ADVERTISEMENT

ಮಹಿಳೆಯರ ಏಕದಿನ ವಿಶ್ವಕಪ್ ಕ್ರಿಕೆಟ್: ಸೆಮಿಫೈನಲ್‌ಗೆ ಇಂಗ್ಲೆಂಡ್‌

ಮಹಿಳೆಯರ ಏಕದಿನ ವಿಶ್ವಕಪ್ ಕ್ರಿಕೆಟ್‌ ಟೂರ್ನಿ

ಪಿಟಿಐ
Published 27 ಮಾರ್ಚ್ 2022, 12:28 IST
Last Updated 27 ಮಾರ್ಚ್ 2022, 12:28 IST
ಸೋಫಿ ಎಕ್ಲೆಸ್ಟೋನ್‌– ಎಎಫ್‌ಪಿ ಚಿತ್ರ
ಸೋಫಿ ಎಕ್ಲೆಸ್ಟೋನ್‌– ಎಎಫ್‌ಪಿ ಚಿತ್ರ   

ವೆಲ್ಲಿಂಗ್ಟನ್‌: ಸೋಫಿಯಾ ಡಂಕ್ಲಿ ಅವರ ಬ್ಯಾಟಿಂಗ್‌ ಮತ್ತು ಸೋಫಿ ಎಕ್ಲೆಸ್ಟೋನ್ ಅವರ ಬೌಲಿಂಗ್ ಬಲದಿಂದ ಹಾಲಿ ಚಾಂಪಿಯನ್‌ ಇಂಗ್ಲೆಂಡ್ ತಂಡವು ಬಾಂಗ್ಲಾದೇಶವನ್ನು ಮಣಿಸಿ ಮಹಿಳಾ ಏಕದಿನ ವಿಶ್ವಕಪ್ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿತು.

ಬೇಸಿನ್ ರಿಸರ್ವ್‌ ಕ್ರೀಡಾಂಗಣದಲ್ಲಿಭಾನುವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್‌ಗೆ 100 ರನ್‌ಗಳ ಗೆಲುವು ಒಲಿಯಿತು.

ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಆರು ವಿಕೆಟ್‌ಗೆ 234 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಬಾಂಗ್ಲಾ 48ನೇ ಓವರ್‌ನಲ್ಲಿ 134 ರನ್‌ಗಳಿಗೆ ಎಲ್ಲ ವಿಕೆಟ್‌ ಒಪ್ಪಿಸಿತು.

ADVERTISEMENT

ಇಂಗ್ಲೆಂಡ್‌ ಇನಿಂಗ್ಸ್‌ನಲ್ಲಿ ಸೋಫಿಯಾ ಡಂಕ್ಲಿ (67, 72ಎ, 4X8) ಅವರೊಂದಿಗೆ ನಾಟ್‌ ಸೀವರ್‌ (40), ಟ್ಯಾಮಿ ಬೀಮೊಂಟ್‌ (33) ಕೂಡ ಮಿಂಚಿದರು. ಬಾಂಗ್ಲಾದ ಸಲ್ಮಾ ಖಾತೂನ್‌ (10ಕ್ಕೆ 2) ಎದುರಾಳಿ ತಂಡಕ್ಕೆ ಸ್ವಲ್ಪ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು. ಗುರಿ ಬೆನ್ನತ್ತಿದ ಬಾಂಗ್ಲಾ ಉತ್ತಮ ಆರಂಭವನ್ನೇ ಪಡೆಯಿತು. ಶಮಿಮಾ ಸುಲ್ತಾನಾ (23) ಮತ್ತು ಶರ್ಮಿನ್‌ ಅಖ್ತರ್‌ (23) ಮೊದಲ ವಿಕೆಟ್‌ ಜೊತೆಯಾಟದಲ್ಲಿ 42 ರನ್‌ ಸೇರಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಲತಾ ಮಂಡಲ್‌ (30) ಅವರನ್ನು ಹೊರತುಪಡಿಸಿ ಉಳಿದವರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಸೋಫಿ (15ಕ್ಕೆ 3) ಮತ್ತು ಚಾರ್ಲಿ ಡೀನ್‌ (31ಕ್ಕೆ 3) ಇಂಗ್ಲೆಂಡ್‌ ಬೌಲಿಂಗ್‌ನಲ್ಲಿ ಪರಿಣಾಮಕಾರಿ ಎನಿಸಿದರು.

ಮೊದಲ ಬಾರಿಗೆ ಆಡಿದ ಬಾಂಗ್ಲಾದೇಶ ತಂಡವು ಟೂರ್ನಿಯಲ್ಲಿ ಏಳನೇ ಸ್ಥಾನ ಗಳಿಸಿತು. ಎಂಟು ಪಂದ್ಯಗಳಲ್ಲಿ ಕೇವಲ ಒಂದು ಜಯ ಸಾಧಿಸಿತು.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್‌: 50 ಓವರ್‌ಗಳಲ್ಲಿ 6 ವಿಕೆಟ್‌ಗೆ 234 (ಸೋಫಿಯಾ ಡಂಕ್ಲಿ 67, ನಾಟ್‌ ಸೀವರ್‌ 40, ಟಾಮಿ ಬಿಮೋಂಟ್‌ 33, ಆ್ಯಮಿ ಜೋನ್ಸ್ 31; ಜಹಾನಾರ ಆಲಂ 39ಕ್ಕೆ 1, ಸಲ್ಮಾ ಖಾತೂನ್‌ 46ಕ್ಕೆ 2, ಫಾಹಿಮಾ ಖಾತೂನ್‌ 24ಕ್ಕೆ 1, ರಿತು ಮಂಡಲ್ 32ಕ್ಕೆ 1). ಬಾಂಗ್ಲಾದೇಶ: 48 ಓವರ್‌ಗಳಲ್ಲಿ 134 (ಶಮಿಮಾ ಸುಲ್ತಾನಾ 23,ಶರ್ಮಿನ್‌ ಅಖ್ತರ್‌ 23, ಲತಾ ಮಂಡಲ್‌ 30, ನಿಗರ್ ಸುಲ್ತಾನ 22; ಸೋಫಿ ಎಕ್ಲೆಸ್ಟೋನ್‌ 15ಕ್ಕೆ 3, ಚಾರ್ಲಿ ಡೀನ್‌ 31ಕ್ಕೆ 3, ಫ್ರೆಯಾ ಡೇವಿಸ್‌ 36ಕ್ಕೆ 2). ಫಲಿತಾಂಶ: ಇಂಗ್ಲೆಂಡ್‌ ತಂಡಕ್ಕೆ 100 ರನ್‌ಗಳ ಜಯ, ಸೆಮಿಫೈನಲ್ ಪ್ರವೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.