ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಧ್ಯಮ ಹಂತದ ಓವರುಗಳಲ್ಲಿ ಪರದಾಡುತ್ತಿರುವುದು ಕಳೆದ ಕೆಲವು ಪಂದ್ಯಗಳಲ್ಲಿ ಎದ್ದುಕಂಡಿದೆ. ಮಂಗಳವಾರ ತವರಿನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಎದುರಿಸುವಾಗ ಡೆಲ್ಲಿ ತಂಡವು ಈ ಹಿನ್ನಡೆಯನ್ನು ಸುಧಾರಿಸಿಕೊಳ್ಳುವ ಗುರಿಯಲ್ಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೊನೆಯ ನಾಲ್ಕು ಪಂದ್ಯಗಳಲ್ಲಿ ಎರಡನ್ನು ಸೋತಿದೆ. ಭಾನುವಾರ ತವರಿನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಣಿದಿದೆ. ಲೀಗ್ ಮುಕ್ತಾಯದತ್ತ ಸಾಗು ತ್ತಿರುವ ಈ ಹಂತದಲ್ಲಿ ಅಡಚಣೆಗಳು ಎದುರಾಗದಂತೆ ನಿಭಾಯಿಸುವ ಸವಾಲು ಆತಿಥೇಯ ತಂಡದ ಮುಂದಿದೆ.
ಅಭಿಷೇಕ್ ಪೊರೆಲ್ ಬೀಸಾಟ ವಾಡುತ್ತಿದ್ದಾರೆ. ಆದರೆ ಫಾಫ್ ಡು ಪ್ಲೆಸಿ ಪಿಚ್‌ನ ಸ್ವಭಾವಕ್ಕೆ ಬೇಗನೇ ಒಗ್ಗಿಕೊಳ್ಳ ಬೇಕಾಗಿದೆ. ಡೆಲ್ಲಿ ಪರ ಈ ಋತುವಿನ ಯಶಸ್ವಿ ಆಟಗಾರ ಕೆ.ಎಲ್.ರಾಹುಲ್ ಅವರಿಗೆ ಆರ್‌ಸಿಬಿ ಸ್ಪಿನ್ನರ್‌ಗಳ ಎದುರು ರನ್ ವೇಗ ಹೆಚ್ಚಿಸಲು ಆಗಿರಲಿಲ್ಲ.
ಕರುಣ್ ನಾಯರ್ ಅವರಿಂದ ಉತ್ತಮ ಇನಿಂಗ್ಸ್ ಬಂದರೆ ರಾಹುಲ್ ಮೇಲಿನ ಒತ್ತಡ ಕಡಿಮೆಯಾಗಲಿದೆ. ಬೌಲಿಂಗ್ ವಿಭಾಗದಲ್ಲಿ ನಾಯಕ ಅಕ್ಷರ್ ಪಟೇಲ್ ಲಯ ಕಂಡುಕೊಂಡಿದ್ದಾರೆ. ಅವರಿಗೆ ಇತರ ಬೌಲರ್‌ಗಳ ಬೆಂಬಲ ದೊರೆಯಲಿಲ್ಲ. ಡೆಲ್ಲಿ ತಂಡದ ಕ್ಷೇತ್ರರಕ್ಷಣೆಯೂ ಉತ್ತಮವಾಗಿರಲಿಲ್ಲ. ಪೊರೆಲ್ ಸುಲಭ ಕ್ಯಾಚ್ ಬಿಟ್ಟಿದ್ದು, ಕೃಣಾಲ್ ಪಾಂಡ್ಯ ಅವರಿಗೆ ವರದಾನವಾಯಿತು.
ಕಳೆದ ಬಾರಿಯ ಚಾಂಪಿಯನ್ ನೈಟ್‌ರೈಡರ್ಸ್ ಈ ಬಾರಿ ಪರದಾಡುತ್ತಿದೆ. ಅಜಿಂಕ್ಯ ಬಳಗ ಕೊನೆಯ ಮೂರು ಪಂದ್ಯಗಳಲ್ಲಿ ಎರಡು ಸೋತಿದ್ದು, ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯ ಮಳೆಯ ಪಾಲಾಯಿತು. ಹೀಗಾಗಿ ತಂಡದ ವಿಶ್ವಾಸ ಕೆಳಮಟ್ಟದಲ್ಲಿದೆ.
ಪ್ಲೇ ಆಫ್ ಅವಕಾಶ ಜೀವಂತ ವಿರಿಸಬೇಕಾದರೆ ಕೋಲ್ಕತ್ತಕ್ಕೆ ಗೆಲುವು ಅನಿವಾರ್ಯ. ಇನ್ನೊಂದು ಸೋಲು ಅದರ ಆಸೆ ಭಗ್ನಗೊಳಿಸಬಲ್ಲದು. ತಂಡದ ಬ್ಯಾಟಿಂಗ್ ಹೇಳಿಕೊಳ್ಳುವಂತಿಲ್ಲ. ಅಜಿಂಕ್ಯ ರಹಾನೆ ಮತ್ತು ಯುವತಾರೆ ಅಂಗ್‌ಕ್ರಿಶ್ ರಘುವಂಶಿ ಮಾತ್ರ ಯಶಸ್ಸು ಗಳಿಸಿದ್ದಾರೆ. ವೆಂಕಟೇಶ್ ಅಯ್ಯರ್, ರಸೆಲ್ ಮತ್ತು ರಮಣದೀಪ್ ಸಿಂಗ್ ಯಶಸ್ಸು ಕಾಣುತ್ತಿಲ್ಲ.
ಬೌಲರ್‌ಗಳಿಂದ ಸ್ಥಿರ ಪ್ರದರ್ಶನ ಬಂದಿಲ್ಲ. ವರುಣ್ ಚಕ್ರವರ್ತಿ, ವೈಭವ್ ಅರೋರಾ ಮತ್ತು ಹರ್ಷಿತ್ ರಾಣಾ ಅವರಿಗೆ ಡೆಲ್ಲಿ ಬ್ಯಾಟರ್‌ಗಳನ್ನು ಕಟ್ಟಿಹಾಕುವ ಸವಾಲು ಇದೆ.
ಪಂದ್ಯ ಆರಂಭ: ರಾತ್ರಿ 7.30.
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊ ಹಾಟ್‌ಸ್ಟಾರ್ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.