ADVERTISEMENT

ಹಳ್ಳಿಯಲ್ಲಿ ಅರಳಿದ ಕ್ರಿಕೆಟ್ ಪ್ರತಿಭೆ

ಕೆಎಸ್‌ಸಿಎ ನಡೆಸಿದ ಶಿಬಿರದಲ್ಲಿ ಜಿಲ್ಲಾ ಮಟ್ಟದ ತಂಡಕ್ಕೆ ಆಯ್ಕೆಯಾದ ಆಟಗಾರ

ರವೀಂದ್ರ ಭಟ್ಟ, ಬಳಗುಳಿ
Published 16 ಏಪ್ರಿಲ್ 2019, 19:47 IST
Last Updated 16 ಏಪ್ರಿಲ್ 2019, 19:47 IST
ಟ್ರೋಫಿಯೊಂದಿಗೆ ವರುಣ್ ನಾಯ್ಕ
ಟ್ರೋಫಿಯೊಂದಿಗೆ ವರುಣ್ ನಾಯ್ಕ   

ಸಿದ್ದಾಪುರ:ತಾಲ್ಲೂಕಿನ ಗ್ರಾಮೀಣ ಭಾಗದ ಯುವಕ ವರುಣ್ ಆನಂದ ನಾಯ್ಕ, ಭರವಸೆ ಮೂಡಿಸಿರುವ ಕ್ರಿಕೆಟ್ ಆಟಗಾರ. ಪ್ರಸ್ತುತ ಉತ್ತರ ಕನ್ನಡ ಜಿಲ್ಲಾ ತಂಡಕ್ಕೆ ಆಯ್ಕೆಯಾಗಿರುವ ಅವರು, ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡುವ ಬಯಕೆ ಹೊಂದಿದ್ದಾರೆ.

ಬೇಡ್ಕಣಿ ಎಂಬ ಹಳ್ಳಿಯ ವರುಣ್, ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿ ಓದುವಾಗಲೇ ಕ್ರಿಕೆಟ್ ಆಟ ಆಡಲು ಆರಂಭಿಸಿದರು. ಅವಕಾಶ ಸಿಕ್ಕಾಗಲೆಲ್ಲ ಹಳ್ಳಿಗಳಲ್ಲಿ ನಡೆಯುವ ಟೂರ್ನಿಗಳಲ್ಲಿ ಭಾಗಿಯಾಗುತ್ತ ಬೆಳೆದರು. ಉತ್ತರ ಕನ್ನಡ ಜಿಲ್ಲಾ ತಂಡಕ್ಕೆ ಆಯ್ಕೆಯಾಗುವ (ಕೆಎಸ್‌ಸಿಎನಡೆಸಿದ ಆಯ್ಕೆ) ಮೂಲಕ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ.

19 ವರ್ಷ ವಯೋಮಿತಿಯ ಈ ತಂಡಕ್ಕೆ ಆಯ್ಕೆ ಬಯಸಿ, ಬೇರೆಬೇರೆ ತಾಲ್ಲೂಕುಗಳಿಂದ ಬಂದಿದ್ದ 100 ಯುವಕರಲ್ಲಿ 20 ಆಟಗಾರರನ್ನು ಆಯ್ಕೆ ಮಾಡಲಾಯಿತು. ಅವರಲ್ಲಿ ಸಿದ್ದಾಪುರ ತಾಲ್ಲೂಕಿನ ಇಬ್ಬರು ಯುವಕರು ಸೇರಿದ್ದು, ವರುಣ್ ಕೂಡ ಒಬ್ಬರು. ಈಗ ತಂಡದ ಇತರ ಸದಸ್ಯರೊಂದಿಗೆ ಅವರು ಕಾರವಾರದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ADVERTISEMENT

ಪ್ರಸ್ತುತ ತಾಲ್ಲೂಕಿನ ನಾಣಿಕಟ್ಟಾ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯು ಮುಗಿಸಿ, ದ್ವಿತೀಯ ಪಿಯುಗೆ ಸೇರ್ಪಡೆಗೊಂಡಿದ್ದಾರೆ. ಅವರುಕೃಷಿ ಕುಟುಂಬದಿಂದ ಬಂದವರು. ಮನೆಯಲ್ಲಿ ಬೇರೆ ಯಾರೂ ಕ್ರಿಕೆಟ್ ಆಟಗಾರರಿಲ್ಲ. ಆದರೂ ಅವರನ್ನು ಈ ಆಟ ಸೆಳೆದಿದೆ.

‘ನಾನು ಊರಿನಲ್ಲಿಯೇ ಕ್ರಿಕೆಟ್ ಆಡುತ್ತ ಬೆಳೆದವನು. ಆರಂಭದಲ್ಲಿ ಯಾರಿಂದಲೂ ತರಬೇತಿ ಪಡೆದಿಲ್ಲ. ಈಚೆಗೆ ಕೆಪಿಎಲ್ ಆಟಗಾರ ಡೊಮಿನಿಕ್ ಎಂಬವರು ಸಲಹೆ, ಮಾರ್ಗದರ್ಶನ, ಪ್ರೋತ್ಸಾಹ ನೀಡಿದ್ದಾರೆ’ ಎಂದು ವರುಣ್ ಹೇಳುತ್ತಾರೆ.

ಕ್ರಿಕೆಟ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿರುವ ವರುಣ್, ವೇಗದ ಬೌಲರ್ ಕೂಡ ಹೌದು. ‘ವೀರೇಂದ್ರ ಸೆಹ್ವಾಗ್ ಅವರ ಆಟ ನನಗೆ ಇಷ್ಟ, ಅವರ ಹೊಡಿ–ಬಡಿ ಆಟ ನೋಡಿಯೇ ಕ್ರಿಕೆಟ್ ಆಡಲು ಆರಂಭಿಸಿದ್ದು’ ಎಂದು ನೆನಪು ಮಾಡಿಕೊಳ್ಳುತ್ತಾರೆ.

‘ರಾಷ್ಟ್ರೀಯ ತಂಡಕ್ಕೆ ಆಡಬೇಕು ಎಂಬುದು ನನ್ನ ಆಸೆ’ ಎಂದೂ ಅವರು ದೃಢವಾಗಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.