ADVERTISEMENT

ಭಾರತ ಕ್ರಿಕೆಟ್‌ನ ಲೆಜೆಂಡರಿ ಸ್ಪಿನ್ನರ್‌ ಬಿಶನ್‌ ಸಿಂಗ್‌ ಬೇಡಿ ಇನ್ನು ನೆನಪು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಅಕ್ಟೋಬರ್ 2023, 11:47 IST
Last Updated 23 ಅಕ್ಟೋಬರ್ 2023, 11:47 IST
<div class="paragraphs"><p>ಬಿಶನ್‌ ಸಿಂಗ್‌ ಬೇಡಿ</p></div>

ಬಿಶನ್‌ ಸಿಂಗ್‌ ಬೇಡಿ

   

ಎಕ್ಸ್‌ ಚಿತ್ರ- @DineshKarthik

ನವದೆಹಲಿ: ಭಾರತ ಕ್ರಿಕೆಟ್‌ ತಂಡದಲ್ಲಿ ಸ್ಪಿನ್‌ ಸರ್ದಾರ್‌ ಎಂದೇ ಗುರುತಿಸಿಕೊಂಡಿದ್ದ ಬಿಶನ್‌ ಸಿಂಗ್‌ ಬೇಡಿ (77) ಅವರು ನಿಧನರಾಗಿದ್ದಾರೆ. 1946 ಸೆಪ್ಟೆಂಬರ್‌ 25ರಂದು ಜನಿಸಿದ್ದ ಇವರು ಮೂಲತಃ ಅಮೃತಸರದವರು. ಸಿಂಗ್‌ ತಮ್ಮ ಕ್ರಿಕೆಟ್‌ ಜೀವನದ ಸಾಧನೆಗಾಗಿ 1970ರಲ್ಲಿ ಪದ್ಮಶ್ರೀ ಹಾಗೂ 2004 ರಲ್ಲಿ ಸಿ.ಕೆ.ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ADVERTISEMENT

1966ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ, 1979ರವರೆಗೆ ಭಾರತ ತಂಡವನ್ನು ಅವರು ಪ್ರತಿನಿಧಿಸಿದ್ದರು. ಅಮೃತಸರ ಮೂಲದವರಾದರೂ ದೇಶೀಯ ಅಂಗಳದಲ್ಲಿ ಅವರು ದೆಹಲಿ ಪರ ಆಟವಾಡಿದ್ದರು.

ಅತ್ಯಂತ ನುರಿತ ಎಡಗೈ ಸ್ಪಿನ್ನರ್ ಆಗಿದ್ದ ಇವರ ಬೌಲಿಂಗ್ ಶೈಲಿಯು ವಿಭಿನ್ನವಾಗಿತ್ತು. ಎದುರಾಳಿ ಬ್ಯಾಟ್ಸ್‌ಮನ್‌ಗಳ ತಂತ್ರಗಾರಿಕೆಯನ್ನು ಅರಿತು ಬೌಲಿಂಗ್‌ ಮಾಡುವಲ್ಲಿ ಸಿಂಗ್‌ ನಿಪುಣರಾಗಿದ್ದರು.

ತಮ್ಮ 21 ನೇ ವಯಸ್ಸಿನಲ್ಲಿ ಭಾರತ ತಂಡ ಸೇರಿಕೊಂಡ ಅವರು ಚೊಚ್ಚಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೋಲ್ಕತ್ತದಲ್ಲಿ  ಆಟವಾಡಿದ್ದರು.

1967 ಮತ್ತು 1979 ರ ನಡುವಿನ 12 ವರ್ಷಗಳ ವೃತ್ತಿಜೀವನದಲ್ಲಿ 67 ಟೆಸ್ಟ್‌ಗಳ ಪಂದ್ಯಗಳನ್ನು ಆಡಿದ್ದಾರೆ.

ಸಿಂಗ್‌ ಅವರು 22 ಟೆಸ್ಟ್‌ಗಳಲ್ಲಿ ಭಾರತದ ನಾಯಕತ್ವವನ್ನು ನಿರ್ವಹಿಸಿದ್ದರು. ಮತ್ತು 1975 ರಲ್ಲಿ ಪೂರ್ವ ಆಫ್ರಿಕಾ ವಿರುದ್ಧ ಭಾರತದ ಮೊದಲ ಏಕದಿನ ಪಂದ್ಯ ಆಡಿದರು, ಅಲ್ಲಿ ಅವರು 12 ಓವರ್‌ಗಳು, ಎಂಟು ಮೇಡನ್‌ಗಳನ್ನು ಬೌಲ್ ಮಾಡಿದರು, ಆರು ರನ್ ನೀಡಿ ಒಂದು ವಿಕೆಟ್ ಪಡೆದರು. ಬಿಶನ್‌ ಸಿಂಗ್‌ ಅವರನ್ನು ಶ್ರೇಷ್ಠ ಎಡಗೈ ಸ್ಪಿನ್ನರ್ ಎಂದು ಗುರುತಿಸಲಾಗುತ್ತದೆ.

ಎ. ಪ್ರಸನ್ನ, ಬಿ.ಎಸ್ ಚಂದ್ರಶೇಖರ್ ಮತ್ತು ಎಸ್. ವೆಂಕಟರಾಘವನ್ ಅವರೊಂದಿಗೆ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸ್ಪಿನ್ ಕ್ವಾರ್ಟೆಟ್ ಅನ್ನು ರಚಿಸಿ, ವಿಶ್ವಾದ್ಯಂತ ಸ್ಪಿನ್ ಬೌಲಿಂಗ್ ಕಲೆಯ ಕ್ರಾಂತಿಗೆ ನಾಂದಿಯಾದರು.

ಇಂಗ್ಲಿಷ್ ಕೌಂಟಿ ಕ್ರಿಕೆಟ್ ಸರ್ಕ್ಯೂಟ್‌ನಲ್ಲಿ ಯಶಸ್ವಿ ಸಾಗರೋತ್ತರ ಆಟಗಾರರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. 1972 ಮತ್ತು 1977 ರ ನಡುವೆ 102 ಪಂದ್ಯಗಳಲ್ಲಿ ನಾರ್ಥಾಂಪ್ಟನ್‌ಶೈರ್‌ ತಂಡದ ಪರ ಕಣಕ್ಕಿಳಿದಿದ್ದ ಸಿಂಗ್ ಒಟ್ಟು 434 ವಿಕೆಟ್‌ಗಳನ್ನು ಕಿತ್ತು ದಾಖಲೆ ಬರೆದಿದ್ದರು. ಈ ದಿಗ್ಗಜ ಆಟಗಾರ ಇನ್ನು ನೆನಪು ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.