ಸೇಂಟ್ ಜಾನ್ಸ್, ಆ್ಯಂಟಿಗಾ: ಮುಂದಿನ ವರ್ಷ ಟಿ20 ಕ್ರಿಕೆಟ್ ವಿಶ್ವಕಪ್ ಪಂದ್ಯಗಳು ನಡೆಯಲಿರುವ ತಾಣಗಳನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮತ್ತು ಕ್ರಿಕೆಟ್ ವೆಸ್ಟ್ ಇಂಡೀಸ್ ನಿಯೋಗವು ಎರಡನೇ ಬಾರಿ ಪರಿಶೀಲನೆ ನಡೆಸಿದವು.
ತಾಣಗಳಲ್ಲಿ ಆಗಿರುವ ಎಲ್ಲ ಸಿದ್ಧತೆಗಳನ್ನು ಎರಡು ವಾರಗಳ ಅವಧಿಯಲ್ಲಿ ಅವಲೋಕಿಸಲಾಗುತ್ತಿದೆ. ನವೆಂಬರ್ 30ರಿಂದ ಆರಂಭವಾಗಿರುವ ಪರಿಶೀಲನೆಯು ಡಿಸೆಂಬರ್ 15ರವರೆಗೂ ನಡೆಯಲಿದೆ.
‘ಪಂದ್ಯಗಳು ನಡೆಯಲಿರುವ ಕ್ರೀಡಾಂಗಣಗಳ ಪಿಚ್ ಮತ್ತು ಔಟ್‌ಫೀಲ್ಡ್‌ಗಳ ಸಿದ್ಧತೆ, ಅಭ್ಯಾಸದ ಸೌಲಭ್ಯಗಳು, ಆಟಗಾರರ ಡ್ರೆಸ್ಸಿಂಗ್ ರೂಮ್, ಅಧಿಕೃತ ಪ್ರಸಾರಕರ ಮತ್ತು ಮಾಧ್ಯಮ ಕೇಂದ್ರಗಳ ಸೌಲಭ್ಯಗಳು, ಐಟಿ ಹಾಗೂ ಭದ್ರತಾ ವ್ಯವಸ್ಥೆಗಳು, ಹೋಟೆಲ್ ಮತ್ತು ಅತಿಥಿಗೃಹಗಳು, ಫ್ಯಾನ್ ಪಾರ್ಕ್ ಸೇರಿದಂತೆ ಪ್ರಮುಖ ಸ್ಥಳಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು’ ಎಂದು ಐಸಿಸಿಯ ಕಾರ್ಯಚಟುವಟಿಕೆಗಳ ಮುಖ್ಯಸ್ಥರಾಗಿರುವ ಖುಷಿಯಾಲ್ ಸಿಂಗ್ ತಿಳಿಸಿದ್ದಾರೆ.
ಒಂಬತ್ತನೇ ಆವೃತ್ತಿಯ ಈ ಟೂರ್ನಿಯಲ್ಲಿ 20 ತಂಡಗಳು ಆಡಲಿವೆ. ತಂಡಗಳನ್ನು ನಾಲ್ಕು ಗುಂಪುಗಳಲ್ಲಿ ವಿಂಗಡಿಸಲಾಗಿದೆ. 55 ಪಂದ್ಯಗಳು ನಡೆಯಲಿವೆ. ಜೂನ್ 4 ರಿಂದ 30ರವರೆಗೆ ಟೂರ್ನಿ ನಡೆಯಲಿದೆ.
ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿಯಾಗಿ ಆತಿಥ್ಯ ವಹಿಸುತ್ತಿವೆ.
ಪಂದ್ಯಗಳು ನಡೆಯಬೇಕಿದ್ದ ಪ್ರಮುಖ ಸ್ಥಳಗಲ್ಲಿ ಒಂದಾದ ಡಾಮಿನಿಕಾ ಕ್ರೀಡಾಂಗಣವನ್ನು ಪಟ್ಟಿಯಿಂದ ಕೈಬಿಡಲಾಗಿದೆ.
‘ಸಿದ್ಧತೆಗಳನ್ನು ಪೂರ್ಣಗೊಳಿಸಲು ನಿಗದಿಪಡಿಸಿರುವ ಗಡುವಿನಲ್ಲಿ ಗುತ್ತಿಗೆದಾರರಿಗೆ ಸಾಧ್ಯವಾಗಿಲ್ಲವೆಂದು ಡಾಮಿನಿಕಾ ಕ್ರೀಡಾ ಸಚಿವಾಲಯವು ತಿಳಿಸಿದೆ. ಆದ್ದರಿಂದ ಟಿ20 ವಿಶ್ವಕಪ್ ಟೂರ್ನಿಯ ಯಾವುದೇ ಪಂದ್ಯವನ್ನೂ ಅಲ್ಲಿ ಆಯೋಜಿಸದಿರಲು ನಿರ್ಧರಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.