ADVERTISEMENT

ರಣಜಿ ಟ್ರೋಫಿ ಕ್ರಿಕೆಟ್: ಪಿತೃವಿಯೋಗದ ದುಃಖದಲ್ಲಿಯೂ ವಿಷ್ಣು ಸೋಳಂಕಿ ಕಣಕ್ಕೆ

ಬರೋಡ ಆಟಗಾರನ ಛಲ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2022, 14:24 IST
Last Updated 28 ಫೆಬ್ರುವರಿ 2022, 14:24 IST
ವಿಷ್ಣು ಸೋಳಂಕಿ
ವಿಷ್ಣು ಸೋಳಂಕಿ   

ವಡೋದರ (ಪಿಟಿಐ): ಬರೋಡಾ ಕ್ರಿಕೆಟ್ ತಂಡದ ಆಟಗಾರ ವಿಷ್ಣು ಸೋಳಂಕಿ ಇತ್ತೀಚೆಗಷ್ಟೇ ಪುತ್ರಿಯ ಸಾವಿನ ಶೋಕ ಅನುಭವಿಸಿದ್ದರು. ಇದೀಗ ಅವರಿಗೆ ಪಿತೃವಿಯೋಗದ ದುಃಖ ಅವರನ್ನು ಕಾಡಿದೆ.

ಭಾನುವಾರ ಅವರ ತಂದೆ ನಿಧನರಾಗಿದ್ದಾರೆ. ಆದರೆ ಎದೆಗುಂದದ ವಿಷ್ಣು ರಣಜಿ ಟ್ರೋಫಿ ಟೂರ್ನಿಯ ಮೂರನೇ ಪಂದ್ಯದಲ್ಲಿ ಆಡಲು ಸಿದ್ಧರಾಗಿದ್ದಾರೆ.

‘ವಿಷ್ಣು ತಂದೆ ನಿಧನರಾಗಿದ್ದಾರೆ. ಆದರೆ, ವಿಷ್ಣು ಅವರು ವಡೋದರಕ್ಕೆ ಬರುತ್ತಿಲ್ಲ. ಮೂರನೇ ಪಂದ್ಯ ಆಡಲು ನಿರ್ಧರಿಸಿರುವ ಅವರು ಬಯೋಬಬಲ್ ತೊರೆದು ಬರುತ್ತಿಲ್ಲ’ ಎಂದು ಬರೋಡಾ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಅಜಿತ್ ಲೆಲೆ ತಿಳಿಸಿದ್ದಾರೆ.

ADVERTISEMENT

ಫೆಬ್ರುವರಿ 10ರಂದು ಅವರ ನವಜಾತ ಹೆಣ್ಣುಮಗು ಸಾವಿಗೀಡಾಯಿತು. ಆದರೆ ಈ ದುಃಖವನ್ನು ನುಂಗಿಕೊಂಡು ಟೂರ್ನಿಯ ಎರಡನೇ ಪಂದ್ಯದಲ್ಲಿ ಆಡಿದ್ದ ವಿಷ್ಣು ಚಂಡೀಗಡ ತಂಡದ ಎದುರು ಶತಕ ಬಾರಿಸಿದ್ದರು. ಪಂದ್ಯದ ಕೊನೆಯ ದಿನವಾದ ಭಾನುವಾರ ತಂದೆಯ ನಿಧನದ ಸುದ್ದಿ ಅವರಿಗೆ ಸಿಕ್ಕಿತ್ತು.

‘ತಮ್ಮ ಹೆಣ್ಣುಮಗು ತೀರಿಕೊಂಡ ನಂತರ ಅವರು ತಂಡಕ್ಕೆ ಮರಳಿದ್ದರು. ಆದರೆ ಬಯೋಬಬಲ್ ನಿಯಮದ ಪ್ರಕಾರ ಕ್ವಾರಂಟೈನ್‌ಗೆ ತೆರಳಿದ್ದ ಅವರು ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಆದರೆ, ಎರಡನೇ ಪಂದ್ಯದಲ್ಲಿ ಅಮೋಘವಾಗಿ ಆಡಿದ್ದರು‘ ಎಂದು ಬರೋಡಾ ಕ್ರಿಕೆಟ್ ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭುವನೇಶ್ವರದಲ್ಲಿ ಮಾರ್ಚ್ 3ರಿಂದ ನಡೆಯಲಿರುವ ಎಲೀಟ್ ಬಿ ಗುಂಪಿನ ಪಂದ್ಯದಲ್ಲಿ ಬರೋಡಾ ತಂಡವು ಹೈದರಾಬಾದ್ ಎದುರು ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.