ADVERTISEMENT

ಡೆಲ್ಲಿ ಕ್ಯಾಪಿಟಲ್ಸ್‌ ನೆಟ್ಸ್‌ನಲ್ಲಿ ರಿಷಭ್ ಅಭ್ಯಾಸ ಆರಂಭ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 16:17 IST
Last Updated 14 ಮಾರ್ಚ್ 2024, 16:17 IST
ವಿಶಾಖಪಟ್ಟಣದಲ್ಲಿ ಗುರುವಾರ ಅಭ್ಯಾಸ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ರಿಷಭ್ ಪಂತ್ –ಪಿಟಿಐ ಚಿತ್ರ
ವಿಶಾಖಪಟ್ಟಣದಲ್ಲಿ ಗುರುವಾರ ಅಭ್ಯಾಸ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ರಿಷಭ್ ಪಂತ್ –ಪಿಟಿಐ ಚಿತ್ರ   

ವಿಶಾಖಪಟ್ಟಣ: ಸುಮಾರು 14 ತಿಂಗಳುಗಳಿಂದ ಕ್ರಿಕೆಟ್ ನಿಂದ ದೂರವಿದ್ದ ರಿಷಭ್ ಪಂತ್ ಅವರು ಮತ್ತೆ  ಬ್ಯಾಟ್ ಹಿಡಿದಿದ್ದಾರೆ. 

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಮೂಲಕ ಮತ್ತೆ ಕಣಕ್ಕೆ ಮರಳಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ ತಂಡವನ್ನು ಮುನ್ನಡೆಸಲು ಸಿದ್ಧವಾಗಿರುವ ಅವರು ನೆಟ್ಸ್‌ ಅಭ್ಯಾಸ ಆರಂಭಿಸಿದ್ದಾರೆ. 

‘ರಿಷಭ್ ಇವತ್ತು ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ರೀತಿಯು ಮೊದಲಿನಂತೆಯೇ ಇತ್ತು. ಅವರು ಸುದೀರ್ಘ ಅವದಿಯಿಂದ ಕ್ರಿಕೆಟ್‌ನಿಂದ ದೂರವಿದ್ದು ಬಂದಿದ್ದಾರೆ ಎಂಬ ಭಾವನೆಯೇ ನಮಗೆ ಬರಲಿಲ್ಲ. ವೈಯಕ್ತಿಕವಾಗಿ ನನಗೆ ಹಾಗೂ ನಮ್ಮ ಕೋಚಿಂಗ್ ಪಡೆಗೆ ರಿಷಭ್ ಅವರ ಆಟದಲ್ಲಿ ಯಾವುದೇ ವ್ಯತ್ಯಾಸ ಕಾಣಲಿಲ್ಲ’ ಎಂದು ಕೋಚ್ ಪ್ರವೀಣ್ ಆಮ್ರೆ ಹೇಳಿದ್ದಾರೆ. 

ADVERTISEMENT

‘ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸಿದ ರಿಷಭ್ ಅಪಾರ ಶ್ರಮವಹಿಸಿ ಮತ್ತೆ ಸಿದ್ಧರಾಗಿದ್ದಾರೆ. ಅವರ ಪ್ರಯತ್ನಗಳನ್ನು ಮೆಚ್ಚಲೇಬೇಕು.  ಒಂದು ವರ್ಷದುದ್ದಕ್ಕೂ ಗಾಯದ ಚೇತರಿಕೆ ಮತ್ತು ಫಿಟ್‌ನೆಸ್‌ ಮರಳಿ ಗಳಿಸುವ ಪ್ರಯತ್ನ ಸಣ್ಣದಲ್ಲ’ ಎಂದು ಆಮ್ರೆ ಹೇಳಿದರು.

14 ತಿಂಗಳುಗಳ ಹಿಂದೆ ಸಂಭವಿಸಿದ್ದ ಕಾರು ಅಪಘಾತದಲ್ಲಿ ರಿಷಭ್ ತೀವ್ರವಾಗಿ ಗಾಯಗೊಂಡಿದ್ದರು. ಈಚೆಗಷ್ಟೇ ರಿಷಭ್ ಸಂಪೂರ್ಣ ಫಿಟ್ ಆಗಿದ್ದಾರೆಂದು ಬಿಸಿಸಿಐ ಘೋಷಿಸಿತ್ತು. 

ಡೆಲ್ಲಿ ತಂಡವು ತನ್ನ ಮೊದಲೆರಡೂ ಪಂದ್ಯಗಳನ್ನು ವಿಶಾಖಪಟ್ಟಣದಲ್ಲಿ ಆಡಲಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯಗಳು ನಡೆಯುತ್ತಿವೆ. 

‘ವಿಶಾಖಪಟ್ಟಣದ ಮೈದಾನದಲ್ಲಿ ಯಾವಾಗಲೂ ದೊಡ್ಡ ಸ್ಕೋರ್‌ಗಳು ದಾಖಲಾಗಿವೆ. ನಮಗೂ ಅಂತಹ ಪಿಚ್‌ಗಳೇ ಬೇಕು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.