ADVERTISEMENT

ಧೋನಿ ಅನುಪಸ್ಥಿತಿ ಕಾಡಿತು

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮುಖ್ಯ ಕೋಚ್‌ ಸ್ಟೀಫನ್‌ ಫ್ಲೆಮಿಂಗ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2019, 19:46 IST
Last Updated 27 ಏಪ್ರಿಲ್ 2019, 19:46 IST
ಸ್ಟೀಫನ್‌ ಫ್ಲೆಮಿಂಗ್‌ (ಎಡ) ಮತ್ತು ಮಹೇಂದ್ರ ಸಿಂಗ್‌ ಧೋನಿ
ಸ್ಟೀಫನ್‌ ಫ್ಲೆಮಿಂಗ್‌ (ಎಡ) ಮತ್ತು ಮಹೇಂದ್ರ ಸಿಂಗ್‌ ಧೋನಿ   

ಚೆನ್ನೈ (ಪಿಟಿಐ): ‘ಮಹೇಂದ್ರ ಸಿಂಗ್‌ ಧೋನಿ ಶ್ರೇಷ್ಠ ನಾಯಕ. ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಬಲ ತುಂಬಬಲ್ಲ ಸಮರ್ಥ ಬ್ಯಾಟ್ಸ್‌ಮನ್‌. ಅವರ ಅನುಪಸ್ಥಿತಿ ಅತಿಯಾಗಿ ಕಾಡಿತು’ ಎಂದು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮುಖ್ಯ ಕೋಚ್‌ ಸ್ಟೀಫನ್‌ ಫ್ಲೆಮಿಂಗ್‌ ನುಡಿದಿದ್ದಾರೆ.

ಚೆಪಾಕ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ ಚೆನ್ನೈ ತಂಡ 46ರನ್‌ಗಳಿಂದ ಮುಂಬೈ ಇಂಡಿಯನ್ಸ್‌ ಎದುರು ಸೋತಿತ್ತು. ಈ ಸಲ ತಂಡ ತವರಿನಲ್ಲಿ ಸೋತ ಮೊದಲ ಪಂದ್ಯ ಇದಾಗಿತ್ತು. ಈ ಹೋರಾಟದಲ್ಲಿ ಮಹೇಂದ್ರ ಸಿಂಗ್‌ ಧೋನಿ ಆಡಿರಲಿಲ್ಲ. ಜ್ವರದ ಕಾರಣ ಅವರು ವಿಶ್ರಾಂತಿ ಪಡೆದಿದ್ದರು. ಅವರ ಬದಲಿಗೆ ಸುರೇಶ್‌ ರೈನಾ ತಂಡವನ್ನು ಮುನ್ನಡೆಸಿದ್ದರು.

ಪಂದ್ಯದ ನಂತರ ಮಾತನಾಡಿದ ಫ್ಲೆಮಿಂಗ್‌ ‘ಐಪಿಎಲ್‌ನ ಆರಂಭದಿಂದಲೂ ಧೋನಿ ಅವರು ತಂಡದ ಆಧಾರಸ್ಥಂಭವಾಗಿದ್ದಾರೆ. ಏಕಾಂಗಿಯಾಗಿ ಹಲವು ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ಅವರು ತಂಡದಲ್ಲಿದ್ದಾಗ ಆಡುವ ಬಳಗದಲ್ಲಿರುವ ಎಲ್ಲರೂ ಹುರುಪಿನಿಂದ ಹೋರಾಡುತ್ತಾರೆ. ಅವರ ಅನುಪಸ್ಥಿತಿಯಲ್ಲಿ ಇಡೀ ತಂಡವೇ ಮಂಕಾಗಿ ಬಿಡುತ್ತದೆ’ ಎಂದರು.

ADVERTISEMENT

‘ಶ್ರೇಷ್ಠ ಆಟಗಾರನೊಬ್ಬನ ಅನುಪಸ್ಥಿತಿಯಲ್ಲಿ ತಂಡವನ್ನು ಯಶಸ್ಸಿನತ್ತ ಕೊಂಡೊಯ್ಯುವುದು ತುಸು ಕಷ್ಟ. ಸನ್‌ರೈಸರ್ಸ್‌ ಹೈದರಾಬಾದ್‌ ಮತ್ತು ಮುಂಬೈ ಇಂಡಿಯನ್ಸ್‌ ಎದುರಿನ ಪಂದ್ಯಗಳ ಫಲಿತಾಂಶವೇ ಇದಕ್ಕೆ ಸಾಕ್ಷಿ. ಈ ಎರಡೂ ಪಂದ್ಯಗಳಲ್ಲೂ ಧೋನಿ ಆಡಿರಲಿಲ್ಲ. ಹೀಗಾಗಿ ತಂಡವು ಹೀನಾಯವಾಗಿ ಸೋತಿತ್ತು. ಅವರು ತಂಡದಲ್ಲಿದ್ದಾಗ ನಮಗೆ ಯಾವುದೇ ಆತಂಕ ಇರುವುದಿಲ್ಲ. ಸಂಕಷ್ಟದ ಪರಿಸ್ಥಿತಿಯಲ್ಲಿ ಸಹ ಆಟಗಾರರಲ್ಲಿ ವಿಶ್ವಾಸ ತುಂಬಿ ತಂಡವನ್ನು ಯಶಸ್ಸಿನತ್ತ ಮುನ್ನಡೆಸುತ್ತಾರೆ’ ಎಂದು ಫ್ಲೆಮಿಂಗ್‌ ನುಡಿದಿದ್ದಾರೆ.

‘ಮುಂಬೈ ಎದುರು ನಾವು ಸತತವಾಗಿ ವಿಕೆಟ್‌ ಕಳೆದುಕೊಂಡೆವು. ಉತ್ತಮ ಜೊತೆಯಾಟಗಳೂ ಮೂಡಿಬರಲಿಲ್ಲ. ಅದೃಷ್ಟವೂ ನಮ್ಮ ಪರವಾಗಿರಲಿಲ್ಲ. ಹೀಗಾಗಿ ಸೋಲು ಎದುರಾಯಿತು’ ಎಂದು ತಿಳಿಸಿದರು.

ಧೋನಿ ಆಡದಿದ್ದುದು ನಮಗೆ ವರವಾಯಿತು: ‘ಜ್ವರದ ಕಾರಣ ಚೆನ್ನೈ ತಂಡದ ನಾಯಕ ಧೋನಿ ಕಣಕ್ಕಿಳಿಯಲಿಲ್ಲ. ಹೀಗಾಗಿ ನಮ್ಮ ಗೆಲುವು ಸುಲಭವಾಯಿತು’ ಎಂದು ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್ ಶರ್ಮಾ ನುಡಿದಿದ್ದಾರೆ.

‘ಏಕಾಂಗಿಯಾಗಿ ಪಂದ್ಯದ ಚಿತ್ರಣ ಬದಲಿಸಬಲ್ಲ ಸಾಮರ್ಥ್ಯ ಧೋನಿ ಅವರಿಗಿದೆ. ಗುರಿ ಬೆನ್ನಟ್ಟುವ ಸಂದರ್ಭದಲ್ಲಿ ಅವರು ತುಂಬಾ ಚೆನ್ನಾಗಿ ಆಡುತ್ತಾರೆ. ಅವರ ಅನುಪಸ್ಥಿತಿಯಲ್ಲಿ ತಂಡ ಗೆಲ್ಲುವುದು ಕಷ್ಟ ಎಂಬುದು ನಮಗೆ ಚೆನ್ನಾಗಿ ಗೊತ್ತಿತ್ತು. ಹೀಗಾಗಿ ನಿರಾತಂಕವಾಗಿ ಆಡಿದೆವು’ ಎಂದಿದ್ದಾರೆ.

ರೋಹಿತ್ ಅವರು ಚೆನ್ನೈ ವಿರುದ್ಧ 67ರನ್‌ ಗಳಿಸಿ ಮಿಂಚಿದ್ದರು. ಈ ಬಾರಿಯ ಲೀಗ್‌ನಲ್ಲಿ ಅವರು ದಾಖಲಿಸಿದ ಮೊದಲ ಅರ್ಧಶತಕ ಇದಾಗಿತ್ತು.

‘ಹಿಂದಿನ ಪಂದ್ಯಗಳಲ್ಲಿ 30 ಇಲ್ಲವೇ 40ರನ್‌ಗಳಿಗೆ ಔಟ್‌ ಆಗಿ ಬಿಡುತ್ತಿದ್ದೆ. ಚೆನ್ನೈ ವಿರುದ್ಧ ಅರ್ಧಶತಕ ಗಳಿಸಿದ್ದು ಖುಷಿ ನೀಡಿದೆ. ಇದರಿಂದ ಮನೋಬಲವೂ ಹೆಚ್ಚಿದೆ’ ಎಂದರು.

‘ನಮ್ಮ ಬ್ಯಾಟ್ಸ್‌ಮನ್‌ಗಳು ದಿಟ್ಟ ಆಟ ಆಡಲಿಲ್ಲ. ನಿರಂತರವಾಗಿ ವಿಕೆಟ್‌ ಕಳೆದುಕೊಂಡಿದ್ದರಿಂದ ನಿರಾಸೆ ಎದುರಾಯಿತು. ಬ್ಯಾಟ್ಸ್‌ಮನ್‌ಗಳು ಇಚ್ಛಾಶಕ್ತಿ ತೋರಿದ್ದರೆ 155ರನ್‌ಗಳ ಗುರಿ ಬೆನ್ನಟ್ಟುವುದು ಕಷ್ಟವೇನು ಆಗಿರಲಿಲ್ಲ. ಆದರೆ ನಮ್ಮವರು ಜವಾಬ್ದಾರಿ ಮರೆತರು’ ಎಂದು ಸೂಪರ್‌ ಕಿಂಗ್ಸ್‌ ನಾಯಕ ಸುರೇಶ್‌ ರೈನಾ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.