ಗುಲ್ಬರ್ಗ ಮಿಸ್ಟಿಕ್ಸ್ ಪರ 93 ರನ್‌ಗಳ ಅಜೇಯ ಜೊತೆಯಾಟದಲ್ಲಿ ಪಾಲ್ಗೊಂಡ ಲವನೀತ್ ಸಿಸೋಡಿಯಾ ಹಾಗೂ ನಿಕಿನ್ ಜೋಸ್ ಜೋಡಿ
ಪ್ರಜಾವಾಣಿ ಚಿತ್ರ: ಅನೂಪ್ ರಾಘ ಟಿ.
ಮೈಸೂರು: ಗುಲ್ಬರ್ಗ ಮಿಸ್ಟಿಕ್ಸ್ ಪರ ಅಬ್ಬರಿಸಿದ ಲವನೀತ್ ಸಿಸೋಡಿಯಾ (ಔಟಾಗದೇ 58) ಹಾಗೂ ನಿಕಿನ್ ಜೋಸ್ (ಔಟಾಗದೇ 34) ಜೋಡಿಯು ಶಿವಮೊಗ್ಗ ಲಯನ್ಸ್‌ಗೆ ಟೂರ್ನಿಯಲ್ಲಿ ಸತತ ನಾಲ್ಕನೇ ಸೋಲಿನ ರುಚಿ ತೋರಿಸಿತು.
ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‘ಶ್ರೀರಾಮ್ ಕ್ಯಾಪಿಟಲ್ಸ್ ಮಹಾರಾಜ ಟ್ರೋಫಿ’ ಕೆಎಸ್‌ಸಿಎ ಟಿ20 ಟೂರ್ನಿಯಲ್ಲಿ ಶನಿವಾರ ಮಳೆಯಿಂದಾಗಿ ಓವರ್‌ಗಳು ಮೊಟಕುಗೊಂಡ ಪಂದ್ಯದಲ್ಲಿ ಗುಲ್ಬರ್ಗ ತಂಡವು ಇನ್ನೂ 15 ಎಸೆತ ಬಾಕಿ ಇರುವಂತೆಯೇ 10 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.
ಗುಲ್ಬರ್ಗ ಮಿಸ್ಟಿಕ್ಸ್ ಪರ ಅಜೇಯ ಅರ್ಧ ಶತಕ (58) ಸಿಡಿಸಿದ ಲವನೀತ್ ಸಿಸೋಡಿಯ ಬ್ಯಾಟಿಂಗ್ ವೈಖರಿ –
ಮೊದಲು ಬ್ಯಾಟ್ ಮಾಡಿದ ಶಿವಮೊಗ್ಗ ತಂಡವು 15.5 ಓವರ್‌ಗಳಲ್ಲಿ 5 ವಿಕೆಟ್‌ಗೆ 127 ರನ್ ಗಳಿಸಿದ್ದಾಗ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಎರಡು ಗಂಟೆ ತರುವಾಯ ಮರು ಆರಂಭಗೊಂಡ ಪಂದ್ಯದಲ್ಲಿ ಗುಲ್ಬರ್ಗಕ್ಕೆ ವಿಜೆಡಿ (ವಿ.ಜಯದೇವನ್) ನಿಯಮದಂತೆ 9 ಓವರ್‌ಗಳಲ್ಲಿ 92 ಗಳ ಗುರಿ ನೀಡಲಾಯಿತು.
ಗುರಿ ಬೆನ್ನತ್ತಿದ ಗುಲ್ಬರ್ಗ ತಂಡದ ಲವನೀತ್ ಹಾಗೂ ನಿಕಿನ್ ಜೋಡಿಯು ಆರಂಭದಿಂದಲೇ ಅಬ್ಬರಿಸಿತು. ವಿದ್ವತ್ ಕಾವೇರಪ್ಪ ಅವರ ಮೊದಲ ಎಸೆತವನ್ನೇ ಲವನೀತ್ ಸಿಕ್ಸರ್ ಬಾರಿಸಿದರು. ಕೇವಲ 24 ಎಸೆತ ಎದುರಿಸಿದ ಅವರು 5 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿ ಅಜೇಯರಾಗಿ ಉಳಿದರು. ಕ್ರೀಸ್‌ನ ಮತ್ತೊಂದೆಡೆ ಉತ್ತಮ ಸಾಥ್ ನೀಡಿದ ನಿಕಿನ್ 15 ಎಸೆತದಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಪೇರಿಸಿದರು. ವಿದ್ವತ್ 2 ಓವರ್‌ನಲ್ಲೇ 40 ರನ್ ನೀಡಿ ದುಬಾರಿ ಆದರು.
ಮೊದಲು ಬ್ಯಾಟ್ ಮಾಡಿದ ಶಿವಮೊಗ್ಗ ಆರಂಭದ ಮೂರು ಓವರ್‌ನಲ್ಲಿ 30 ರನ್‌ಗಳ ಉತ್ತಮ ಆರಂಭ ಪಡೆಯಿತಾದರೂ ನಂತರದಲ್ಲಿ ಮಂದಗತಿಯಲ್ಲಿ ರನ್ ಗಳಿಸಿತು. ಆರಂಭಿಕ ಧ್ರುವ್ ಪ್ರಭಾಕರ್ 27 ಎಸೆತದಲ್ಲಿ 44 ರನ್ ಗಳಿಸಿದರು. ಗುಲ್ಬರ್ಗ ಪರ ಸ್ಪಿನ್ನರ್ ಶಶಿಕುಮಾರ್ ಕಾಂಬ್ಳೆ 2 ವಿಕೆಟ್ ಉರುಳಿಸಿದರು.
ಶಿವಮೊಗ್ಗ ಲಯನ್ಸ್: 15.5 ಓವರ್‌ಗಳಲ್ಲಿ 127ಕ್ಕೆ 5 ( ಧ್ರುವ್ ಪ್ರಭಾಕರ್ 44, ತುಷಾರ್ ಸಿಂಗ್ 22, ನಿಹಾಲ್ ಉಲ್ಲಾಳ್ 17, ಶಶಿಕುಮಾರ್ ಕಾಂಬ್ಳೆ 22ಕ್ಕೆ 2, ಮೊನಿಶ್ ರೆಡ್ಡಿ 14ಕ್ಕೆ 1, ವೈಶಾಖ ವಿಜಯಕುಮಾರ್ 17ಕ್ಕೆ 1).
ಗುಲ್ಬರ್ಗ ಮಿಸ್ಟಿಕ್ಸ್: 6.3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 93 ( ಲವನೀತ್ ಸಿಸೊಡಿಯಾ ಔಟಾಗದೇ 58, ನಿಕಿನ್ ಔಟಾಗದೇ 34). ಪಂದ್ಯದ ಆಟಗಾರ: ಲವನೀತ್ ಸಿಸೋಡಿಯಾ
ಮಂಗಳೂರು ಡ್ರ್ಯಾಗನ್ಸ್ – ಬೆಂಗಳೂರು ಬ್ಲಾಸ್ಟರ್ಸ್– ಮಧ್ಯಾಹ್ನ 3.15
ಮೈಸೂರು ವಾರಿಯರ್ಸ್ – ಶಿವಮೊಗ್ಗ ಲಯನ್ಸ್– ರಾತ್ರಿ 7.15
ಮೈಸೂರು: ಆರಂಭಿಕರಾದ ಪ್ರಖರ್ ಚತುರ್ವೇದಿ ಹಾಗೂ ಮೊಹಮ್ಮದ್ ತಾಹಾ ಅವರ ಉತ್ತಮ ಜೊತೆಯಾಟದ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್ ತಂಡವು ಮೈಸೂರು ವಾರಿಯರ್ಸ್ ಅನ್ನು 7 ವಿಕೆಟ್ ಅಂತರದಿಂದ ಮಣಿಸಿತು.
ಶನಿವಾರ ರಾತ್ರಿ ನಡೆದ ಎರಡನೇ ಪಂದ್ಯದಲ್ಲಿ ವಾರಿಯರ್ಸ್ ನೀಡಿದ 178 ರನ್‌ಗಳ ಗುರಿ ಬೆನ್ನತ್ತಿದ ಹುಬ್ಬಳ್ಳಿ ಟೈಗರ್ಸ್ 4 ಓವರ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 43 ರನ್ ಗಳಿಸಿದ್ದ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. 80 ನಿಮಿಷದ ತರುವಾಯ ಮತ್ತೆ ಪಂದ್ಯ ಆರಂಭಗೊಂಡು, ವಿಜೆಡಿ ನಿಯಮದಂತೆ ಹುಬ್ಬಳ್ಳಿ ಗೆಲುವಿಗೆ 9 ಓವರ್‌ಗಳಲ್ಲಿ 86 ರನ್‌ಗಳ ಗುರಿ ಪರಿಷ್ಕರಿಸಲಾಯಿತು.
ಪ್ರಖರ್ ಹಾಗೂ ತಾಹಾ ಮೊದಲ ವಿಕೆಟ್‌ಗೆ 55 ರನ್ ಜೊತೆಯಾಟವಾಡಿ ದರು. ಪ್ರಖರ್ 20 ಎಸೆತದಲ್ಲಿ 45 ರನ್ ಸಿಡಿಸಿದರು. ಮೈಸೂರು ಪರ ಗೌತಮ್ ಮಿಶ್ರ 9ಕ್ಕೆ 3 ವಿಕೆಟ್ ಪಡೆದರು.
ಮೊದಲು ಬ್ಯಾಟ್ ಮಾಡಿದ ವಾರಿಯರ್ಸ್ ತಂಡವು ಎಸ್.ಯು. ಕಾರ್ತಿಕ್ ಅವರ ಬ್ಯಾಟಿಂಗ್ (71) ನೆರವಿನಿಂದ 177 ರನ್ ಕಲೆ ಹಾಕಿತು. ಯಶ್‌ರಾಜ್ ಪೂಂಜ ಹಾಗೂ ನಿತಿನ್ ನಾಗರಾಜ್ ತಲಾ 3 ವಿಕೆಟ್ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.