ADVERTISEMENT

ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್ ಆರೋಗ್ಯ ಸ್ಥಿತಿ ಗಂಭೀರ

ಪಿಟಿಐ
Published 15 ಆಗಸ್ಟ್ 2020, 13:51 IST
Last Updated 15 ಆಗಸ್ಟ್ 2020, 13:51 IST
ಚೇತನ್ ಚೌಹಾಣ್
ಚೇತನ್ ಚೌಹಾಣ್   

ನವದೆಹಲಿ: ಭಾರತ ತಂಡದ ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್ ಅವರ ಆರೋಗ್ಯ ಸ್ಥಿತಿಯು ಮತ್ತಷ್ಟು ಬಿಗಡಾಯಿಸಿದೆ. ಅವರಿಗೆ ಕೃತಕ ಉಸಿರಾಟದ ಚಿಕಿತ್ಸೆ ನೀಡಲಾಗುತ್ತಿದೆ.

73 ವರ್ಷದ ಚೇತನ್ ಅವರು ಗುರುಗ್ರಾಮ್‌ನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ಧಾರೆ. ಆದರೆ ಅವರು ಬಹುಅಂಗಾಂಗ ವೈಫಲ್ಯಕ್ಕೊಳಗಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಉತ್ತರ ಪ್ರದೇಶ ರಾಜ್ಯ ಸರ್ಕಾರದಲ್ಲಿ ಸಚಿವ ಕೂಡ ಆಗಿರುವ ಚೇತನ್, ಹೋದ ಜುಲೈ 12ರಂದು ಕೋವಿಡ್ –19 ಸೋಂಕಿಗೆ ತುತ್ತಾಗಿದ್ದರು. ಆಗ ಅವರನ್ನು ಲಖನೌನ ಸಂಜಯ್ ಗಾಂಧಿ ಪಿಜಿ ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ADVERTISEMENT

ಆದರೆ ಆಗಿನಿಂದಲೂ ಅವರು ಚೇತರಿಸಿಕೊಂಡಿಲ್ಲ. ಕೆಲವು ದಿನಗಳ ಹಿಂದಷ್ಟೇ ಅವರನ್ನು ಗುರುಗ್ರಾಮದಲ್ಲಿರುವ ಮೇದಾಂತ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

'ಇವತ್ತು ಬೆಳಿಗ್ಗೆ (ಶನಿವಾರ) ಚೇತನ್ ಅವರ ಮೂತ್ರಕೋಶ ನಿಷ್ಕ್ರೀಯವಾಗಿದೆ. ಬಹುಅಂಗಾಂಗ ವೈಫಲ್ಯವೂ ಆಗುತ್ತಿದೆ. ಅವರಿಗೆ ವೆಂಟಿಲೇಟರ್ ಸೌಲಭ್ಯ ಒದಗಿಸಲಾಗಿದೆ. ಅವರು ಚೇತರಿಸಿಕೆಗಾಗಿ ಅಭಿಮಾನಿಗಳು ಮತ್ತು ಕುಟಂಬದ ಸದಸ್ಯರು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ'ಎಂದು ದೆಹಲಿ ಡಿಸ್ಟ್ರಿಕ್ಸ್ಟ್ ಕ್ರಿಕೆಟ್ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದ ಅವರು 40 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. ಏಳು ಏಕದಿನ ಪಂದ್ಯಗಳಲ್ಲಿಯೂ ಭಾರತವನ್ನು ಪ್ರತಿನಿಧಿಸಿದ್ದರು.

ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಡಿಡಿಸಿಎಗೆ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಮತ್ತು ಉತ್ತರ ವಲಯದ ಕ್ರಿಕೆಟ್ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು. ರಾಜಕೀಯದಲ್ಲಿಯೂ ಸಕ್ರಿಯರಾಗಿರುವ ಅವರು ಬಿಜೆಪಿಯಿಂದ ಸಂಸದರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.