ADVERTISEMENT

‘ದ ಹಂಡ್ರೆಡ್‌‘ ಟೂರ್ನಿ: ಭಾರತದ ನಾಲ್ವರು ಆಟಗಾರ್ತಿಯರಿಗೆ ಬಿಸಿಸಿಐ ಅನುಮತಿ

ಪಿಟಿಐ
Published 4 ಮೇ 2021, 13:53 IST
Last Updated 4 ಮೇ 2021, 13:53 IST
ಹರ್ಮನ್‌ಪ್ರೀತ್ ಕೌರ್‌– ರಾಯಿಟರ್ಸ್ ಚಿತ್ರ
ಹರ್ಮನ್‌ಪ್ರೀತ್ ಕೌರ್‌– ರಾಯಿಟರ್ಸ್ ಚಿತ್ರ   

ನವದೆಹಲಿ: ಇಂಗ್ಲೆಂಡ್‌ನಲ್ಲಿ ಮೊದಲ ಬಾರಿ ನಡೆಯಲಿರುವ ‘ದ ಹಂಡ್ರೆಡ್‌‘ ಕ್ರಿಕೆಟ್‌ ಟೂರ್ನಿಯಲ್ಲಿ ಆಡಲು ಹರ್ಮನ್‌ಪ್ರೀತ್ ಕೌರ್‌ ಸೇರಿದಂತೆ ಭಾರತದ ನಾಲ್ವರು ಆಟಗಾರ್ತಿಯರಿಗೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಿದೆ.

ಜುಲೈ 21ರಿಂದ ನಡೆಯಲಿರುವ ‘100 ಎಸೆತಗಳ ಟೂರ್ನಿ‘ಗೆ ಹರ್ಮನ್‌ಪ್ರೀತ್ ಜೊತೆಗೆ ಸ್ಮೃತಿ ಮಂದಾನ ಹಾಗೂ ದೀಪ್ತಿ ಶರ್ಮಾ ಅನುಮತಿ ಗಿಟ್ಟಿಸಿದ್ದು, ಇನ್ನೊಬ್ಬ ಆಟಗಾರ್ತಿ ಯಾರೆಂದು ತಿಳಿದುಬಂದಿಲ್ಲ.

‘ಹರ್ಮನ್‌ಪ್ರೀತ್, ಮಂದಾನ, ದೀಪ್ತಿ ಹಾಗೂ ಇನ್ನೊಬ್ಬ ಆಟಗಾರ್ತಿಗೆ ಟೂರ್ನಿಯಲ್ಲಿ ಆಡಲು ಎನ್‌ಒಸಿ ನೀಡಲಾಗಿದೆ‘ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಭಾರತ ಮಹಿಳಾ ತಂಡವು ಜೂನ್‌–ಜುಲೈನಲ್ಲಿ ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿದೆ. ಆತಿಥೇಯ ತಂಡದ ಎದುರು ಒಂದು ಟೆಸ್ಟ್, ತಲಾ ಮೂರು ಟಿ20 ಹಾಗೂ ಏಕದಿನ ಪಂದ್ಯಗಳನ್ನು ಆಡಲಿದೆ. ಈ ಸರಣಿಗಳು ಮುಗಿದ ಬಳಿಕ ‘ಹಂಡ್ರೆಡ್‘ ಟೂರ್ನಿಯಲ್ಲಿ ಆಡಲು ಈ ನಾಲ್ವರು ಆಟಗಾರ್ತಿಯರು ಅಲ್ಲಿಯೇ ಉಳಿದುಕೊಳ್ಳಲಿದ್ದಾರೆ.

ಇಂಗ್ಲೆಂಡ್‌ ಪ್ರವಾಸಕ್ಕೆ ಭಾರತ ತಂಡದ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ.

‘ದ ಹಂಡ್ರೆಡ್‌‘ ಟೂರ್ನಿಯನ್ನು ಕಳೆದ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿತ್ತು. ಈ ಬಾರಿಯ ಟೂರ್ನಿಯ ಮೊದಲ ಪಂದ್ಯದಲ್ಲಿ ಓವಲ್ ಇನ್‌ವಿಸಿಬಲ್ಸ್–ಮ್ಯಾಂಚೆಸ್ಟರ್‌ ಓರಿಜಿನಲ್ಸ್ ಮಹಿಳಾ ತಂಡಗಳು ಮುಖಾಮುಖಿಯಾಗಲಿವೆ. ಮರುದಿನ ಪುರುಷರ ಪಂದ್ಯ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.