ADVERTISEMENT

ಫಿಶ್ ಟ್ಯಾಂಕ್ ಬಿದ್ದು ಬಲಗೈಗೆ ಗಾಯ: ಶಸ್ತ್ರಚಿಕಿತ್ಸೆಗೊಳಗಾದ ಜೋಫ್ರಾ ಆರ್ಚರ್

ರಾಯಿಟರ್ಸ್
Published 30 ಮಾರ್ಚ್ 2021, 3:25 IST
Last Updated 30 ಮಾರ್ಚ್ 2021, 3:25 IST
ಜೊಫ್ರಾ ಆರ್ಚರ್ 
ಜೊಫ್ರಾ ಆರ್ಚರ್    

ಲಂಡನ್: ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೋಫ್ರಾ ಆರ್ಚರ್ ಫಿಶ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ಸಂಭವಿಸಿದ ಅವಘಡದಲ್ಲಿ ಗಾಯಗೊಂಡಿದ್ದು, ತನ್ನ ಬಲಗೈ ಸ್ನಾಯುವಿಗೆ ಚುಚ್ಚಿಕೊಂಡಿದ್ದ ಗಾಜಿನ ತುಂಡನ್ನು ಹೊರತೆಗೆಯಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ನಿರ್ದೇಶಕ ಆಶ್ಲೇ ಗೈಲ್ಸ್ ಹೇಳಿದ್ದಾರೆ.

ಆರ್ಚರ್ ಅವರಿಗೆ ಜನವರಿಯಲ್ಲೇ ಗಾಯವಾಗಿದ್ದರೂ ಸಹ ಭಾರತ ವಿರುದ್ಧದ ಟೆಸ್ಟ್ ಮತ್ತು ಟಿ 20 ಸರಣಿಯಲ್ಲಿ ಆಡಿದ್ದರು.

‘ಕೈಯಲ್ಲಿ ಹಿಡಿದಿದ್ದ ಫಿಶ್ ಟ್ಯಾಂಕ್ ಅನ್ನು ಅವರು ಅಚಾನಕ್ ಆಗಿ ಕೆಳಗೆ ಬಿಟ್ಟಿದ್ದಾರೆ. ಫಿಶ್ ಟ್ಯಾಂಕಿನ ಗಾಜಿನಿಂದ ಅವರ ಕೈಗೆ ಗಾಯವಾಗಿದೆ’ ಎಂದು ಗೈಲ್ಸ್ ಬಿಬಿಸಿ ರೇಡಿಯೋ 5 ಲೈವ್‌ಗೆ ತಿಳಿಸಿದ್ದಾರೆ.

ADVERTISEMENT

‘ಇದು ಪಿತೂರಿಯಂತೆ ಭಾಸವಾಗುತ್ತಿದೆ. ಟ್ವಿಟ್ಟರ್‌ನಲ್ಲಿ ಈ ಕುರಿತು ಯಾವ ಅಭಿಪ್ರಾಯ ಬರಲಿದೆ ಎಂದು ನನಗೆ ತಿಳಿದಿದೆ. ಆದರೆ, ಇದು ನಿಜ, ಇದು ಪಿತೂರಿ ಅಲ್ಲ, ಅವರು ಮನೆಯಲ್ಲಿಫಿಶ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ಈ ಅವಘಡ ಸಂಭವಿಸಿದೆ’ ಎಂದು ಹೇಳಿದ್ದಾರೆ.

‘ಆರ್ಚರ್ ಇಂದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅಪಾಯದಿಂದ ಹೊರಬಂದಿದ್ದಾರೆ. ಸ್ನಾಯುವಿನಲ್ಲಿ ಸೇರಿಕೊಂಡಿದ್ದ ಸಣ್ಣ ಗಾಜಿನ ತುಂಡನ್ನು ಶಸ್ತ್ರಚಿಕಿತ್ಸೆ ವೇಳೆ ಹೊರ ತೆಗೆದಿದ್ದಾರೆ ಎಂದು ನಾನು ಭಾವಿಸುತ್ತೇನೆ.’ ಎಂದಿದ್ದಾರೆ.

25 ರ ಹರೆಯದ ಜೋಫ್ರಾ ಆರ್ಚರ್, ಭಾರತ ವಿರುದ್ಧ ನಡೆದ ನಾಲ್ಕು ಟೆಸ್ಟ್‌ ಮತ್ತು ಎಲ್ಲ ಐದು ಟಿ 20 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡದಲ್ಲಿದ್ದರು.

ಏಪ್ರಿಲ್ 9 ರಿಂದ ಪ್ರಾರಂಭವಾಗುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಬೇಕಿದ್ದ ಆರ್ಚರ್, ಈ ಗಾಯದಿಂದಾಗಿ ಸರಣಿಯನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.