ADVERTISEMENT

ಸಭ್ಯರ ಆಟದ ರಾಯಭಾರಿ ‘ವಿಶಿ’ಗೆ 70

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2019, 20:30 IST
Last Updated 12 ಫೆಬ್ರುವರಿ 2019, 20:30 IST
ಬೆಂಗಳೂರಿನಲ್ಲಿ ಕಿರಿಯ ಕ್ರಿಕೆಟ್ ಆಟಗಾರರಿಗೆ ಬ್ಯಾಟಿಂಗ್ ಹೇಳಿಕೊಟ್ಟ ಜಿ.ಆರ್. ವಿಶ್ವನಾಥ್ –ಪ್ರಜಾವಾಣಿ ಸಂಗ್ರಹ ಚಿತ್ರ
ಬೆಂಗಳೂರಿನಲ್ಲಿ ಕಿರಿಯ ಕ್ರಿಕೆಟ್ ಆಟಗಾರರಿಗೆ ಬ್ಯಾಟಿಂಗ್ ಹೇಳಿಕೊಟ್ಟ ಜಿ.ಆರ್. ವಿಶ್ವನಾಥ್ –ಪ್ರಜಾವಾಣಿ ಸಂಗ್ರಹ ಚಿತ್ರ   

ಬೆಂಗಳೂರು: ‘ಇಡೀ ದಿನ ಕುಟುಂಬದೊಂದಿಗೆ ಇದ್ದೆ. ಸಂಜೆ ನನ್ನನ ನಾಲ್ಕೈದು ಆಪ್ತಮಿತ್ರರು ಬರುತ್ತಾರೆ. ಅವರೊಂದಿಗೆ ಡಿನ್ನರ್‌ಗೆ ಹೋಗ್ತೇನೆ ಅಷ್ಟೇ. ಬೆಳಿಗ್ಗೆಯಿಂದ ಬಹಳಷ್ಟು ಮಂದಿ ಶುಭ ಹಾರೈಸಿದ್ದಾರೆ. ಈಗಲೂ ಕಾಲ್‌ಗಳು ಬರ್ತಾನೇ ಇವೆ’–

ಕ್ರಿಕೆಟ್‌ ಜಗತ್ತಿನ ‘ಜಂಟಲ್‌ಮ್ಯಾನ್‌’ ಆಟಗಾರ ಗುಂಡಪ್ಪ ವಿಶ್ವನಾಥ್ ಅವರ ಮೃದು ಮಾತುಗಳ ಒರತೆ ಇದು. ಮಂಗಳವಾರ (ಫೆಬ್ರುವರಿ 12) 70 ವಸಂತ ಪೂರೈಸಿದ ಅವರು ‘ಪ್ರಜಾವಾಣಿ’ಯೊಂದಿಗೆ ನಡೆಸಿದ ಚುಟುಕು ಮಾತುಕತೆ ಇದು. ಕ್ರಿಕೆಟ್‌ ನೆನಪುಗಳು, ಆಗು–ಹೋಗುಗಳ ಕುರಿತ ಮಾತುಕತೆ ಇನ್ನೊಂದು ದಿನ ಇರಲಿ. ಥ್ಯಾಂಕ್ಯೂ ಎಂದು ಮುಗುಳ್ನಕ್ಕರು.

ಆದರೆ ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ, ಕ್ರೀಡಾಲೋಕವನ್ನು ಮತ್ತು ಕನ್ನಡನಾಡಿನ ಕ್ರಿಕೆಟ್‌ ಪರಂಪರೆಯನ್ನು ಗಾಢವಾಗಿ ಪ್ರಭಾವಿಸಿದ ಅವರ ಹಲವು ಕಾಣಿಕೆಗಳು ಕಣ್ಮನ ಸೆಳೆಯುತ್ತವೆ. ಅವುಗಳಲ್ಲಿ ಆಯ್ದ ಏಳು ಘಟನೆಗಳು ಇಲ್ಲಿವೆ.

ADVERTISEMENT

* ರಣಜಿ ಪದಾರ್ಪಣೆಯಲ್ಲೇ ದ್ವಿಶತಕ

1967-68ರ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯ ಅದು. ವಿಜಯವಾಡದಲ್ಲಿ ಆಂಧ್ರಪ್ರದೇಶದ ವಿರುದ್ಧ ನಡೆದ ಆ ಪಂದ್ಯದಲ್ಲಿ ಜಿ.ಆರ್. ವಿಶ್ವನಾಥ್ ಪದಾರ್ಪಣೆ ಮಾಡಿದ್ದರು. 19 ವರ್ಷದೊಳಗಿನವರ ಕ್ರಿಕೆಟ್‌ನಲ್ಲಿ ಅವರ ಸಾಧನೆಯು ರಾಜ್ಯ ತಂಡದಲ್ಲಿ ಆಡುವ ಅವಕಾಶವನ್ನು ತಂದುಕೊಟ್ಟಿತ್ತು. ಆ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಿದ ಅವರು ದ್ವಿಶತಕ ದಾಖಲಿಸಿದರು.

* ವಿಶ್ವನಾಥ್ ಬಾಬಾ ಕಿ ಜೈ

ವಿಶಿ ಅವರ ಟೆಸ್ಟ್‌ ಪದಾರ್ಪಣೆಯೂ ವೈಶಿಷ್ಟಪೂರ್ಣ. 1969ರಲ್ಲಿ ಕಾನ್ಪುರದಲ್ಲಿ ಆಸ್ಟ್ರೇಲಿಯಾ ಎದುರಿನ ಪಂದ್ಯ ಅವರಿಗೆ ಚೊಚ್ಚಲ ಟೆಸ್ಟ್. ಮೊದಲ ಇನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಆದರೆ ತಂಡದ ನಾಯಕ ಮನ್ಸೂರ್ ಅಲಿ ಖಾನ್ ಪಟೌಡಿ ಅವರು ಬಂದು ಬೆನ್ನು ತಟ್ಟಿ ಸಂತೈಸಿದ್ದರು. ಆದರೆ, ತಂಡವು ಮೊದಲ ಇನಿಂಗ್ಸ್‌ ಹಿನ್ನಡೆ ಅನುಭವಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ವಿಶಿ ಬಂದಾಗ ತಂಡವು ಸಂಕಷ್ಟದಲ್ಲಿತ್ತು. ಆದರೆ ಆಸ್ಟ್ರೇಲಿಯಾದ ಯಮವೇಗದ ಬೌಲರ್‌ಗಳನ್ನು ದಿಟ್ಟೆದೆಯೆಂದ ಎದುರಿಸಿದರು. ಶತಕದತ್ತ ಸಾಗಿದರು. ಕಾನ್ಪುರದಲ್ಲಿ ಸುದ್ದಿ ಹರಡಿತು. ಜನ ಬಂದು ಗ್ಯಾಲರಿಯಲ್ಲಿ ಸೇರಿದರು. ‘ತಂಡವನ್ನು ಸೋಲಿನಿಂದ ಪಾರು ಮಾಡಲು ಬಂದ ವಿಶ್ವನಾಥ್ ಬಾಬಾ ಕೀ ಜೈ’ ಎಂದು ಹುರಿದುಂಬಿಸಿದರು. ಪಂದ್ಯ ಡ್ರಾ ಆಯಿತು. ಇವತ್ತಿಗೂ ಕಾನ್ಪುರದ ಹಿರಿಯರು ಆ ಕ್ಷಣಗಳನ್ನು ನೆನೆಯುತ್ತಾರೆ.

* ಶತಕ ಹೊಡೆದಾಗ ಸೋಲಿಲ್ಲ!

‘ವಿಶಿ ಶತಕ ಹೊಡೆದರೆ ಭಾರತದ ಸೋಲುವುದಿಲ್ಲ’ ಎಂಬ ಮಾತು ಇತ್ತು. ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ಒಟ್ಟು 14 ಶತಕಗಳನ್ನು ದಾಖಲಿಸಿದ್ದಾರೆ. ಆ ಪಂದ್ಯಗಳಲ್ಲಿ ಭಾರತವು ಸೋಲನುಭವಿಸಿಲ್ಲ.

* ಜೆಂಟಲ್‌ಮ್ಯಾನ್ ವಿಶಿ

1979–80ರಲ್ಲಿ ಸುವರ್ಣಮಹೋತ್ಸವ ಟೆಸ್ಟ್ ಪಂದ್ಯ ಅದು. ಮುಂಬೈನಲ್ಲಿ ನಡೆದ ಇಂಗ್ಲೆಂಡ್ ಎದುರಿನ ಪಂದ್ಯದಲ್ಲಿ ಬ್ಯಾಟ್ಸ್‌ಮನ್ ಬಾಬ್‌ ಟೇಲರ್‌ ಔಟಾಗದಿದ್ದರೂ ಅಂಪೈರ್‌ ಹನುಮಂತರಾವ್‌ ಕೈ ಎತ್ತಿಬಿಡುತ್ತಾರೆ. ವಿಕೆಟ್‌ಕೀಪರ್‌ ಪಡೆದ ಕ್ಯಾಚ್‌ ಅನ್ನು ಪುರಸ್ಕರಿಸುತ್ತಾರೆ.ಆದರೆ ಚೆಂಡು ಬ್ಯಾಟ್‌ ಅಂಚಿಗೆ ಸ್ಪರ್ಶಿಸಿಲ್ಲ ಎನ್ನುವದನ್ನು ಅರಿತ ನಾಯಕ ವಿಶಿ, ಪೆವಿಲಿಯನ್‌ನತ್ತ ಹೆಜ್ಜೆ ಇಟ್ಟಿದ್ದ ಟೇಲರ್‌ ಬಳಿ ತೆರಳಿ, ‘ನೀನು ಔಟ್‌ ಆಗಿಲ್ಲ. ಮತ್ತೆ ಆಡು’ ಎಂದುಬಿಡುತ್ತಾರೆ. ಆ ಪಂದ್ಯದಲ್ಲಿ ಭಾರತ ತಂಡ ಸೋತಿತು. ಆದರೆ ವಿಶಿ ‘ಫೇರ್‌ ಪ್ಲೇ’ ಕ್ರಿಕೆಟ್‌ ಲೋಕದ ಮನ ಗೆದ್ದಿತ್ತು.

* ದಾಖಲೆಯ ಆ ದಿನ

1976ರಲ್ಲಿ ಟ್ರಿನಿಡಾಡ್‌ನಲ್ಲಿ ವೆಸ್ಟ್‌ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡವು ಗೆಲುವಿಗಾಗಿ 403 ರನ್‌ಗಳ ಬೆನ್ನಟ್ಟಿತ್ತು. ಸುನಿಲ್ ಗಾವಸ್ಕರ್ 102 ಮತ್ತು ವಿಶಿ 112 ರನ್‌ ಗಳಿಸಿದರು. ಆ ಕಾಲಘಟ್ಟದಲ್ಲಿ ದೊಡ್ಡ ಮೊತ್ತದ ಗುರಿ ಬೆನ್ನಟ್ಟಿ ಗೆದ್ದ ದಾಖಲೆ ಅದಾಗಿತ್ತು.

* ಸನ್ನಿ–ವಿಶಿ ಬಾಂಧವ್ಯ

ಮುಂಬೈನ ಸುನಿಲ್ ಗಾವಸ್ಕರ್ ಮತ್ತು ಕರ್ನಾಟಕದ ಭದ್ರಾವತಿಯ ವಿಶಿ ಜೊತೆಗೂಡಿ ಭಾರತ ತಂಡವನ್ನು ಹಲವು ಬಾರಿ ಸೋಲಿನಿಂದ ಪಾರು ಮಾಡಿರುವ ದಾಖಲೆಗಳು ಇವೆ. ಇಬ್ಬರೂ ಬಲಗೈ ಬ್ಯಾಟ್ಸ್‌ಮನ್‌ಗಳು ಹಲವು ದಾಖಲೆಗಳನ್ನು ಪೇರಿಸಿದವರು. ಇವರಿಬ್ಬರಲ್ಲಿ ಯಾರು ಶ್ರೇಷ್ಠ ಎಂಬ ಸಾಕಷ್ಟು ಚರ್ಚೆಗಳು ಈಗಲೂ ನಡೆಯುತ್ತಿವೆ. ಆದರೆ, ವಿಶಿಗೆ ವಿಶಿ ಮತ್ತು ಸನ್ನಿಗೆ ಸನ್ನಿಯೇ ಸಾಟಿ. ಗಾವಸ್ಕರ್ ಅವರ ಸಹೋದರಿ ಕವಿತಾ ಅವರನ್ನು ವಿಶಿ ಮದುವೆಯಾಗಿದ್ದಾರೆ. ಇದರಿಂದಾಗಿ ಅವರು ಸ್ನೇಹವು ಸಂಬಂಧದ ಮಧುರ ಬಾಂಧವ್ಯವಾಗಿ ನೆಲೆಗೊಂಡಿದೆ.

* ಟೋನಿ ಗ್ರೇಗ್‌ ಬೇಬಿ

ಈಚೆಗೆ ರಿಷಭ್ ಪಂತ್ ಮತ್ತು ಆಸ್ಟ್ರೇಲಿಯಾ ನಾಯಕ ಟಿಮ್ ಪೇನ್ ನಡುವಣ ಬೇಬಿಸಿಟರ್‌ ಸ್ವಾರಸ್ಯ ಗೊತ್ತಲ್ಲವೇ? ಅಂತಹುದೇ ಒಂದು ತಮಾಷೆಯ ಪ್ರಸಂಗ 1973–74ರಲ್ಲಿ ನಡೆದಿತ್ತು. ಮುಂಬೈನಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ವಿಶಿ ಶತಕ ಬಾರಿಸಿದರು. ಆಗ ಇಂಗ್ಲೆಂಡ್‌ನ ಟೋನಿ ಗ್ರೇಗ್ ಅವರು ವಿಶಿಯನ್ನು ಎತ್ತಿಕೊಂಡು ಮಗುವಿನಂತೆ ಲಾಲಿ ಹಾಡಿ ಅಭಿನಂದಿಸಿದ್ದರು. ನಂತರದ ಇನಿಂಗ್ಸ್‌ನಲ್ಲಿ ಗ್ರೇಗ್ ಕೂಡ ಶತಕ ಬಾರಿಸಿದರು. ಆಗ ವಿಶಿ ಮತ್ತು ಗಾವಸ್ಕರ್ ಸೇರಿ ಗ್ರೇಗ್ ಅವರನ್ನುಎತ್ತಿ ಆಡಿಸಲು ಪ್ರಯತ್ನಿಸಿದರು. ಆದರೆ ಅಜಾನುಬಾಹುವನ್ನು ಎತ್ತಲು ಸಾಧ್ಯವಾಗಲಿಲ್ಲ!.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.