ADVERTISEMENT

IPL-2025: ಟೈಟನ್ಸ್‌, ರಾಯಲ್ಸ್‌ ಹಣಾಹಣಿ ಇಂದು

ಸಂಜು, ಗಿಲ್‌ ಬಳಗಕ್ಕೆ ಬೌಲಿಂಗ್‌ ವಿಭಾಗ ಸುಧಾರಿಸುವ ವಿಶ್ವಾಸ

ಪಿಟಿಐ
Published 9 ಏಪ್ರಿಲ್ 2025, 0:49 IST
Last Updated 9 ಏಪ್ರಿಲ್ 2025, 0:49 IST
<div class="paragraphs"><p>ರಾಜಸ್ಥಾನ ರಾಯಲ್ಸ್‌ ತಂಡದ ನಾಯಕ ಸಂಜು ಸ್ಯಾಮ್ಸನ್‌ ಹಾಗೂ&nbsp;ಚೆನ್ನೈ ತಂಡದ ನಾಯಕ ಋತುರಾಜ್‌ ಗಾಯಕವಾಡ್‌</p></div>

ರಾಜಸ್ಥಾನ ರಾಯಲ್ಸ್‌ ತಂಡದ ನಾಯಕ ಸಂಜು ಸ್ಯಾಮ್ಸನ್‌ ಹಾಗೂ ಚೆನ್ನೈ ತಂಡದ ನಾಯಕ ಋತುರಾಜ್‌ ಗಾಯಕವಾಡ್‌

   

ಅಹಮದಾಬಾದ್: ಗುಜರಾತ್‌ ಟೈಟನ್ಸ್ ತಂಡವು, ಬುಧವಾರ ನಡೆಯುವ ಐಪಿಎಲ್‌ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ಎರಡೂ ತಂಡಗಳು ತಮ್ಮ ಬೌಲಿಂಗ್ ಪಡೆಯು ಪೂರ್ಣ ಪ್ರಮಾಣದಲ್ಲಿ  ಸಾಮರ್ಥ್ಯ ತೋರಲಿವೆ ಎಂಬ ವಿಶ್ವಾಸದಲ್ಲಿವೆ.

ಗುಜರಾತ್‌ ಟೈಟನ್ಸ್ ತಂಡ ನಾಲ್ಕು ಪಂದ್ಯಗಳಿಂದ ಆರು ಪಾಯಿಂಟ್ಸ್ ಗಳಿಸಿದ್ದು, ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ರಾಯಲ್ಸ್ ಅಷ್ಟೇ ಪಂದ್ಯಗಳಿಂದ ನಾಲ್ಕು ಪಾಯಿಂಟ್ಸ್ ಸಂಗ್ರಹಿಸಿದೆ. ಟೈಟನ್ಸ್ ತಂಡ ಸತತವಾಗಿ ಮೂರು ಗೆಲುವು ದಾಖಲಿಸಿದೆ. ರಾಯಲ್ಸ್ ಪಂದ್ಯವೂ ಎರಡು ಪಂದ್ಯಗಳನ್ನು ಸತತವಾಗಿ ಗೆದ್ದಿದೆ. 

ADVERTISEMENT

ಆದರೆ ಬೌಲಿಂಗ್ ವಿಭಾಗವು ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡಿಲ್ಲ. ಗುಜರಾತ್ ತಂಡದ ವೇಗಿ ಮೊಹಮ್ಮದ್ ಸಿರಾಜ್ ಮತ್ತು ಸ್ಪಿನ್ನರ್ ಆರ್‌.ಸಾಯಿಕಿಶೋರ್‌ ಅವರು ಮಾತ್ರ ಯಶಸ್ಸು ಕಾಣುತ್ತಿದ್ದಾರೆ.  ಅನುಭವಿಗಳಾದ ಸ್ಪಿನ್ನರ್ ರಶೀದ್‌ ಖಾನ್ ಮತ್ತು ವೇಗಿ ಇಶಾಂತ್‌ ಶರ್ಮಾ ನಿರ್ವಹಣೆ ನಿರಾಶಾದಾಯಕವಾಗಿದೆ. ಬೌಲರ್‌ಗಳಿಗೆ ನೆರವಾಗುವ ಬೆಂಗಳೂರು, ಹೈದರಾಬಾದಿನ ಪಿಚ್‌ಗಳಲ್ಲೂ  ಅವರು ವಿಫಲರಾಗಿದ್ದಾರೆ. ಟಿ20 ಪರಿಣತ ರಶೀದ್ ಓವರಿಗೆ ಹತ್ತಕ್ಕೂ ಹೆಚ್ಚು ರನ್ ತೆತ್ತಿದ್ದಾರೆ. ನಾಲ್ಕು ಪಂದ್ಯಗಳಲ್ಲಿ ಅವರು ಪಡೆದಿರುವುದು ಒಂದು ವಿಕೆಟ್‌ ಅಷ್ಟೇ. ಇದು ಐಪಿಎಲ್‌ನಲ್ಲಿ ಅವರ ಅತಿ ಕಳಪೆ ಆರಂಭ ಎನಿಸಿದೆ.

ಇಶಾಂತ್ ಕಥೆ ತೀರಾ ಭಿನ್ನವಾಗಿಲ್ಲ. ಅವರು ಮೂರು ಪಂದ್ಯಗಳಲ್ಲಿ ಒಂದು ವಿಕೆಟ್‌ ಮಾತ್ರ ಗಳಿಸಿದ್ದಾರೆ. ಓವರಿನಲ್ಲಿ 12ಕ್ಕೂ ಹೆಚ್ಚು ರನ್ ಸೋರಿಕೆಯಾಗಿದೆ.

ಸ್ನಾಯುರಜ್ಜು ನೋವಿನಿಂದ ಬಳಲುತ್ತಿರುವ ಜೆರಾಲ್ಡ್‌ ಕೊಟ್ಜಿಯಾ ಅವರು ಫಿಟ್ನೆಸ್‌ಗೆ ಮರಳುವುದನ್ನು ಟೈಟನ್ಸ್ ಕಾಯುತ್ತಿದೆ. ದಕ್ಷಿಣ ಆಫ್ರಿಕಾದ ಈ ವೇಗದ ಬೌಲರ್ ಚಾಂಪಿಯನ್ಸ್ ಟ್ರೋಫಿಯಲ್ಲೂ ಆಡಿರಲಿಲ್ಲ. ಇದೇ ದೇಶದ ಇನ್ನೊಬ್ಬ ಅನುಭವಿ ವೇಗಿ ಕಗಿಸೊ ರಬಾಡ ಹಠಾತ್ತನೇ ತವರಿಗೆ ಮರಳಿದ್ದಾರೆ.

ಸಂಜು ಸ್ಯಾಮ್ಸನ್‌, ಧ್ರುವ್ ಜುರೇಲ್, ರಿಯಾನ್ ಪರಾಗ್, ನಿತೀಶ್ ರಾಣಾ ಅವರನ್ನು ಹೊಂದಿರುವ ರಾಯಲ್ಸ್ ತಂಡ ಇದರ ಲಾಭ ಪಡೆಯುವ ಸಾಧ್ಯತೆಯಿದೆ. ಜೈಸ್ವಾಲ್ ಒಂದು ಪಂದ್ಯದಲ್ಲಿ ಯಶಸ್ಸು ಕಂಡಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ರಾಜಸ್ಥಾನ ತಂಡದ ಕಥೆ ತೀರಾ ಭಿನ್ನವಾಗಿಲ್ಲ. ಸಂದೀಪ್ ಶರ್ಮಾ ಬಿಟ್ಟರೆ ಉಳಿದವರು ಸ್ಥಿರ ಪ್ರದರ್ಶನ ನೀಡಿಲ್ಲ. ಇಂಗ್ಲೆಂಡ್‌ನ ವೇಗಿ ಜೋಫ್ರಾ ಆರ್ಚರ್, ಪಂಜಾಬ್ ಕಿಂಗ್ಸ್‌ ವಿರುದ್ಧ ಉತ್ತಮ ಪ್ರದರ್ಶನ (4–0–25–3) ನೀಡಿದ್ದು ತಂಡದ ಪಾಲಿಗೆ ಸಕಾರಾತ್ಮಕ ಅಂಶ.

ಅಹಮದಾಬಾದ್‌ನ ಸ್ಟೇಡಿಯಂನಲ್ಲಿ ಪೂರ್ಣಗೊಂಡ ನಾಲ್ಕು ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 243, 232, 196, 160 ರನ್‌ಗಳು ಬಂದಿವೆ. ಹೀಗಾಗಿ ಗುಜರಾತ್ ತಂಡದ ಬ್ಯಾಟರ್‌ಗಳನ್ನು ಕಟ್ಟಿಹಾಕಲು ರಾಯಲ್ಸ್ ಬೌಲರ್‌ಗಳು ತಮ್ಮೆಲ್ಲಾ ಶ್ರಮ ಹಾಕಬೇಕಾಗಿದೆ. ನಾಯಕ ಶುಭಮನ್ ಗಿಲ್‌, ಜೋಸ್‌ ಬಟ್ಲರ್‌, ಶೆರ್ಫೇನ್ ರುದರ್‌ಫೋರ್ಡ್, ಸಾಯಿ ಸುದರ್ಶನ್ ಒಳ್ಳೆಯ ಲಯದಲ್ಲಿದ್ದಾರೆ. ಈ ಹಿಂದಿನ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಸಹ ಉತ್ತಮವಾಗಿ ಆಡಿದ್ದಾರೆ.

ಪಂದ್ಯ ಆರಂಭ: ರಾತ್ರಿ 7.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.