ ಆಲ್‌ರೌಂಡರ್ ಕ್ರಿಸ್ ವೋಕ್ಸ್ ಅಭಿಪ್ರಾಯಪಟ್ಟಿದ್ದಾರೆ.

‘ಚೆಂಡಿಗೆ ಎಂಜಲು ಸವರುವುದು ಬೌಲರ್‌ಗಳಿಗೆ ಅಭ್ಯಾಸವಾಗಿದೆ. ಅದರಿಂದ ಹೊರಬರಲು ಕೆಲವು ಕಾಲ ಬೇಕಾದೀತು. ಬೌಲರ್‌ಗಳಿಗೆ ಇದು ಕಠಿಣ ಸಮಯ’ ಎಂದು ಅವರು ಹೇಳಿರುವುದಾಗಿ ‘ವಿಸ್ಡನ್’ ವರದಿ ಮಾಡಿದೆ.

‘ಎಂಜಲು ಮತ್ತು ಬೆವರು ತಾಗಿಸದೆಯೂ ಚೆಂಡಿಗೆ ಹೊಳಪು ನೀಡಬಹುದು. ಪ್ಯಾಂಟಿಗೆ ಚೆನ್ನಾಗಿ ಉಜ್ಜಿದರೂ ಚೆಂಡು ಸ್ವಲ್ಪ ಸ್ವಿಂಗ್ ಆಗಬಲ್ಲುದು. ಇನ್ನೂ ಯಾವುದಾದರೂ ಉಪಾಯ ಹೊಳೆದರೂ ಹೊಳೆಯಬಹುದು. ಆದ್ದರಿಂದ ಬೌಲರ್‌ಗಳು ಚಿಂತೆ ಮಾಡುವ ಅಗತ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.

ADVERTISEMENT

ಕೊರೊನಾ ಹಾವಳಿ ಆರಂಭವಾದ ನಂತರ ಚೆಂಡಿಗೆ ಎಂಜಲು ಸವರುವ ವಿಷಯದಲ್ಲಿ ಭಾರಿ ಚರ್ಚೆ ನಡೆದಿತ್ತು. ಎಂಜಲು ನಿಷೇಧಿಸಬೇಕು ಎಂದು ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್ ಸಮಿತಿಯು ಈ ವಾರದ ಆರಂಭದಲ್ಲಿ ಶಿಫಾರಸು ಮಾಡಿತ್ತು. ಇದನ್ನು ಮಾನ್ಯ ಮಾಡಿ ಐಸಿಸಿ ಶುಕ್ರವಾರ ಆದೇಶ ಹೊರಡಿಸಿದೆ.

ನಿಷೇಧ ಕಷ್ಟ ಸಾಧ್ಯ

ಮುಂಬೈ: ಚೆಂಡಿಗೆ ಎಂಜಲು ಸವರುವುದರ ಮೇಲಿನ ನಿಷೇಧ ಜಾರಿಗೆ ತರುವುದು ಕಷ್ಟ ಸಾಧ್ಯ ಎಂದು ಆಸ್ಟ್ರೇಲಿಯಾದ ಹಿರಿಯ ಬೌಲರ್ ಬ್ರೆಟ್ ಲೀ ಅಭಿಪ್ರಾಯಪಟ್ಟಿದ್ದಾರೆ.

‘ಎಂಜಲು ನಿಷೇಧ ಮಾಡಿರುವುದು ಶ್ಲಾಘನೀಯ. ಆದರೆ ಸಣ್ಣ ವಯಸ್ಸಿನಲ್ಲೇ ಮಾಡಿರುವ ಅಭ್ಯಾಸದಿಂದ ಹೊರಬರುವುದು ಬಲು ಕಷ್ಟ. ಆದ್ದರಿಂದ ಪದೇಪದೇ ಎಚ್ಚರಿಕೆ ನೀಡುವ ಅನಿವಾರ್ಯ ಸ್ಥಿತಿ ಅಂಗಣದಲ್ಲಿ ಉಂಟಾಗಬಹುದು’ ಎಂದು ಅವರು ಸ್ಟಾರ್ ಸ್ಪೋರ್ಟ್ಸ್ ಏರ್ಪಡಿಸಿದ್ದ ‘ಕ್ರಿಕೆಟ್ ಕನೆಕ್ಟೆಡ್’ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.