
ಬೆಂಗಳೂರು: ಕಾರ್ತಿಕೇಯ ಕೆ.ಪಿ. ಅವರ ಅಜೇಯ ಶತಕದ ನೆರವಿನಿಂದ ಕರ್ನಾಟಕ ತಂಡವು ಕರ್ನಲ್ ಸಿ.ಕೆ.ನಾಯ್ದು ಟ್ರೋಫಿ ಕ್ರಿಕೆಟ್ (23 ವರ್ಷದೊಳಗಿನವರ) ಟೂರ್ನಿಯ ಪಂದ್ಯದಲ್ಲಿ ಚಂಡೀಗಢ ವಿರುದ್ಧ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ.
ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎಲೀಟ್ ಡಿ ಗುಂಪಿನ ಪಂದ್ಯದಲ್ಲಿ ಮೊದಲ ದಿನದಾಟಕ್ಕೆ ಆತಿಥೇಯ ತಂಡವು 91 ಓವರ್‌ಗಳಲ್ಲಿ ಎರಡು ವಿಕೆಟ್‌ಗೆ 369 ರನ್ ಕಲೆಹಾಕಿದೆ. ಎದುರಾಳಿ ಬೌಲರ್‌ಗಳ ದಾಳಿಯನ್ನು ಧ್ವಂಸಗೊಳಿಸಿದ ಕಾರ್ತಿಕೇಯ 181 ಎಸೆತಗಳಲ್ಲಿ ಔಟಾಗದೇ 155 ರನ್ ಚಚ್ಚಿದರು. ಅವರ ಇನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು 9 ಸಿಕ್ಸರ್‌ಗಳು ಸೇರಿದ್ದವು.
ಆರಂಭ ಆಟಗಾರ ಪ್ರಖರ್ ಚತುರ್ವೇದಿ (95;114, 4x13) ಅವರು ಕೇವಲ 5 ರನ್‌ಗಳ ಅಂತರದಿಂದ ಶತಕ ವಂಚಿತರಾದರು. ಅವರು ಮತ್ತು ಫೈಜಾನ್ ಖಾನ್ (45;90) ಮೊದಲ ವಿಕೆಟ್ ಜೊತೆಯಾಟದಲ್ಲಿ 114 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಅವರ ನಿರ್ಗಮನದ ಬಳಿಕ ಕಾರ್ತಿಕೇಯ ಮತ್ತು ಧ್ರುವ್ ಪ್ರಭಾಕರ್ (ಔಟಾಗದೇ 70;131ಎ, 4x6, 6x1) ಮುರಿಯದ ಮೂರನೇ ವಿಕೆಟ್ ಜೊತೆಯಾಟಕ್ಕೆ 210 ರನ್ ಸೇರಿಸಿ, ಎರಡನೇ ದಿನಕ್ಕೆ ಆಟವನ್ನು ಕಾಯ್ದುಕೊಂಡಿದ್ದಾರೆ.
ಚಂಡೀಗಢದ ಶಾಹಿಲ್ ಕುಮಾರ್ ಮತ್ತು ದೇವಾಂಗ್ ಕೌಶಿಕ್ ತಲಾ ಒಂದು ವಿಕೆಟ್ ಪಡೆದರು.
ಅನೀಶ್ವರ್ ಗೌತಮ್ ನಾಯಕತ್ವದ ಕರ್ನಾಟಕ ತಂಡವು (18 ಅಂಕ) ಹಾಲಿ ಆವೃತ್ತಿಯಲ್ಲಿ ಒಂದು ಗೆಲುವು, ಒಂದು ಡ್ರಾ ಹಾಗೂ ಮತ್ತೊಂದು ಸೋಲಿನೊಂದಿಗೆ ಎಲೀಟ್ ಡಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಚಂಡೀಗಢ (18) ತಂಡವು ಕೊನೆಯ ಸ್ಥಾನದಲ್ಲಿದೆ.
ಸಂಕ್ಷಿಪ್ತ ಸ್ಕೋರ್: ಕರ್ನಾಟಕ: 91 ಓವರ್‌ಗಳಲ್ಲಿ 2 ವಿಕೆಟ್‌ಗೆ 369 (ಪ್ರಖರ್ ಚತುರ್ವೇದಿ 95, ಫೈಜಾನ್ ಖಾನ್ 45, ಕಾರ್ತಿಕೇಯ ಕೆ.ಪಿ. ಔಟಾಗದೇ 155, ಧ್ರುವ್ ಪ್ರಭಾಕರ್ ಔಟಾಗದೇ 90) ವಿರುದ್ಧ ಚಂಡೀಗಢ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.