ಮೈಸೂರು: ಹುಬ್ಬಳ್ಳಿ ಟೈಗರ್ಸ್ ನಾಯಕ ದೇವದತ್ತ ಪಡಿಕಲ್ (69; 47 ಎಸೆತ, 4x5, 6x3) ಮತ್ತು ಕೆ.ಪಿ.ಕಾರ್ತಿಕೇಯ (ಔಟಾಗದೆ 81; 48 ಎಸೆತ, 4x8, 6x3) ಅವರ ಅಬ್ಬರದ ಮುಂದೆ ಗುಲ್ಬರ್ಗ ಮಿಸ್ಟಿಕ್ಸ್‌ನ ಬೌಲರ್‌ಗಳು ತಬ್ಬಿಬ್ಬಾದರು.
144ರನ್ (89 ಎಸೆತ) ಅಮೋಘ ಜೊತೆಯಾಟದ ಬಲದಿಂದ ಹುಬ್ಬಳ್ಳಿ ತಂಡವು ಇಲ್ಲಿನ ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಾರಾಜ ಟ್ರೋಫಿ ಟ್ವೆಂಟಿ–20 ಟೂರ್ನಿಯ ಶುಕ್ರವಾರದ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಗುಲ್ಬರ್ಗ ತಂಡವನ್ನು ಮಣಿಸಿತು.
ಟಾಸ್ ಗೆದ್ದ ಹುಬ್ಬಳ್ಳಿ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಗುಲ್ಬರ್ಗ ತಂಡದ ಆರಂಭಿಕ ಬ್ಯಾಟರ್‌ಗಳಾದ ಲವನೀತ್ ಸಿಸೊಡಿಯಾ (15) ಹಾಗೂ ಪ್ರಜ್ವಲ್ ಪವನ್ (23) ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. 38ಕ್ಕೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಆರ್.ಸ್ಮರಣ್ (ಔಟಾಗದೆ 84; 48 ಎಸೆತ, 4x6, 6x5) ಮತ್ತೊಮ್ಮೆ ಆಸರೆಯಾದರಲ್ಲದೇ, ಟೂರ್ನಿಯಲ್ಲೇ ಹೆಚ್ಚು ರನ್‌ಗಳಿಸಿದ (302) ಬ್ಯಾಟರ್ ಆದರು. ಬಾಲಂಗೋಚಿಗಳಾದ ಶಶಿಕುಮಾರ್ ಕಾಂಬ್ಳೆ (13) ಮತ್ತು ಪೃಥ್ವಿರಾಜ್ (14) ಅವರೊಂದಿಗೆ 7ಕ್ಕೆ 172 ರನ್ ಪೇರಿಸಲು ನೆರವಾದರು. ಟೂರ್ನಿಯಲ್ಲಿ 3ನೇ ಅರ್ಧ ಶತಕ ಸಿಡಿಸಿದರು.
ದೇವ್, ಕಾರ್ತಿಕೇಯ ಅಬ್ಬರ: ದೇವದತ್ತ ಪಡಿಕ್ಕಲ್ ನಾಯಕನ ಆಟವಾಡಿದರು. ಮೊಹಮ್ಮದ್ ತಾಹ (17) ಜೊತೆ ಮೊದಲ ವಿಕೆಟ್‌ಗೆ 22 ರನ್ ಸೇರಿಸಿದ ಅವರು, ಕಾರ್ತಿಕೇಯ ಜೊತೆ ರನ್ ಹೊಳೆ ಹರಿಸಿದರು. ಇವರಿಬ್ಬರೂ 12 ಬೌಂಡರಿ, 6 ಸಿಕ್ಸರ್ ಸಿಡಿಸಿ ನಡುಕ ಹುಟ್ಟಿಸಿದರಲ್ಲದೇ ಕ್ರೀಸ್‌ಗಳ ನಡುವೆ ಚುರುಕಿನ ರನ್‌ಗಳನ್ನೂ ಓಡಿ ಎದುರಾಳಿಗಳನ್ನು ದಣಿಸಿದರು. ತಂಡವನ್ನು ಗೆಲುವಿನ ದಡ ಸೇರಿಸಿದರು.
ಸಂಕ್ಷಿಪ್ತ ಸ್ಕೋರ್: ಗುಲ್ಬರ್ಗ ಮಿಸ್ಟಿಕ್ಸ್ 20 ಓವರ್‌ಗಳಲ್ಲಿ 7ಕ್ಕೆ 172 (ಆರ್.ಸ್ಮರಣ್ 84, ಪ್ರಜ್ವಲ್ ಪವನ್ 23, ಪೃಥ್ವಿರಾಜ್ 14. ಯಶ್‌ರಾಜ್ ಪೂಂಜ 25ಕ್ಕೆ 2) ಹುಬ್ಬಳ್ಳಿ ಟೈಗರ್ಸ್ 18.2 ಓವರ್‌ಗಳಲ್ಲಿ 2ಕ್ಕೆ 173 (ಕೆ.ಪಿ.ಕಾರ್ತಿಕೇಯ 81, ದೇವದತ್ತ ಪಡಿಕ್ಕಲ್ 69. ಮೋನಿಷ್ ರೆಡ್ಡಿ 22ಕ್ಕೆ 1) ಪಂದ್ಯದ ಆಟಗಾರ: ಕೆ.ಪಿ.ಕಾರ್ತಿಕೇಯ
ಇಂದಿನ ಪಂದ್ಯಗಳು: ಹುಬ್ಬಳ್ಳಿ ಟೈಗರ್ಸ್– ಮೈಸೂರು ವಾರಿಯರ್ಸ್. ಮಧ್ಯಾಹ್ನ 3.15
ಬೆಂಗಳೂರು ಬ್ಲಾಸ್ಟರ್ಸ್– ಗುಲ್ಬರ್ಗ ಮಿಸ್ಟಿಕ್ಸ್. ಸಂಜೆ 7.15
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.