ADVERTISEMENT

ಸಾರ್ವಜನಿಕ ಮೈದಾನಗಳಲ್ಲಿ ಮೂಲಸೌಲಭ್ಯ ಒದಗಿಸಿ: ಬಾಂಬೆ ಹೈಕೋರ್ಟ್

ಪಿಟಿಐ
Published 4 ಜುಲೈ 2022, 11:00 IST
Last Updated 4 ಜುಲೈ 2022, 11:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ‘ಸಾರ್ವಜನಿಕರ ಬಳಕೆಗೆ ಇರುವ ಮೈದಾನಗಳಲ್ಲಿ ಕ್ರೀಡಾಪಟುಗಳಿಗೆ ಶೌಚಾಲಯ, ಕುಡಿಯುವ ನೀರು ಒಳಗೊಂಡಂತೆ ಮೂಲಸೌಲಭ್ಯಗಳನ್ನು ಒದಗಿಸಿಕೊಡಿ’ ಎಂದು ಬಾಂಬೆ ಹೈಕೋರ್ಟ್ ಬಿಸಿಸಿಐ, ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ (ಎಂಸಿಎ) ಮತ್ತು ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಿದೆ.

‘ಹಲವು ಮಕ್ಕಳು ಮತ್ತು ಯುವಕರು ಸಾರ್ವಜನಿಕ ಮೈದಾನಗಳಲ್ಲಿ ಕ್ರಿಕೆಟ್ ಹಾಗೂ ಇತರ ಕ್ರೀಡೆಗಳನ್ನು ಆಡುವರು. ವಿವಿಧ ಕ್ರಿಕೆಟ್‌ ಸಂಸ್ಥೆಗಳು ಮತ್ತು ಸ್ಥಳೀಯ ಸಂಸ್ಥೆಗಳ ಸುಪರ್ದಿಯಲ್ಲಿರುವಂತಹ ಮೈದಾನಗಳಲ್ಲಿ ಮೂಲಸೌಕರ್ಯದ ಕೊರತೆಯಿದೆ‘ ಎಂದು ನ್ಯಾಯಮೂರ್ತಿಗಳಾದ ಅನಿಲ್‌ ಮೆನನ್‌ ಮತ್ತು ಎಂ.ಎಸ್‌.ಕಾರ್ಣಿಕ್ ಅವರಿದ್ದ ಪೀಠ ಹೇಳಿದೆ.

‘ಕ್ರಿಕೆಟ್‌ಗೆ ಉತ್ತೇಜನ ನೀಡಲು ನಡೆಸುವ ತರಬೇತಿ ಶಿಬಿರಗಳು ಮತ್ತು ಕ್ರಿಕೆಟ್‌ ಪಂದ್ಯ ನಡೆಯುವ ತಾಣಗಳಲ್ಲಿ ಕಡ್ಡಾಯವಾಗಿ ಮೂಲಸೌಕರ್ಯ ಇರಬೇಕು ಎಂದು ಬಿಸಿಸಿಐ ಮತ್ತು ಎಂಸಿಎ ಹೇಳುತ್ತದೆ. ಆದರೆ ವಾಸ್ತವ ಪರಿಸ್ಥಿತಿ ಭಿನ್ನವಾಗಿದೆ’ ಎಂದಿದೆ.

ADVERTISEMENT

ವೃತ್ತಿಪರ ಕ್ರಿಕೆಟ್ ಆಟಗಾರರೂ ಆಗಿರುವ ಬಾಂಬೆ ಹೈಕೋರ್ಟ್‌ ವಕೀಲ ರಾಹುಲ್‌ ತಿವಾರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಪೀಠ ಈ ಸೂಚನೆ ನೀಡಿದೆ.

‘ಕ್ರಿಕೆಟ್‌ ಟೂರ್ನಿ ಅಥವಾ ತರಬೇತಿ ಶಿಬಿರ ಆಯೋಜಿಸಲು ಮೈದಾನಗಳನ್ನು ಕಾಯ್ದಿರಿಸುವಾಗ ಸಂಬಂಧಪಟ್ಟ ಸ್ಥಳೀಯ ಸಂಸ್ಥೆ ಅಥವಾ ಕ್ರಿಕೆಟ್‌ ಸಂಸ್ಥೆಗೆ ಶುಲ್ಕ ಪಾವತಿಸಬೇಕು. ಆದರೆ ಅಲ್ಲಿ ಯಾವುದೇ ಮೂಲಸೌಕರ್ಯ ಇರುವುದಿಲ್ಲ’ ಎಂದು ತಿವಾರಿ ಅರ್ಜಿಯಲ್ಲಿ ದೂರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.