ADVERTISEMENT

ಸೂಪರ್‌ಕಿಂಗ್ಸ್‌ಗೆ ಜೈಂಟ್ಸ್‌ ಸವಾಲು

ಚೆನ್ನೈ ಪಡೆಗೆ ಆರನೇ ಸೋಲಿನ ಭೀತಿ: ಧೋನಿ ಪಡೆ– ರಿಷಭ್ ಪಂತ್ ಬಳಗದ ಮುಖಾಮುಖಿ

ಪಿಟಿಐ
Published 13 ಏಪ್ರಿಲ್ 2025, 12:30 IST
Last Updated 13 ಏಪ್ರಿಲ್ 2025, 12:30 IST
 ಮಹೇಂದ್ರಸಿಂಗ್ ಧೋನಿ
 ಮಹೇಂದ್ರಸಿಂಗ್ ಧೋನಿ   

ಲಖನೌ: ಸತತ ಮೂರು ಪಂದ್ಯಗಳಲ್ಲಿ ಗೆದ್ದಿರುವ ಲಖನೌ ಸೂಪರ್ ಜೈಂಟ್ಸ್ ಮತ್ತು ಐದು ಸೋಲಿನಿಂದ ಜರ್ಜರಿತವಾಗಿರುವ ಚೆನ್ನೈ ಸೂಪರ್ ಜೈಂಟ್ಸ್ ತಂಡಗಳು ಸೋಮವಾರ ಮುಖಾಮುಖಿಯಾಗಲಿವೆ. 

ಈ ಹಿಂದಿನ ಯಾವುದೇ ಆವೃತ್ತಿಯಲ್ಲಿಯೂ ಚೆನ್ನೈ ತಂಡವು ಸತತ ಐದು ಪಂದ್ಯಗಳನ್ನು ಸೋತಿರಲಿಲ್ಲ. ಆದರೆ ಈ ಬಾರಿ ತನ್ನ ತವರು ಚೆಪಾಕ್‌ ಕ್ರೀಡಾಂಗಣದಲ್ಲಿ ನಡೆದ ಮೂರು ಪಂದ್ಯಗಳೂ ಸೇರಿ ಒಟ್ಟು ಐದರಲ್ಲಿ ಸತತ ಸೋಲು ಅನುಭವಿಸಿದೆ. ಅದರಲ್ಲೂ  ಕಳೆದ ಪಂದ್ಯದಲ್ಲಿ ಮಹೇಂದ್ರಸಿಂಗ್ ಧೋನಿ ನಾಯಕತ್ವದಲ್ಲಿ ಚೆನ್ನೈ ಮುಗ್ಗರಿಸಿತ್ತು. ಋತುರಾಜ್ ಗಾಯಕವಾಡ ಅವರು ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ಕಾರಣ ಧೋನಿ ಮತ್ತೆ ನಾಯಕತ್ವ ವಹಿಸಿಕೊಂಡಿದ್ದಾರೆ. 

ಚೆನ್ನೈ ತಂಡದ ಬ್ಯಾಟರ್‌ಗಳು ತವರಿನಲ್ಲಿ ಸ್ಪಿನ್ ಬೌಲರ್‌ಗಳ ಎದುರು ಪರದಾಡಿದ್ದರು. ಡೆವೊನ್ ಕಾನ್ವೆ, ರಚಿನ್ ರವೀಂದ್ರ, ವಿಜಯಶಂಕರ್, ರಾಹುಲ್ ತ್ರಿಪಾಠಿ, ದೀಪಕ್ ಹೂಡಾ ಮತ್ತು ಶಿವಂ ದುಬೆ ಅವರ ಮೇಲೆ ತಂಡದ ಬ್ಯಾಟಿಂಗ್ ವಿಭಾಗ ಅವಲಂಬಿತವಾಗಿದೆ. ನಾಯಕ ಧೋನಿ ಅವರು ಕೊನೆಯ ಹಂತದಲ್ಲಿ ಒಂದಿಷ್ಟು ರನ್‌ಗಳ ಕಾಣಿಕೆ ನೀಡುತ್ತಾರೆ. 

ADVERTISEMENT

ಲಖನೌ ತಂಡದಲ್ಲಿ ಉತ್ಸಾಹಿ ಬೌಲಿಂಗ್ ಪಡೆ ಇದೆ. ಶಾರ್ದೂಲ್ ಠಾಕೂರ್, ಆವೇಶ್ ಖಾನ್, ರವಿ ಬಿಷ್ಣೋಯಿ ಹಾಗೂ ದಿಗ್ವೇಶ್ ರಾಠಿ ಅವರು ಚೆನ್ನೈ ಪಡೆಗೆ ಕಠಿಣ ಸವಾಲೊಡ್ಡಬಲ್ಲ ಸಮರ್ಥರು. ಅವರ ಎಸೆತಗಳಲ್ಲಿ ದೊಡ್ಡ ಹೊಡೆತ ಪ್ರಯೋಗಿಸುವ ತಂತ್ರಗಾರಿಕೆಯನ್ನು ರೂಪಿಸುವ ಹೊಣೆ ನಾಯಕ ಧೋನಿ ಮುಂದಿದೆ. 

ಆತಿಥೇಯ ತಂಡದ ನಾಯಕ ರಿಷಭ್ ಪಂತ್ ಅವರು ಬ್ಯಾಟಿಂಗ್ ಲಯ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಆದರೆ ನಿಕೊಲಸ್ ಪೂರನ್ ಅವರು ಪ್ರತಿ ಪಂದ್ಯದಲ್ಲಿಯೂ ರನ್‌ ಸೂರೆ ಮಾಡುತ್ತಿದ್ದಾರೆ. ಅವರ ಅಬ್ಬರಕ್ಕೆ ಕಡಿವಾಣ ಹಾಕುವುದೇ ಚೆನ್ನೈ ಬೌಲರ್‌ಗಳ ಮುಂದಿರುವ ಪ್ರಮುಖ ಸವಾಲು. ಅವರಷ್ಟೇ ಅಲ್ಲ. ಏಡನ್ ಮರ್ಕರಂ, ಡೇವಿಡ್ ಮಿಲ್ಲರ್, ಆಯುಷ್ ಬಡೋನಿ ಕೂಡ ಬೌಲರ್‌ಗಳನ್ನು ಕಾಡುವ ಆಟಗಾರರು. 

ಚೆನ್ನೈನ ಎಡಗೈ ವೇಗಿ ಖಲೀಲ್ ಅಹಮದ್, ಮುಕೇಶ್ ಚೌಧರಿ, ಸ್ಪಿನ್ನರ್ ನೂರ್ ಅಹಮದ್, ರವೀಂದ್ರ ಜಡೇಜ ಹಾಗೂ ಆರ್. ಅಶ್ವಿನ್ ಅವರು ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿಹಾಕಿದರೆ ತಮ್ಮ ತಂಡದ  ಸೋಲಿನ ಸರಪಣಿ ತುಂಡರಿಸುವುದು ಸುಲಭವಾಗಬಹುದು. 

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್, ಜಿಯೊಹಾಟ್‌ಸ್ಟಾರ್ ಆ್ಯಪ್. 

ರಿಷಭ್ ಪಂತ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.