ADVERTISEMENT

ಎದೆಗುಂದಬೇಡಿ; ಅಭ್ಯಾಸ ನಡೆಸಿ: ಹೀಥರ್ ನೈಟ್

ಪಿಟಿಐ
Published 9 ಆಗಸ್ಟ್ 2020, 13:08 IST
Last Updated 9 ಆಗಸ್ಟ್ 2020, 13:08 IST
ಹೀಥರ್ ನೈಟ್
ಹೀಥರ್ ನೈಟ್   

ಲಂಡನ್: ಮುಂದಿನ ವರ್ಷ ನಡೆಯಬೇಕಾಗಿದ್ದ ಮಹಿಳೆಯರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯನ್ನು ಮುಂದೂಡಿದ್ದು ಐಸಿಸಿಯ ಸದಸ್ಯ ರಾಷ್ಟ್ರಗಳು ಮಹಿಳಾ ಕ್ರಿಕೆಟ್‌ ಕಡೆಗಣಿಸಲು ಹಾದಿಯಾಗಬಾರದು ಎಂದು ಇಂಗ್ಲೆಂಡ್ ಮಹಿಳಾ ತಂಡದ ನಾಯಕಿ ಹೀಥರ್ ನೈಟ್ ಅಭಿಪ್ರಾಯಪಟ್ಟಿದ್ದಾರೆ.

ನ್ಯೂಜಿಲೆಂಡ್‌ನಲ್ಲಿ ಮುಂದಿನ ವರ್ಷದ ಫೆಬ್ರುವರಿ ಆರರಿಂದ ಮಾರ್ಚ್ ಏಳರ ವರೆಗೆ ನಡೆಸಲು ಉದ್ದೇಶಿಸಿದ್ದ ವಿಶ್ವಕಪ್ ಟೂರ್ನಿಯನ್ನು 2022ರಲ್ಲಿ ಆಯೋಜಿಸಲು ಶುಕ್ರವಾರ ನಡೆದ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಕೋವಿಡ್ –19 ಏರುಗತಿಯಲ್ಲಿ ಸಾಗುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿತ್ತು.

‘ಇದು ಕಠಿಣ ಸಮಯ. ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಬೇಕಾದ ಸಂದರ್ಭ. ಯಾವುದೇ ತೀರ್ಮಾನದ ಹಿಂದೆ ಸುದೀರ್ಘ ಆಲೋಚನೆ ಇರಬೇಕು. ನ್ಯೂಜಿಲೆಂಡ್‌ನಲ್ಲಿ ಟೂರ್ನಿ ಆಯೋಜಿಸಲು ಪೂರಕ ವಾತಾವರಣ ಈಗ ಇದೆ. ವಿಶ್ವಕಪ್ ಟೂರ್ನಿ ಇಲ್ಲವೆಂದು ಒಂದು ವರ್ಷ ಯಾರೂ ಸುಮ್ಮನಿರಬಾರದು. ಅಭ್ಯಾಸವನ್ನು ನಿಲ್ಲಿಸಲೂಬಾರದು’ ಎಂದು 29 ವರ್ಷದ ಹೀಥರ್ ಹೇಳಿದರು.

ADVERTISEMENT

ನ್ಯೂಜಿಲೆಂಡ್‌ನಲ್ಲಿ ಈ ವರೆಗೆ 1569 ಕೋವಿಡ್ –19 ಪ್ರಕರಣಗಳು ದೃಢವಾಗಿದ್ದು ಈ ಪೈಕಿ ಹೆಚ್ಚಿನವರು ಈಗಾಗಲೇ ಗುಣಮುಖರಾಗಿದ್ದಾರೆ. ವಿಶ್ವದಲ್ಲೇ ಅತಿ ಕಡಿಮೆ ಕೋವಿಡ್ ಪ್ರಕರಣಗಳು ಇರುವ ಅಪರೂಪದ ರಾಷ್ಟ್ರಗಳಲ್ಲಿ ನ್ಯೂಜಿಲೆಂಡ್ ಕೂಡ ಒಂದು.

‘ಟೂರ್ನಿಯನ್ನು ಮುಂದೂಡುವ ಮೂಲಕ ಮಹಿಳಾ ತಂಡಗಳ ಅಭ್ಯಾಸಕ್ಕೆ ಇನ್ನಷ್ಟು ಅವಕಾಶ ಲಭಿಸಿದಂತಾಗಿದೆ. ಟೂರ್ನಿಯಲ್ಲಿ ಪಾಲ್ಗೊಳ್ಳುವ ತಂಡಗಳನ್ನು ಆರಿಸಲು ನಡೆಸಲಾಗುವ ಅರ್ಹತಾ ಟೂರ್ನಿಯ ಪೈಕಿ ಕೆಲವು ಪಂದ್ಯಗಳು ಇನ್ನೂ ಬಾಕಿ ಇವೆ. 12 ತಿಂಗಳ ಕಾಲ ಟೂರ್ನಿ ಮುಂದೆ ಹೋಗಿರುವುದರಿಂದ ಗುಣಮಟ್ಟದ ಕ್ರಿಕೆಟ್‌ಗೆ ಸಜ್ಜಾಗಲು ತಂಡಗಳಿಗೆ ಅವಕಾಶ ಲಭಿಸಿದೆ. ಅರ್ಹತೆಗಾಗಿ ಸ್ಪರ್ಧಿಸುತ್ತಿರುವ ತಂಡಗಳಿಗೂ ಅತ್ಯುತ್ತಮ ಸಾಮರ್ಥ್ಯ ತೋರಲು ಸಾಧ್ಯವಾಗಲಿದೆ’ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಮುಖ್ಯ ಕಾರ್ಯನಿರ್ವಾಹಕ ಮನು ಸಾವ್ನಿ ಅಭಿಪ್ರಾಯಪಟ್ಟರು.

ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಆತಿಥೇಯ ನ್ಯೂಜಿಲೆಂಡ್ ಈಗಾಗಲೇ ಟೂರ್ನಿಗೆ ಅರ್ಹತೆ ಗಳಿಸಿವೆ. ಉಳಿದ ಮೂರು ಸ್ಥಾನಗಳಿಗಗಾಗಿ ಅರ್ಹತಾ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.