ADVERTISEMENT

ಎರಡನೇ ಡಿವಿಷನ್‌ ಕ್ರಿಕೆಟ್‌ ಟೂರ್ನಿ; ಅಸ್ಲಾಮ್‌ ಮಡಿಲಿಗೆ ಐದು ವಿಕೆಟ್‌

ಗದುಗಿನ ತಂಡಗಳಿಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2021, 16:03 IST
Last Updated 14 ಏಪ್ರಿಲ್ 2021, 16:03 IST
ಅಸ್ಲಾಮ್‌ ಮುಧೋಳ
ಅಸ್ಲಾಮ್‌ ಮುಧೋಳ   

ಹುಬ್ಬಳ್ಳಿ: ಗದುಗಿನ ಸ್ಪೋರ್ಟ್ಸ್‌ ಅಕಾಡೆಮಿ ತಂಡ, ಕೆಎಸ್‌ಸಿಎ ಧಾರವಾಡ ವಲಯ ಆಯೋಜಿಸಿರುವ ಎರಡನೆ ಡಿವಿಷನ್‌ ಕ್ರಿಕೆಟ್‌ ಟೂರ್ನಿಯ ಮಂಗಳವಾರದ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳ ಗೆಲುವು ದಾಖಲಿಸಿತು.

ಇಲ್ಲಿನ ಕರ್ನಾಟಕ ಜಿಮ್ಖಾನ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ಸ್ಪೋರ್ಟ್ಸ್ ಕ್ಲಬ್‌ 19.2 ಓವರ್‌ಗಳಲ್ಲಿ 103 ರನ್‌ ಗಳಿಸಿ ಆಲೌಟ್‌ ಆಯಿತು. ಈ ಗುರಿಯನ್ನು ಗದುಗಿನ ತಂಡ 23 ಓವರ್‌ಗಳಲ್ಲಿ ಮುಟ್ಟಿತು. ಇದೇ ತಂಡದ ಅಸ್ಲಾಮ್‌ ಮುಧೋಳ ಐದು ವಿಕೆಟ್‌ ಕಬಳಿಸಿದರು.

ಇನ್ನೊಂದು ಪಂದ್ಯದಲ್ಲಿ ಭಟ್ಕಳ ಸ್ಪೋರ್ಟ್ಸ್‌ ಕ್ಲಬ್‌, ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ ‘ಬಿ’ ತಂಡದ ಎದುರು ಆರು ವಿಕೆಟ್‌ಗಳ ಗೆಲುವು ದಾಖಲಿಸಿತು. ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿಯ ತಂಡ 27.2 ಓವರ್‌ಗಳಲ್ಲಿ 88 ರನ್ ಗಳಿಸಿತು. ಭಟ್ಕಳ ತಂಡ 22.4 ಓವರ್‌ಗಳಲ್ಲಿ ಗುರಿ ತಲುಪಿತು. ಈ ತಂಡದ ಎಚ್‌. ಶಮ್ಮಾಸ್‌ ಆರು ವಿಕೆಟ್‌ ಪಡೆದು ಮಿಂಚಿದರು.

ADVERTISEMENT

ಬಾಣಜಿ ಡಿ. ಜಿಮ್ಜಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಹುಬ್ಬಳ್ಳಿಯ ಬಿಡಿಕೆ ಸ್ಪೋರ್ಟ್ಸ್‌ ಫೌಂಡೇಷನ್‌, ಗದುಗಿನ ಜನೋಪಂಥರ್‌ ವಿರುದ್ಧ 151 ರನ್‌ಗಳ ಜಯಭೇರಿ ಮೊಳಗಿಸಿತು. ಮೊದಲು ಬ್ಯಾಟ್‌ ಮಾಡಿದ ಜನೋಪಂಥರ್ 191 ರನ್‌ ಗಳಿಸಿತ್ತು. ಬಿಡಿಕೆ 20.1 ಓವರ್‌ಗಳಲ್ಲಿ 38 ರನ್ ಗಳಿಸಲಷ್ಟೇ ಶಕ್ತವಾಯಿತು. ಆರು ವಿಕೆಟ್‌ ಕಬಳಿಸಿದ ಬಿಡಿಕೆ ತಂಡದ‌ ವೃಷಭ ಪಾಟೀಲ ತಂಡದ ಸೋಲಿನ ನಡುವೆಯೂ ಗಮನ ಸೆಳೆದರು.

ಧಾರವಾಡದ ಕ್ರಿಕೆಟ್ ಕ್ಲಬ್‌ ಆಫ್‌ ಕರ್ನಾಟಕ (ಸಿಸಿಕೆ) ‘ಬಿ’ ತಂಡ ರಾಜ್ವೀರ್‌ ವಾದ್ವಾ (103) ಶತಕದ ಬಲದಿಂದ ಹುಬ್ಬಳ್ಳಿಯ ಟ್ಯಾಲೆಂಟ್‌ ಸ್ಪೋರ್ಟ್ಸ್ ಕ್ಲಬ್‌ ವಿರುದ್ಧ ಗೆಲುವು ಪಡೆಯಿತು. ಮೊದಲು ಬ್ಯಾಟ್‌ ಮಾಡಿದ ಧಾರವಾಡದ ತಂಡ 219 ರನ್‌ ಗಳಿಸಿತ್ತು. ಮಳೆ ಬಂದ ಕಾರಣ ಎದುರಾಳಿ ತಂಡಕ್ಕೆ 154 ರನ್‌ ಗಳಿಸುವ ಪರಿಷ್ಕೃತ ಗುರಿ ನೀಡಲಾಯಿತು. ಟ್ಯಾಲೆಂಟ್‌ ತಂಡ 88 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಇನ್ನಷ್ಟು ಪಂದ್ಯಗಳಲ್ಲಿ ಬೆಳಗಾವಿಯ ವಿಜಯ ಕ್ರಿಕೆಟ್‌ ಅಕಾಡೆಮಿ ತಂಡ ಬೆಳಗಾವಿಯ ಇಂಡಿಯನ್‌ ಬಾಯ್ಸ್‌ ತಂಡದ ಮೇಲೂ, ನೀನಾ ಸ್ಪೋರ್ಟ್ಸ್‌ ಕ್ಲಬ್‌ ಬೆಳಗಾವಿಯ ಆನಂದ ಕ್ರಿಕೆಟ್ ಅಕಾಡೆಮಿ ವಿರುದ್ಧವೂ ಗೆಲುವು ಸಾಧಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.