ADVERTISEMENT

ಪಾಯಿಂಟ್ ಕಸಿದುಕೊಂಡ ನೈಟ್‌, ವ್ಯಾಟ್‌

ಇಂಗ್ಲೆಂಡ್ ಮಹಿಳಾ ತಂಡದ ಎದುರಿನ ಏಕದಿನ ಕ್ರಿಕೆಟ್‌ ಸರಣಿ: ಕೊನೆಯಲ್ಲಿ ಎಡವಿದ ಮಿಥಾಲಿ ಬಳಗ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2019, 20:12 IST
Last Updated 28 ಫೆಬ್ರುವರಿ 2019, 20:12 IST
ಮೂರನೇ ಪಂದ್ಯದಲ್ಲಿ ಸ್ಮೃತಿ ಮಂದಾನ ಅವರ ಆಟದ ಶೈಲಿ –ಪಿಟಿಐ ಚಿತ್ರ
ಮೂರನೇ ಪಂದ್ಯದಲ್ಲಿ ಸ್ಮೃತಿ ಮಂದಾನ ಅವರ ಆಟದ ಶೈಲಿ –ಪಿಟಿಐ ಚಿತ್ರ   

ಮುಂಬೈ: ಸೋಲಿನ ಪ್ರಪಾತದಿಂದ ಮೇಲೆದ್ದ ಇಂಗ್ಲೆಂಡ್ ತಂಡದವರು ಮಿಥಾಲಿ ರಾಜ್ ಬಳಗದ ಲೆಕ್ಕಾಚಾರ ಬುಡಮೇಲು ಮಾಡಿದರು. ನಾಯಕಿ ಹಿದರ್ ನೈಟ್ ಮತ್ತು ಡ್ಯಾನಿಯಲಿ ವ್ಯಾಟ್ ಜೋಡಿಯ ಅಮೋಘ ಆಟದ ಬಲದಿಂದ ಇಂಗ್ಲೆಂಡ್‌, ಇಲ್ಲಿ ಗುರುವಾರ ನಡೆದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತವನ್ನು ಮಣಿಸಿತು. ಮೊದಲ ಎರಡು ಪಂದ್ಯಗಳನ್ನು ಗೆದ್ದ ಮಿಥಾಲಿ ರಾಜ್ ಬಳಗ ಸರಣಿಯನ್ನು ತನ್ನದಾಗಿಸಿಕೊಂಡಿತು.

ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ (66; 74 ಎಸೆತ, 1 ಸಿಕ್ಸರ್, 8 ಬೌಂಡರಿ) ಮತ್ತು ಮೂರನೇ ಕ್ರಮಾಂಕದ ಪೂನಂ ರಾವತ್ (56; 97 ಎಸೆತ, 7 ಬೌಂ) ಅವರ 129 ರನ್‌ಗಳ ಜೊತೆಯಾಟದ ನೆರವಿನಿಂದ 205 ರನ್‌ ಕಲೆ ಹಾಕಿತು.

ಗುರಿ ಬೆನ್ನತ್ತಿದ ಇಂಗ್ಲೆಂಡ್‌ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. 15ನೇ ಓವರ್‌ನಲ್ಲಿ ತಂಡ 49 ರನ್‌ ಗಳಿಸಿ ಐದು ವಿಕೆಟ್ ಕಳೆದುಕೊಂಡಿ‌ತ್ತು. ಈ ಸಂದರ್ಭದಲ್ಲಿ ಒಂದಾದ ನೈಟ್‌ (47; 63 ಎಸೆತ, 6 ಬೌಂ) ಮತ್ತು ವ್ಯಾಟ್‌ (56; 82 ಎಸೆತ, 5 ಬೌಂ) 69 ರನ್‌ ಸೇರಿಸಿ ಜಯದ ಭರವಸೆ ಮೂಡಿಸಿದರು.

ADVERTISEMENT

ಜಾರ್ಜಿಯಾ ಎಲ್ವಿಸ್‌ ಅಜೇಯ 33 ರನ್ ಗಳಿಸಿ ತಂಡಕ್ಕೆ ಜಯ ಗಳಿಸಿಕೊಟ್ಟರು. ಮಹಿಳೆಯರ ಐಸಿಸಿ ಚಾಂಪಿಯನ್‌ಷಿಪ್‌ನ ಭಾಗವಾಗಿ ನಡೆದ ಸರಣಿಯ ಈ ಗೆಲುವು ಪ್ರವಾಸಿ ತಂಡಕ್ಕೆ ಮಹತ್ವದ ಎರಡು ಪಾಯಿಂಟ್‌ಗಳನ್ನು ಗಳಿಸಿಕೊಟ್ಟಿತು.

ಮಧ್ಯಮ ವೇಗಿ ಜೂಲನ್ ಗೋಸ್ವಾಮಿ ಆರಂಭದಲ್ಲೇ ಇಂಗ್ಲೆಂಡ್‌ಗೆ ‍ಪೆಟ್ಟು ನೀಡಿದರು. ಮೊದಲ ಮೂರು ವಿಕೆಟ್‌ಗಳನ್ನು ಅವರು ಕಬಳಿಸಿದರು. ನತಾಲಿ ಶಿವರ್ ಅವರನ್ನು ಕಾಟ್‌ ಆ್ಯಂಡ್ ಬೌಲ್ಡ್ ಮಾಡುವ ಮೂಲಕ ದೀಪ್ತಿ ಶರ್ಮಾ ಎದುರಾಳಿಗಳಿಗೆ ಇನ್ನಷ್ಟು ಸಂಕಷ್ಟ ತಂದಿತ್ತರು. ಸಾರಾ ಟೇಲರ್‌ ಅವರು ಶಿಖಾ ಪಾಂಡೆಗೆ ಬಲಿಯಾಗುವುದರೊಂದಿಗೆ ಭಾರತ ಪಾಳಯದಲ್ಲಿ ಸಂಭ್ರಮ ಅಲೆದಾಡಿತು. ಆದರೆ ನಂತರ ಇಂಗ್ಲೆಂಡ್ ಮೇಲುಗೈ ಸಾಧಿಸಿತು.

ಬ್ರುಂಟ್‌ಗೆ ಐದು ವಿಕೆಟ್‌:ಸ್ಫೋಟಕ ಬ್ಯಾಟ್ಸ್‌ವುಮನ್ ಜೆಮಿಮಾ ರಾಡ್ರಿಗಸ್ ಅವರನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಭಾರತಕ್ಕೆ ಮೊದಲ ಓವರ್‌ನಲ್ಲೇ ಪೆಟ್ಟು ನಿಡಿದ ಕ್ಯಾಥರಿನ್ ಬ್ರುಂಟ್‌ ಒಟ್ಟು ಐದು ವಿಕೆಟ್ ಕಬಳಿಸಿದರು. ಮಂದಾನ ಮತ್ತು ರಾವತ್ ಜೊತೆಯಾಟ ಮುರಿದು ಬಿದ್ದ ನಂತರ ಮಿಥಾಲಿ ಬಳಗ ಮತ್ತೊಮ್ಮೆ ಕುಸಿತ ಕಂಡಿತು. ಆರನೇ ಕ್ರಮಾಂಕದ ದೀಪ್ತಿ ಶರ್ಮಾ ಮತ್ತು ಒಂಬತ್ತನೇ ಕ್ರಮಾಂಕದ ಶಿಖಾ ಪಾಂಡೆ ಛಲದಿಂದ ಹೋರಾಡಿ ಮೊತ್ತ 200 ದಾಟುವಂತೆ ಮಾಡಿದರು. ಮಿಥಾಲಿ ರಾಜ್ ನಿರಾಸೆ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.