ADVERTISEMENT

ಎರಡನೇ ಟಿ20: ಸಾಲ್ಟ್‌, ಬ್ರೂಕ್‌ ಮಿಂಚಿನ ಆಟ- ಇಂಗ್ಲೆಂಡ್‌ಗೆ ಮಣಿದ ಕಿವೀಸ್‌

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 12:48 IST
Last Updated 20 ಅಕ್ಟೋಬರ್ 2025, 12:48 IST
<div class="paragraphs"><p><strong>ಫಿಲ್‌ ಸಾಲ್ಟ್‌</strong></p></div>

ಫಿಲ್‌ ಸಾಲ್ಟ್‌

   

ಪಿಟಿಐ ಚಿತ್ರ

ಕ್ರೈಸ್ಟ್‌ಚರ್ಚ್‌: ಆರಂಭ ಆಟಗಾರ ಫಿಲ್‌ ಸಾಲ್ಟ್‌ ಮತ್ತು ನಾಯಕ ಹ್ಯಾರಿ ಬ್ರೂಕ್‌ ಅವರ ಸ್ಫೋಟಕ  ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ತಂಡ, ಸೋಮವಾರ ಇಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 65 ರನ್‌ಗಳಿಂದ ಸೋಲಿಸಿತು.

ADVERTISEMENT

‌ಬ್ಲ್ಯಾಕ್‌ ಕ್ಯಾಪ್ಸ್‌ ನಾಯಕ ಮಿಚೆಲ್‌ ಸ್ಯಾಂಟ್ನರ್‌ ಟಾಸ್‌ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಬಳಿಕ ಪ್ರವಾಸಿ ತಂಡ 20 ಓವರುಗಳಲ್ಲಿ 4 ವಿಕೆಟ್‌ಗೆ 236 ರನ್‌ಗಳ ದೊಡ್ಡ ಮೊತ್ತ ಪೇರಿಸಿತು.

ಸಾಲ್ಟ್‌ 56 ಎಸೆತಗಳಲ್ಲಿ ಒಂದು ಸಿಕ್ಸರ್‌, 11 ಬೌಂಡರಿಗಳಿದ್ದ 85 ರನ್ ಬಾರಿಸಿದರು. ‘ಪಂದ್ಯದ ಆಟಗಾರ’ ಬ್ರೂಕ್ ಸಹ ಆತಿಥೇಯ ತಂಡದ ಬೌಲರ್‌ಗಳ ಮೇಲೆರಗಿ ಕೇವಲ 35 ಎಸೆತಗಳಲ್ಲಿ 78 ರನ್ ಚಚ್ಚಿದರು. ಇದರಲ್ಲಿ ಆರು ಬೌಂಡರಿ ಮತ್ತು ಐದು ಸಿಕ್ಸರ್‌ಗಳೂ ಇದ್ದವು. ಮೂರನೇ ವಿಕೆಟ್‌ಗೆ ಇವರಿಬ್ಬರು ಬರೇ 69 ಎಸೆತಗಳಲ್ಲಿ 129 ರನ್ ಜೊತೆಯಾಟವಾಡಿದರು.

ನ್ಯೂಜಿಲೆಂಡ್‌ ತಂಡ 18 ಓವರುಗಳಲ್ಲಿ 171 ರನ್‌ಗಳಿಗೆ ಆಟ ಮುಗಿಸಿತು. ಆರಂಭ ಆಟಗಾರ ಟಿಮ್‌ ಸೀಫರ್ಟ್ (39, 29ಎ) ಮತ್ತು ಸ್ಯಾಂಟ್ನರ್‌ (36, 15ಎ, 4x3, 6x3) ಮಾತ್ರ ಕೊಂಚ ಪ್ರತಿರೋಧ ಪ್ರದರ್ಶಿಸಿದರು. ಇಂಗ್ಲೆಂಡ್ ಲೆಗ್‌ ಬ್ರೇಕ್‌ ಬೌಲರ್ ಅದಿಲ್ ರಶೀದ್‌ 32 ರನ್‌ಗಳಿಗೆ 4 ವಿಕೆಟ್‌ ಪಡೆದರೆ, ಎಡಗೈ ಸ್ಪಿನ್ನರ್ ಲಿಯಾಂ ಡಾಸನ್ 38 ರನ್ನಿಗೆ 2 ವಿಕೆಟ್ ಪಡೆದರು.

ಟಿ20 ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ಆಕ್ಲೆಂಡ್‌ನ ಈಡನ್‌ ಪಾರ್ಕ್‌ನಲ್ಲಿ ಗುರುವಾರ ರಾತ್ರಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಮಳೆಯಿಂದ ಸ್ಥಗಿತಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.