ADVERTISEMENT

ಕ್ರಿಕೆಟ್‌ ಬದುಕಿಗೆ ಗೌತಮ್‌ ಗಂಭೀರ್‌ ‘ಗುಡ್‌ ಬೈ’

ಆಂಧ್ರ ಎದುರಿನ ರಣಜಿ ಪಂದ್ಯ ಕೊನೆಯದು

ಪಿಟಿಐ
Published 5 ಡಿಸೆಂಬರ್ 2018, 1:15 IST
Last Updated 5 ಡಿಸೆಂಬರ್ 2018, 1:15 IST
ಗೌತಮ್‌ ಗಂಭೀರ್‌
ಗೌತಮ್‌ ಗಂಭೀರ್‌   

ನವದೆಹಲಿ: ಭಾರತ ತಂಡದ ಹಿರಿಯ ಆಟಗಾರ ಗೌತಮ್‌ ಗಂಭೀರ್‌ ಅವರು ಕ್ರಿಕೆಟ್‌ ಬದುಕಿಗೆ ‘ಗುಡ್ ಬೈ’ ಹೇಳಿದ್ದಾರೆ.

ಮಂಗಳವಾರ ಟ್ವಿಟರ್‌ನಲ್ಲಿ ಹಾಕಿ ರುವ ವಿಡಿಯೊದಲ್ಲಿ ಗಂಭೀರ್‌, ನಿವೃತ್ತಿಯ ನಿರ್ಧಾರವನ್ನು ಬಹಿರಂಗಗೊಳಿಸಿದ್ದಾರೆ.

ಗುರುವಾರದಿಂದ ನಡೆಯುವ ಆಂಧ್ರಪ್ರದೇಶ ಎದುರಿನ ರಣಜಿ ಟ್ರೋಫಿ ಪಂದ್ಯ ನನ್ನ ಪಾಲಿಗೆ ಕೊನೆಯದ್ದು ಎಂದು ದೆಹಲಿಯ 37 ವರ್ಷದ ಆಟಗಾರ ತಿಳಿಸಿದ್ದಾರೆ.

ADVERTISEMENT

ಆಕ್ರಮಣಕಾರಿ ಶೈಲಿಯ ಎಡಗೈ ಆಟಗಾರ ಗಂಭೀರ್‌, 2007ರ ವಿಶ್ವ ಟ್ವೆಂಟಿ–20 ಮತ್ತು 2011ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡ ಪ್ರಶಸ್ತಿ ಜಯಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ಸತತ ವೈಫಲ್ಯದ ಕಾರಣ ಅವರಿಗೆ ನಂತರ ತಂಡದಲ್ಲಿ ಸ್ಥಾನ ಸಿಕ್ಕಿರಲಿಲ್ಲ. 2016ರಲ್ಲಿ ಅವರು ಭಾರತದ ಪರ ಕೊನೆಯ ಟೆಸ್ಟ್‌ ಆಡಿದ್ದರು. ಇತ್ತೀಚೆಗೆ ದೆಹಲಿ ರಣಜಿ ತಂಡದ ನಾಯಕತ್ವವನ್ನೂ ತ್ಯಜಿಸಿದ್ದ ‘ಗೌತಿ’ ಆಟಗಾರನಾಗಿ ತಂಡದಲ್ಲಿ ಮುಂದುವರಿಯುತ್ತೇನೆ ಎಂದು ಹೇಳಿದ್ದರು.

2003ರ ಏಪ್ರಿಲ್‌ನಲ್ಲಿ ಬಾಂಗ್ಲಾದೇಶ ಎದುರು ಮೊದಲ ಏಕದಿನ ಪಂದ್ಯ ಆಡಿದ್ದ ಅವರು ಮರು ವರ್ಷ (2004) ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಮೂಲಕ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

58 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಗಂಭೀರ್‌, 4154 ರನ್‌ ದಾಖಲಿಸಿದ್ದಾರೆ. 147 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದು 5238ರನ್ ಬಾರಿಸಿದ್ದಾರೆ. 37 ಟ್ವೆಂಟಿ–20 ಪಂದ್ಯಗಳಿಂದ 932 ರನ್‌ ಸಂಗ್ರಹಿಸಿದ್ದಾರೆ.

ಐಪಿಎಲ್‌ನಲ್ಲೂ ಮಿಂಚಿದ್ದ ಅವರು ಕೋಲ್ಕತ್ತ ನೈಟ್‌ರೈಡರ್ಸ್‌ ತಂಡವನ್ನು ಪ್ರಶಸ್ತಿಯತ್ತ ಮುನ್ನಡೆಸಿದ್ದರು. ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ಸಾರಥ್ಯವನ್ನೂ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.