ಚೆನ್ನೈ: ಇಂಗ್ಲೆಂಡ್ ಕ್ರಿಕೆಟಿಗ ಬೆನ್ ಸ್ಟೋಕ್ಸ್ ಅವರು ಮುಂದಿನ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡುವುದಿಲ್ಲ.
ಕಾರ್ಯಭಾರ ನಿರ್ವಹಣೆಯ ಅಂಗವಾಗಿ ತಾವು ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಡಳಿತಕ್ಕೆ ತಿಳಿಸಿದ್ದಾರೆ.
2023ರ ಆವೃತ್ತಿಯಲ್ಲಿ ಅವರು ಚೆನ್ನೈ ತಂಡಕ್ಕೆ ಸೇರ್ಪಡೆಯಾಗಿದ್ದರು. ತಂಡವು ಅವರನ್ನು ₹ 16.25 ಕೋಟಿ ಮೌಲ್ಯಕ್ಕೆ ಪಡೆದಿತ್ತು. ಆದರೆ ಕೇವಲ ಎರಡು ಪಂದ್ಯಗಳಲ್ಲಿ ಆಡಿದ್ದರು. ಮಂಡಿನೋವು ಮತ್ತು ಗಾಯದಿಂದ ಬಳಲಿದ್ದರು.
‘ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಮತ್ತು ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರು ಮುಂಬರುವ ಐಪಿಎಲ್‌ನಲ್ಲಿ ಆಡುವುದಿಲ್ಲವೆಂದು ತಿಳಿಸಿದ್ದಾರೆ. ತಮ್ಮ ಕಾರ್ಯಭಾರ ಒತ್ತಡವನ್ನು ನಿರ್ವಹಿಸಲು ಅವರು ನಿರ್ಧಾರ ಕೈಗೊಂಡಿದ್ದಾರೆ’ ಎಂದು ಚೆನ್ನೈ ತಂಡದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇಂಗ್ಲೆಂಡ್ ತಂಡವು ಐಪಿಎಲ್‌ಗೂ ಮುನ್ನ ಭಾರತದ ಆತಿಥ್ಯದಲ್ಲಿ ನಡೆಯುವ ಐದು ಟೆಸ್ಟ್‌ಗಳ ಸರಣಿಯಲ್ಲಿ ಆಡಲಿದೆ. ಜೂನ್ ತಿಂಗಳಲ್ಲಿನಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಆದ್ದರಿಂದ ಈ ಎರಡು ಮಹತ್ವದ ಸರಣಿಗಳಿಗಾಗಿ ಬೆನ್ ಸ್ಟೋಕ್ಸ್ ಐಪಿಎಲ್‌ನಿಂದ ದೂರವುಳಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.