ADVERTISEMENT

ಇಂಗ್ಲೆಂಡ್‌ ಬೃಹತ್‌ ಗುರಿಗೆ ಅಫ್ಗಾನ್‌ ತಾಳ್ಮೆಯ ಉತ್ತರ

ವಿಶ್ವಕಪ್‌ ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 16:45 IST
Last Updated 18 ಜೂನ್ 2019, 16:45 IST
   

ಮ್ಯಾಂಚೆಸ್ಟರ್‌: ಇಂಗ್ಲೆಂಡ್‌ ನೀಡಿದ ಬೃಹತ್ ಮೊತ್ತದ ಗುರಿಯನ್ನು ಸೇರಲು ಅಫ್ಗಾನಿಸ್ತಾನ ತಾಳ್ಮೆಯ ಪ್ರಯತ್ನ ನಡೆಸುತ್ತಿದೆ. ಗಳಿಸಬೇಕಾದ ರನ್‌ ಮತ್ತು ಉಳಿದಿರುವ ಎಸೆತಗಳ ಅಂತರ ಹೆಚ್ಚುತ್ತಲೇ ಇದೆ.

ಅಫ್ಗಾನಿಸ್ತಾನ 42.4ಓವರ್‌ಗಳಲ್ಲಿ 5ವಿಕೆಟ್‌ ನಷ್ಟಕ್ಕೆ 210ರನ್‌ ಗಳಿಸಿದೆ.ಅರ್ಧ ಶತಕ ಗಳಿಸಿರುವ ಹಶ್ಮತುಲ್ಲಾ ಶಹೀದಿ(67) ತಂಡವನ್ನು ಮುನ್ನಡೆಸಿದರು.

ಕ್ಷಣಕ್ಷಣದ ಸ್ಕೋರ್‌:https://bit.ly/2ImDxL4

ADVERTISEMENT

ಆರಂಭದಲ್ಲಿಯೇ ನೂರ್‌ ಅಲಿ ಜದ್ರಾನ್‌ ವಿಕೆಟ್‌ ಕಳೆದುಕೊಂಡ ಅಫ್ಗಾನ್‌ ನಿಧಾನ ಗತಿಯ ಆಟಕ್ಕೆ ಮುಂದಾಯಿತು. ರನ್‌ ಗಳಿಸುವುದಕ್ಕಿಂತಲೂ ವಿಕೆಟ್‌ ಉಳಿಸಿಕೊಳ್ಳುವ ಪ್ರಯತ್ನ ಮಾಡಿತು. ಈ ಪ್ರಯತ್ನದ ನಡುವೆಯೂ ಇಂಗ್ಲಿಷ್‌ ಬೌಲರ್‌ಗಳು 3 ವಿಕೆಟ್‌ ಕಬಳಿಸಿದರು. ಅಫ್ಗಾನ್‌ 104 ದಾಟುವ ಮುನ್ನ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡಿತು.

ಬಿರುಸಿನ ಆಟ ಆಡಿದ ಗುಲ್ಬದಿನ್‌ ನೈಬ್‌(37 ರನ್‌; 28 ಎಸೆತ) ಮತ್ತು ತಾಳ್ಮೆಯ ಆಟ ಆಡಿದ ರಹಮತ್‌ ಷಾ(46) ತಂಡಕ್ಕೆ ಆಸರೆಯಾದರು. ನಂತರದಲ್ಲಿ ಅಸ್ಗರ್‌ ಅಫ್ಗಾನ್‌ ಮತ್ತು ಹಶ್ಮತುಲ್ಲಾ ಶಹೀದಿಜತೆಯಾಟದಿಂದ ತಂಡ 200ರನ್‌ ಸಮೀಪಿಸಿತು. 44 ರನ್‌ ಗಳಿಸಿದ್ದ ಅಸ್ಗರ್‌, ಆದಿಲ್‌ ರಶೀದ್‌ ಎಸೆತದಲ್ಲಿ ಕ್ಯಾಚ್‌ ನೀಡಿದರು.

ಆದಿಲ್‌ ಶಾಹಿದಿ 3 ವಿಕೆಟ್‌, ಮಾರ್ಕ್ ವುಡ್‌ ಹಾಗೂ ಜೋಫ್ರಾ ಆರ್ಚರ್‌ ತಲಾ 1 ವಿಕೆಟ್‌ ಪಡೆದರು.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್‌ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 397 ರನ್‌ ಗಳಿಸಿದೆ. ಒಂದೇ ಇನಿಂಗ್ಸ್‌ನಲ್ಲಿ 25 ಸಿಕ್ಸರ್‌ಗಳು ದಾಖಲಾಗಿ ಹೊಸ ದಾಖಲೆ ಸೃಷ್ಟಿಸಿತು.

ನಾಯಕಇಯಾನ್‌ ಮಾರ್ಗನ್‌ ಮಿಂಚಿನ ಆಟದಿಂದಾಗಿ ಸವಾಲಿನ ಮೊತ್ತ ಗಳಿಸಿತು. ಒಂದೇ ಇನಿಂಗ್ಸ್‌ನಲ್ಲಿ 17 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಮಾರ್ಗನ್‌ ವಿಶ್ವಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ದಾಖಲೆ ಬರೆದರು.ಪ್ರಸಕ್ತ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ದಾಖಲಿಸಿದ ಸಾಧನೆ ಮಾಡಿದರು. ಕೇವಲ 57 ಎಸೆತಗಳಲ್ಲಿ ಶತಕ ಗಳಿಸಿದ ಅವರು, 71 ಎಸೆತಗಳಲ್ಲಿ 148 ರನ್‌(17 ಸಿಕ್ಸರ್‌, 4 ಬೌಂಡರಿ) ಗಳಿಸಿ ವಿಕೆಟ್‌ ಒಪ್ಪಿಸಿದರು.

3 ಸಿಕ್ಸರ್‌, 8 ಬೌಂಡರಿ ಒಳಗೊಂಡ 90 ರನ್‌ ಗಳಿಸಿದ್ದ ಜಾನಿ ಬೆಸ್ಟೊ, ಗುಲ್ಬದಿನ್‌ ನೈಬ್‌ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು. ಅಪಾಯಕಾರಿಯಾಗಿ ಪರಿಣಮಿಸಿದ್ದ ಜಾನಿ ಬೆಸ್ಟೊ ಶತಕದ ಅಂಚಿನಲ್ಲಿ ಎಡವಿದರು.ರೂಟ್‌ ಸಹ ಬಿರುಸಿನ ಆಟದ ಮೂಲಕ 82 ಎಸೆತಗಳಲ್ಲಿ 88 ರನ್‌(5 ಬೌಂಡರಿ, 1 ಸಿಕ್ಸರ್) ಗಳಿಸಿದರು.

ಅಫ್ಗಾನ್ ಪರ,ದವ್ಲತ್‌ ಜದ್ರಾನ್‌ ಮತ್ತು ಗುಲ್ಬದಿನ್‌ ನೈಬ್‌ ತಲಾ 3 ವಿಕೆಟ್‌ ಕಬಳಿಸಿದರು. 9 ಓವರ್‌ ಬೌಲಿಂಗ್‌ ನಡೆಸಿದ ರಶೀದ್‌ ಖಾನ್‌ ಯಾವುದೇ ವಿಕೆಟ್‌ ಪಡೆಯದೇ 110 ರನ್‌ ನೀಡಿ ದುಬಾರಿ ಬೌಲರ್ ಎನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.