ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವಣ ಸೆಮಿಫೈನಲ್ ಪಂದ್ಯದಲ್ಲಿ ಡೇವಿಡ್ ವಾರ್ನರ್ ಔಟ್ ಆಗಿರುವ ರೀತಿಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದೆ.
ಈ ಕುರಿತು ಭಾರತದ ಮಾಜಿ ದಿಗ್ಗಜ ಸಚಿನ್ ತೆಂಡೂಲ್ಕರ್ ತಮ್ಮ ಅಭಿಪ್ರಾಯಗಳನ್ನು ಫೇಸ್‌ಬುಕ್ ವಿಡಿಯೊದಲ್ಲಿ ಹಂಚಿಕೊಂಡಿದ್ದಾರೆ.
'ಡೇವಿಡ್ ವಾರ್ನರ್ ಔಟ್ ಆಗಿರುವ ರೀತಿ ನನ್ನಲ್ಲೂ ಅಚ್ಚರಿ ಮೂಡಿಸಿತ್ತು. ಎಲ್ಲರೂ ಮನವಿ ಮಾಡಿದ್ದರು. ಬಳಿಕ ಅಂಪೈರ್ ಕೂಡ ಔಟ್ ನೀಡಿದ್ದರು' ಎಂದು ಹೇಳಿದ್ದಾರೆ.
'ಕೆಲವೊಮ್ಮೆ ಚೆಂಡು ಬ್ಯಾಟ್‌ಗೆ ಸವರಿದರೂ ಗ್ರಹಿಸಲು ಸಾಧ್ಯವಾಗುವುದಿಲ್ಲ.ಹಾಗೆಯೇ ಬ್ಯಾಟ್‌ಗೆ ತಾಗದಿದ್ದರೂ ಫೀಲ್ಡರ್‌ಗಳ ಬಲವಾದ ಮನವಿ ಹಾಗೂ ಅಂಪೈರ್ ತೀರ್ಪನ್ನು ನೋಡಿ ಬ್ಯಾಟರ್ ಪೆವಿಲಿಯನ್‌ಗೆ ಮರಳುತ್ತಾರೆ. ವಾರ್ನರ್ ವಿಷಯದಲ್ಲೂ ಅದೇಆಗಿದೆ ಎಂದು ನಾನು ಭಾವಿಸುತ್ತೇನೆ. ಆದರೆ ರಿಪ್ಲೇ ನೋಡಿದಾಗ ನನಗೂ ಆಶ್ಚರ್ಯವಾಯಿತು' ಎಂದು ಹೇಳಿದ್ದಾರೆ.
ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಔಟ್ ಆಗದಿದ್ದರೂ ಡೇವಿಡ್ ವಾರ್ನರ್ ಹೊರ ನಡೆದಿದ್ದರು. ಶದಾಬ್ ಖಾನ್ ದಾಳಿಯಲ್ಲಿ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಕೈಗೆ ಚೆಂಡು ಭದ್ರವಾಗಿ ಸೇರಿತ್ತು. ಬೌಲರ್ ಮನವಿಯನ್ನು ಪುರಸ್ಕರಿಸಿದ ಅಂಪೈರ್ ಔಟ್ ತೀರ್ಪು ನೀಡಿದ್ದರು. ಈ ವೇಳೆ ಡಿಆರ್‌ಎಸ್ ಮೊರೆ ಹೋಗದ ವಾರ್ನರ್ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಬಳಿಕ ರಿಪ್ಲೇ ಪರಿಶೀಲಿಸಿದಾಗ ಚೆಂಡು ಬ್ಯಾಟ್‌ಗೆ ತಗುಲಿರಲಿಲ್ಲ. ಇದರಿಂದಾಗಿ ಅರ್ಧಶತಕ ಗಳಿಸುವ ಅವಕಾಶದಿಂದ ವಂಚಿತರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.