ಲಂಡನ್: ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯವನ್ನು ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತದ ವನಿತೆಯರು ಶನಿವಾರ ನಡೆಯುವ ಎರಡನೇ ಪಂದ್ಯದಲ್ಲೂ ಪಾರಮ್ಯ ಮುಂದುವರಿಸುವ ಛಲದಲ್ಲಿದ್ದಾರೆ.
ಸೌತಾಂಪ್ಟನ್‌ನಲ್ಲಿ ನಡೆದ ಆರಂಭಿಕ ಪಂದ್ಯವನ್ನು ಹರ್ಮನ್‌ಪ್ರೀತ್ ಕೌರ್ ಬಳಗವು ನಾಲ್ಕು ವಿಕೆಟ್‌ಗಳಿಂದ ಗೆದ್ದು, ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಪಡೆದಿದೆ.
ಲಾರ್ಡ್ಸ್‌ನಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲೂ ಉತ್ತಮ ಪ್ರದರ್ಶನ ತೋರಿ ಸರಣಿ ವಶಮಾಡಿಕೊಳ್ಳುವತ್ತ ಭಾರತ ಚಿತ್ತ ಹರಿಸಿದೆ. ಮತ್ತೊಂದೆಡೆ ಆತಿಥೇಯ ತಂಡಕ್ಕೆ ಸರಣಿಯನ್ನು ಜೀವಂತವಾಗಿ ಇಡಲು ಈ ಪಂದ್ಯ ಮಹತ್ವದ್ದಾಗಿದೆ.
ಮೇ ತಿಂಗಳಿನಲ್ಲಿ ನಡೆದ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ಒಳಗೊಂಡ ತ್ರಿಕೋನ ಸರಣಿಯಲ್ಲಿ ಚಾಂಪಿಯನ್ ಆಗಿರುವ ಭಾರತ ತಂಡವು ಇದೀಗ ಸತತ ಎರಡನೇ ಸರಣಿ ಗೆಲುವನ್ನು ಎದುರು ನೋಡುತ್ತಿದೆ.
ಸೆಪ್ಟೆಂಬರ್ 30ರಿಂದ ಭಾರತದ ಆತಿಥ್ಯದಲ್ಲಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದ್ದು, ಅದರ ಪೂರ್ವತಯಾರಿ ನಿಟ್ಟಿನಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿ ಹೆಚ್ಚಿನ ಮಹತ್ವ ಪಡೆದಿದೆ.
ಮೊದಲ ಪಂದ್ಯದಲ್ಲಿ ಆತಿಥೇಯ ತಂಡವು 50 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 258 ರನ್ ಗಳಿಸಿತ್ತು. ದೀಪ್ತಿ ಶರ್ಮಾ (62*) ಅವರ ಅರ್ಧಶತಕದ ನೆರವಿನಿಂದ ಭಾರತ ತಂಡವು 10 ಎಸೆತಗಳು ಬಾಕಿ ಇರುವಂತೆ 6 ವಿಕೆಟ್‌ಗಳಿಗೆ 262 ರನ್ ಗಳಿಸಿ ಸರಣಿಯಲ್ಲಿ ಶುಭಾರಂಭ ಮಾಡಿತ್ತು.
ಇದಕ್ಕೂ ಮುನ್ನ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು 3–2ರಿಂದ ಗೆದ್ದು ಚಾರಿತ್ರಿಕ ಸಾಧನೆ ಮಾಡಿತ್ತು.
ಪಂದ್ಯ ಆರಂಭ: ಮಧ್ಯಾಹ್ನ 3.30
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.