ADVERTISEMENT

ಪೂರ್ವ ಸಿದ್ಧತಾ ಶಿಬಿರ ಆರಂಭಿಸಲಿರುವ ಕ್ರಿಕೆಟ್ ಆಸ್ಟ್ರೇಲಿಯಾ

ಪಿಟಿಐ
Published 7 ಮೇ 2020, 18:20 IST
Last Updated 7 ಮೇ 2020, 18:20 IST
   

ಮೆಲ್ಬರ್ನ್‌: ಕ್ರಿಕೆಟ್‌ ಆಸ್ಟ್ರೇಲಿಯಾವು (ಸಿಎ) ಈ ತಿಂಗಳ ಅಂತ್ಯದಲ್ಲಿ ಪೂರ್ವ ಸಿದ್ಧತಾ ಶಿಬಿರ ಆಯೋಜಿಸಲು ಚಿಂತಿಸಿದೆ.

ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಆಟಗಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸಿಎ, ಹೊಸ ನಿಯಮಾವಳಿಗಳನ್ನೂ ರೂಪಿಸಿದೆ. ಮುಖ್ಯ ವೈದ್ಯಾಧಿಕಾರಿ ಜಾನ್‌ ಒರ್ಕಾರ್ಡ್‌ ಹಾಗೂ ಕ್ರೀಡಾ ವಿಜ್ಞಾನ ವಿಭಾಗದ ಅಧ್ಯಕ್ಷ ಅಲೆಕ್ಸ್‌ ಕೌಂಟೌರಿಸ್‌ ಅವರ ಮೇಲ್ವಿಚಾರಣೆಯಲ್ಲಿ ಶಿಬಿರ ನಡೆಯಲಿದೆ ಎಂದು ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್‌ ಪತ್ರಿಕೆಯು ವರದಿ ಮಾಡಿದೆ.

ಶಿಬಿರದ ವೇಳೆ ಆಟಗಾರರು ಚೆಂಡಿಗೆ ಬೆವರು ಹಾಗೂ ಎಂಜಲು ಹಚ್ಚುವುದಕ್ಕೆ ನಿರ್ಬಂಧ ಹೇರಲಾಗುತ್ತದೆ.

ADVERTISEMENT

‘ನೆಟ್ಸ್‌ನ ವೇಳೆ ಅಂತರ ಕಾಯ್ದುಕೊಳ್ಳಲಾಗುತ್ತದೆ. ಪ್ರತಿ ನೆಟ್‌ನಲ್ಲಿ ಮೂರು ಮಂದಿ ಬೌಲರ್‌ಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಇದರಿಂದ ಕೊರೊನಾ ಸೋಂಕು ಹರಡುವ ಅಪಾಯ ಇರುವುದಿಲ್ಲ’ ಎಂದು ಕೌಂಟೌರಿಸ್‌ ತಿಳಿಸಿದ್ದಾರೆ.

‘ಕೊರೊನಾ ನಂತರವೂ ಆಟಗಾರರು ಮೈದಾನದಲ್ಲಿ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಎದುರಾಳಿ ತಂಡದ ವಿಕೆಟ್‌ ಪಡೆದಾಗ ಅಥವಾ ಪಂದ್ಯ ಗೆದ್ದಾಗ ಆಟಗಾರರು ಪರಸ್ಪರರನ್ನು ಅಪ್ಪಿಕೊಂಡು ಸಂಭ್ರಮಿಸುವಂತಿಲ್ಲ. ಕೊರೊನಾಗೆ ಲಸಿಕೆ ಕಂಡುಹಿಡಿಯುವವರೆಗೂ ಮೈದಾನದಲ್ಲಿ ಸಂಭ್ರಮಿಸುವುದಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳುವುದು ಅನಿವಾರ್ಯ’ ಎಂದೂ ಅವರು ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.