ADVERTISEMENT

ಕಪಿಲ್‌ ನೇತೃತ್ವದ ಅಡ್‌ಹಾಕ್‌ ಸಮಿತಿಗೆ ಭಾರತ ಕ್ರಿಕೆಟ್‌ ಕೋಚ್‌ ಆಯ್ಕೆ ಹೊಣೆ

ಪಿಟಿಐ
Published 18 ಜುಲೈ 2019, 1:44 IST
Last Updated 18 ಜುಲೈ 2019, 1:44 IST
ಕಪಿಲ್‌ ದೇವ್‌–ಪಿಟಿಐ ಚಿತ್ರ
ಕಪಿಲ್‌ ದೇವ್‌–ಪಿಟಿಐ ಚಿತ್ರ   

ನವದೆಹಲಿ: ಭಾರತ ತಂಡದ ಮುಂದಿನ ಕೋಚ್‌ ಆಯ್ಕೆ ಹೊಣೆಯನ್ನು, ಕ್ರಿಕೆಟ್‌ ವ್ಯವಹಾರ ನೋಡಿಕೊಳ್ಳುವ ಆಡಳಿತಾಧಿಕಾರಿಗಳ ಸಮಿತಿಯು (ಸಿಒಎ) ಕಪಿಲ್‌ ದೇವ್‌ ನೇತೃತ್ವದ ತಾತ್ಕಾಲಿಕ (ಅಡ್‌ಹಾಕ್‌) ಸಮಿತಿಗೆ ವಹಿಸಿದೆ.

ಈ ನಿಲುವು ಸುಪ್ರೀಂ ಕೋರ್ಟ್‌ ನೇಮಕದ ಸಮಿತಿಯಲ್ಲಿ (ಸಿಒಎ) ಭಿನ್ನಾಭಿಪ್ರಾಯಕ್ಕೆ ಕಾರಣವಾಗುವ ಸಾಧ್ಯತೆಯೂ ಇದೆ.

ಕಪಿಲ್‌ ಜೊತೆ ಅಂಶುಮನ್‌ ಗಾಯಕವಾಡ್‌ ಮತ್ತು ಶಾಂತಾ ರಂಗಸ್ವಾಮಿ ಅವರನ್ನೊಳಗೊಂಡ ತಾತ್ಕಾಲಿಕ ಸಮಿತಿಯು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಡಬ್ಲ್ಯು.ವಿ.ರಾಮನ್‌ ಅವರನ್ನು ಮಹಿಳಾ ತಂಡದ ಕೋಚ್‌ ಆಗಿ ನೇಮಕ ಮಾಡಿತ್ತು. ಪುರುಷರ ತಂಡದ ಕೋಚ್‌ ಆಯ್ಕೆಯನ್ನೂ ನಿರ್ವಹಿಸುವಂತೆ ಬಿಸಿಸಿಐ ಸಂಪರ್ಕಿಸಿರುವುದನ್ನು ಸಮಿತಿಯ ಸದಸ್ಯರೊಬ್ಬರು ಖಚಿತಪಡಿಸಿದ್ದಾರೆ.

ADVERTISEMENT

ಈ ಹಿಂದೆ ಸಿಒಎ ಇಬ್ಬರು– ಅಧ್ಯಕ್ಷ ವಿನೋದ್‌ ರಾಯ್‌ ಮತ್ತು ಮಹಿಳಾ ತಂಡದ ಮಾಜಿ ನಾಯಕಿ ಡಯಾನಾ ಎಡುಲ್ಜಿ– ಸದಸ್ಯರನ್ನು ಒಳಗೊಂಡಿತ್ತು. ಡಯಾನಾ ಅವರು ಮಹಿಳಾ ತಂಡದ ಕೋಚ್‌ ಆಯ್ಕೆ ಪ್ರಕ್ರಿಯೆಯನ್ನು ಅಸಾಂವಿಧಾನಿಕ ಎಂದು ಹೇಳಿದ್ದರು. ‘ಕೇವಲ ಕ್ರಿಕೆಟ್‌ ಸಲಹಾ ಸಮಿತಿಗೆ (ಸಿಎಸಿ) ಮಾತ್ರ ಇಂಥ ಅಧಿಕಾರವಿರುತ್ತದೆ’ ಎಂದಿದ್ದರು.

ಫೆಬ್ರುವರಿಯಲ್ಲಿ ಲೆಫ್ಟಿನೆಂಟ್‌ ಜನರಲ್‌ ರವಿ ತೊಡ್ಗೆ ಅವರ ನೇಮಕದೊಡನೆ, ಸಿಒಎ ಈಗ ಮೂವರು ಸದಸ್ಯರನ್ನು ಹೊಂದಿದಂತಾಗಿದೆ. ಆದರೆ ಸಚಿನ್‌ ತೆಂಡೂಲ್ಕರ್‌, ಸೌರವ್‌ ಗಂಗೂಲಿ ಮತ್ತು ವಿ.ವಿ.ಎಸ್‌. ಲಕ್ಷ್ಮಣ್‌ ಅವರನ್ನು ಹೊಂದಿರುವ ಸಿಎಸಿ ಭವಿಷ್ಯದ ಬಗ್ಗೆ ಅನುಮಾನಗಳು ಎದ್ದಿರುವುದರಿಂದ ಆಡಳಿತಗಾರರ ಸಮಿತಿಯು ಕೋಚ್‌ ಆಯ್ಕೆ ಹೊಣೆಯನ್ನು ಅಡ್‌ಹಾಕ್‌ ಸಮಿತಿಗೆ ವಹಿಸಿದೆ.

ತೆಂಡೂಲ್ಕರ್‌ ಅವರು ಹಿತಾಸಕ್ತಿ ಸಂಘರ್ಷದ ಆರೋಪದಿಂದ ಮುಕ್ತರಾಗಿದ್ದಾರೆ. ಗಂಗೂಲಿ ಮತ್ತು ಲಕ್ಷ್ಮಣ್‌ ಅವರಿಗೆ ಬಿಸಿಸಿಐ ಸಂವಿಧಾನದ ಪ್ರಕಾರ ಈಗಿರುವ ವಿವಿಧ ಕ್ರಿಕೆಟ್‌ ಹುದ್ದೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಕೇಳಲಾಗಿದೆ.ಆಡಳಿತಗಾರರ ಸಮಿತಿಯು ಈ ಬಗ್ಗೆ ಏನನ್ನೂ ಮಾತನಾಡಿಲ್ಲ.

ಬಿಸಿಸಿಐನ ನೂತನ ಸಂವಿಧಾನದ ಪ್ರಕಾರ ಆಟಗಾರರ ಸಂಸ್ಥೆಯ ರಚನೆಯಲ್ಲಿ ಪಾತ್ರ ವಹಿಸಿರುವ ಕಾರಣ ಕಪಿಲ್‌ ದೇವ್‌ ಮತ್ತು ಶಾಂತಾ ಅವರೂ ‘ಹಿತಾಸಕ್ತಿ ಸಂಘರ್ಷ’ ಪರಿಧಿಯಲ್ಲಿದ್ದಾರೆ. ಪುರುಷರ ತಂಡದ ಕೋಚ್‌ ಮತ್ತು ಇತರ ಹುದ್ದೆಗಳಿಗೆ ಬಿಸಿಸಿಐ ಮಂಗಳವಾರ ಅರ್ಜಿಗಳನ್ನು ಆಹ್ವಾನಿಸಿತ್ತು. ಎರಡು ವರ್ಷಗಳ ಅಂತರರಾಷ್ಟ್ರೀಯ ಅನುಭವದ ಜೊತೆಗೆ 60 ವರ್ಷದೊಳಗಿನವರಾಗಿಬೇಕು ಎಂಬ ಷರತ್ತು ವಿಧಿಸಲಾಗಿದೆ. ಅರ್ಜಿ ಸಲ್ಲಿಸಲು ಈ ತಿಂಗಳ 30ರವರೆಗೆ ಗಡುವು ನೀಡಲಾಗಿದೆ. ಮುಖ್ಯ ಕೋಚ್‌ ರವಿ ಶಾಸ್ತ್ರಿ, ಬೌಲಿಂಗ್‌ ಕೋಚ್‌ ಭರತ್‌ ಅರುಣ್‌, ಬ್ಯಾಟಿಂಗ್ ಕೋಚ್‌ ಸಂಜಯ್ ಬಂಗಾರ್ ಮತ್ತು ಫೀಲ್ಡಿಂಗ್‌ ಕೋಚ್‌ ಆರ್.ಶ್ರೀಧರ್‌ ಅವರ ಅವಧಿಯನ್ನು 45 ದಿನಗಳಿಗೆ ವಿಸ್ತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.