ADVERTISEMENT

ವಿದೇಶಿ ಪ್ರವಾಸಗಳಲ್ಲಿ ಕುಟುಂಬಸ್ಥರ ಉಪಸ್ಥಿತಿಗೆ ಮಿತಿ: ನಿಯಮ ಬೆಂಬಲಿಸಿದ ಗಂಭೀರ್

ಪಿಟಿಐ
Published 11 ಜುಲೈ 2025, 11:05 IST
Last Updated 11 ಜುಲೈ 2025, 11:05 IST
ಗೌತಮ್‌ ಗಂಭೀರ್
ಗೌತಮ್‌ ಗಂಭೀರ್   

ಲಂಡನ್: ದೀರ್ಘ ವಿದೇಶಿ ಪ್ರವಾಸಗಳ ಸಮಯದಲ್ಲಿ ಕ್ರಿಕೆಟಿಗರ ಕುಟುಂಬಗಳ ಉಪಸ್ಥಿತಿಯನ್ನು ಮಿತಿಗೊಳಿಸುವ ಬಿಸಿಸಿಐ ನಿರ್ದೇಶನವನ್ನು ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಬೆಂಬಲಿಸಿದ್ದಾರೆ. ವಿದೇಶಿ ಪ್ರವಾಸಗಳಿಗೆ ಆಟಗಾರರು ರಜೆ ಕಳೆಯಲು ಹೋಗುವುದಿಲ್ಲ. ರಾಷ್ಟ್ರೀಯ ಕರ್ತವ್ಯದ ಮೇಲೆ ಹೋಗುತ್ತಾರೆ ಎಂದು ಅವರು ಹೇಳಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ ತಂಡ 1-3 ಅಂತರದಿಂದ ಸೋತ ನಂತರ ಬಿಸಿಸಿಐ ಪರಿಷ್ಕೃತ ಪ್ರಯಾಣ ನೀತಿಯನ್ನು ಪರಿಚಯಿಸಿತ್ತು. 45 ದಿನಗಳಿಗಿಂತ ಹೆಚ್ಚಿನ ಸಮಯದ ಪ್ರವಾಸಗಳಿಗೆ ಕುಟುಂಬ ಸದಸ್ಯರ ವಾಸ್ತವ್ಯವನ್ನು ಗರಿಷ್ಠ ಎರಡು ವಾರಗಳಿಗೆ ಮಿತಿಗೊಳಿಸಿತ್ತು. 45 ದಿನಗಳಿಗಿಂತ ಕಡಿಮೆ ಪ್ರವಾಸದ ಅವಧಿಯಲ್ಲಿ ಕುಟುಂಬದ ಉಪಸ್ಥಿತಿಯನ್ನು ಏಳು ದಿನಗಳಿಗೆ ಸೀಮಿತಗೊಳಿಸಲಾಗಿತ್ತು.

‘ಪ್ರತಿಯೊಬ್ಬ ಆಟಗಾರನ ಜೀವನದಲ್ಲಿ ಕುಟುಂಬಗಳ ಪಾತ್ರಗಳು ಬಹಳ ಮುಖ್ಯ,.ಆದರೆ, ನಾವು ಒಂದು ವಿಷಯವನ್ನು ಅರ್ಥಮಾಡಿಕೊಳ್ಳಬೇಕು. ನಾವು ಒಂದು ದೊಡ್ಡ ಉದ್ದೇಶವನ್ನು ಇಟ್ಟುಕೊಂಡು ಈ ಪ್ರವಾಸ ಕೈಗೊಂಡಿದ್ದೇವೆಯೇ ಹೊರತು ರಜಾದಿನಗಳನ್ನು ಕಳೆಯಲು ಅಲ್ಲ. ದೇಶವನ್ನು ಹೆಮ್ಮೆಪಡುವಂತೆ ಮಾಡುವ ಅವಕಾಶ ಈ ಡ್ರೆಸ್ಸಿಂಗ್ ರೂಮ್‌ನಲ್ಲಿರುವ ಕೆಲವರಿಗೆ ಮಾತ್ರ ಸಿಕ್ಕಿದೆ’ಎಂದು ಅವರು ಹೇಳಿದ್ದಾರೆ.

ADVERTISEMENT

‘ಹೌದು, ನಮ್ಮೊಂದಿಗೆ ಕುಟುಂಬ ಪೂರ್ಣ ಪ್ರವಾಸದ ಅವಧಿಯಲ್ಲಿ ಇಲ್ಲದಿರುವ ನಿಯಮವನ್ನು ನಾನು ವಿರೋಧಿಸುವುದಿಲ್ಲ’ ಎಂದು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಚೇತೇಶ್ವರ ಪೂಜಾರ ಅವರೊಂದಿಗಿನ ಸಂಭಾಷಣೆಯ ಸಂದರ್ಭದಲ್ಲಿ ಗಂಭೀರ್ ಹೇಳಿದ್ದಾರೆ.

ಇದೇವೇಳೆ, ಎಲ್ಲದಕ್ಕೂ ಮೊದಲು ದೇಶಕ್ಕಾಗಿ ಆಡುವುದರ ಮಹತ್ವವನ್ನು ಗಂಭೀರ್ ಒತ್ತಿ ಹೇಳಿದ್ದಾರೆ.

ವಿದೇಶಿ ಪ್ರವಾಸಗಳ ಸಂದರ್ಭ ಜೊತೆಯಲ್ಲಿ ಕುಟುಂಬಗಳನ್ನು ಹೊಂದಿರುವುದು ಮುಖ್ಯ. ಆದರೆ, ನಿಮ್ಮ ಗಮನವು ದೇಶವನ್ನು ಹೆಮ್ಮೆಪಡುವಂತೆ ಮಾಡುವುದರ ಮೇಲೆ ಇದ್ದರೆ, ನಿಮಗದು ಬೇರೆ ಎಲ್ಲದಕ್ಕಿಂತ ಮುಖ್ಯವಾಗಿರುತ್ತದೆ. ನೀವು ಆ ಗುರಿಗೆ ಬದ್ಧರಾಗಿದ್ದರೆ, ಬೇರೆ ಯಾವುದೇ ವಿಷಯ ನಿಮಗೆ ಅಷ್ಟು ಮುಖ್ಯವಾಗುವುದಿಲ್ಲ ಎಂದು ಗಂಭೀರ್ ಹೇಳಿದ್ದಾರೆ.

ಐದು ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯ ಲಾರ್ಡ್ಸ್‌ನಲ್ಲಿ ನಡೆಯುತ್ತಿದ್ದು, ಇಂಗ್ಲೆಂಡ್ ಬ್ಯಾಟಿಂಗ್ ಮಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.