ADVERTISEMENT

IND vs AUS: ಮೆಲ್ಬರ್ನ್ ಟೆಸ್ಟ್‌ನಲ್ಲಿ ಮುಂಬೈಕರ್ ರಹಾನೆ ದರ್ಬಾರ್

ಮೊದಲ ಇನಿಂಗ್ಸ್‌ನಲ್ಲಿ ಭಾರತಕ್ಕೆ ಮುನ್ನಡೆ; ರಹಾನೆ–ಜಡೇಜ ಶತಕದ ಜೊತೆಯಾಟ

ಪಿಟಿಐ
Published 27 ಡಿಸೆಂಬರ್ 2020, 21:14 IST
Last Updated 27 ಡಿಸೆಂಬರ್ 2020, 21:14 IST
ಅಜಿಂಕ್ಯ ರಹಾನೆ –ಎಎಫ್‌ಪಿ ಚಿತ್ರ
ಅಜಿಂಕ್ಯ ರಹಾನೆ –ಎಎಫ್‌ಪಿ ಚಿತ್ರ   
""

ಮೆಲ್ಬರ್ನ್: ಕೌಶಲಪೂರ್ಣ ಕಲಾವಿದನ ಚಿತ್ತಾರದಂತಹ ಸುಂದರ ಶತಕ ದಾಖಲಿಸಿದ ಅಜಿಂಕ್ಯ ರಹಾನೆ ಭಾರತ ತಂಡದ ನಾಯಕತ್ವದ ಗರಿಮೆಯನ್ನೂ ಹೆಚ್ಚಿಸಿದರು.

ಭಾನುವಾರ ಮೆಲ್ಬರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ತಂಡಕ್ಕೆ ಆಸ್ಟ್ರೇಲಿಯಾ ಒಡ್ಡಿದ ಆತಂಕವನ್ನು ಬೌಂಡರಿಯಾಚೆಗಟ್ಟಿದ ರಹಾನೆಯ ಆಟ ರಂಗೇರಿತು.

ಅದರಿಂದಾಗಿ ಮೊದಲ ಇನಿಂಗ್ಸ್‌ನಲ್ಲಿ 82 ರನ್‌ಗಳ ಮಹತ್ವದ ಮುನ್ನಡೆ ಲಭಿಸಿತು. ಮಳೆಯಿಂದಾಗಿ ದಿನದಾಟ ನಿಂತಾಗ ಭಾರತ ತಂಡವು 91.3 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 277 ರನ್ ಗಳಿಸಿತು.

ADVERTISEMENT

ಪಂದ್ಯದ ಮೊದಲ ದಿನವಾದ ಶನಿವಾರ ಆಸ್ಟ್ರೇಲಿಯಾ ತಂಡವು 195 ರನ್‌ಗಳಿಗೆ ಆಲೌಟ್ ಆಯಿತು. ಇನಿಂಗ್ಸ್ ಆರಂಭಿಸಿದ್ದ ಭಾರತವು 11 ಓವರ್‌ಗಳಲ್ಲಿ 1 ವಿಕೆಟ್‌ಗೆ 36 ರನ್ ಗಳಿಸಿತ್ತು.

ಎರಡನೇ ದಿನ ಬೆಳಿಗ್ಗೆ ಇನಿಂಗ್ಸ್ ಮುಂದುವರಿಸಿದ ಯುವಬ್ಯಾಟ್ಸ್‌ಮನ್ ಶುಭಮನ್ ಗಿಲ್ ಮತ್ತು ಅನುಭವಿ ಚೇತೇಶ್ವರ್ ಪೂಜಾರ ಸೇರಿ 66 ಎಸೆತಗಳನ್ನು ಎದುರಿಸಿದರು. ಆಸ್ಟ್ರೇಲಿಯಾ ವೇಗಿಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಗಿಲ್ (45; 65ಎ,8ಬೌಂ), ತಮ್ಮ ಅರ್ಧಶತಕಕ್ಕೆ ಐದು ರನ್‌ಗಳ ಅಗತ್ಯವಿದ್ದಾಗ ಪ್ಯಾಟ್ ಕಮಿನ್ಸ್‌ ಎಸೆತದಲ್ಲಿ ಔಟಾದರು.

ಆಗ ಕ್ರೀಸ್‌ಗೆ ಬಂದ ’ಹಂಗಾಮಿ ನಾಯಕ‘ ರಹಾನೆ ತಮ್ಮ ಹೊಣೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಊಟದ ವಿರಾಮಕ್ಕೂ ಮುನ್ನವೇ ಪೂಜಾರ (17 ರನ್) ಔಟಾದರು. 45ನೇ ಓವರ್‌ನಲ್ಲಿ ಹನುಮವಿಹಾರಿ (21; 66ಎ) ಸ್ಪಿನ್ನರ್ ನೇಥನ್ ಲಯನ್ ಮೋಡಿಗೆ ಮರುಳಾದರು.

ಅಜಿಂಕ್ಯ ಜೊತೆಗೂಡಿದ ರಿಷಭ್ ಪಂತ್ (29; 40ಎ, 3ಬೌಂ) ತಮ್ಮ ಆಟದ ವೇಗಕ್ಕೆ ನಿಯಂತ್ರಣ ಹಾಕದೇ ದಂಡತೆತ್ತರು. ಮಿಚೆಲ್ ಸ್ಟಾರ್ಕ್ ಸ್ವಿಂಗ್ ಎಸೆತವನ್ನು ಅಂದಾಜಿಸುವಲ್ಲಿ ವಿಫಲರಾಗಿ ಕೀಪರ್ ಟಿಮ್ ಪೇನ್‌ಗೆ ಕ್ಯಾಚಿತ್ತರು.

ಆಗ ಮೊದಲ ಇನಿಂಗ್ಸ್‌ನ ಬಾಕಿ ಚುಕ್ತಾ ಮಾಡಲು ತಂಡಕ್ಕೆ ಇನ್ನೂ 25 ರನ್‌ಗಳ ಅವಶ್ಯಕತೆ ಇತ್ತು.

ಆರು ವರ್ಷಕ್ಕೆ ಎರಡನೇ ಶತಕ: ಒಂದೆಡೆ ವಿಕೆಟ್‌ಗಳು ಉರುಳುತ್ತಿದ್ದರೂ, ’ಮುಂಬೈಕರ್‘ ರಹಾನೆ ಮಾತ್ರ ತಾಳ್ಮೆ ಕಳೆದುಕೊಳ್ಳಲಿಲ್ಲ. ಈ ಸಲದ ಬಾರ್ಡರ್–ಗಾವಸ್ಕರ್ ಸರಣಿಯ ಮೊದಲ ಶತಕ ದಾಖಲಿಸಿದ ಆಟಗಾರನಾದರು. ಅಲ್ಲದೇ ಮೆಲ್ಬರ್ನ್‌ನಲ್ಲಿ ಆರು ವರ್ಷಗಳ ನಂತರ ತಮ್ಮ ಎರಡನೇ ಶತಕ ದಾಖಲಿಸಿದರು. 2014ರಲ್ಲಿ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಅವರು 147 ರನ್ ಗಳಿಸಿದ್ದರು.

ಒಂದು ಬದಿಯಲ್ಲಿ ವಿಕೆಟ್ ಪತನವಾಗುವಾಗ ತಾಳ್ಮೆಯಿಂದ ರನ್ ಗಳಿಸಿದರು. 111 ಎಸೆತಗಳಲ್ಲಿ ಅರ್ಧಶತಕದ ಗಡಿ ಮುಟ್ಟಿದರು. ನಂತರ ವೇಗ ಹೆಚ್ಚಿಸಿದರು. ಇನ್ನುಳಿದ 50 ರನ್‌ಗಳನ್ನು 84 ಎಸೆತಗಳಲ್ಲಿ ಗಳಿಸಿದರು. ಒಟ್ಟು 11 ಬೌಂಡರಿಗಳು ಅವರ ಬ್ಯಾಟ್‌ನಿಂದ ಸಿಡಿದವು.

ಜಡೇಜ ಜೊತೆಗೆ ಮುರಿಯದ ಆರನೇ ವಿಕೆಟ್‌ಗೆ 104 ರನ್‌ ಗಳಿಸಿದರು. ತಮ್ಮ ಜೀವನದ 50ನೇ ಟೆಸ್ಟ್ ಪಂದ್ಯ ಆಡುತ್ತಿರುವ ಆಲ್‌ರೌಂಡರ್ ಜಡೇಜ ತಮ್ಮ ಮೇಲಿನ ಭರವಸೆಯನ್ನು ಹುಸಿಗೊಳಿಸಲಿಲ್ಲ.

ರಹಾನೆ ಆಟಕ್ಕೆ ವಿರಾಟ್ ಮೆಚ್ಚುಗೆ
’ಮತ್ತೊಂದು ಸಂತಸಮಯ ದಿನ ಇದು. ಟೆಸ್ಟ್‌ ಕ್ರಿಕೆಟ್‌ನ ಶ್ರೇಷ್ಠ ಆಟ ಮೂಡಿಬಂದಿದೆ. ಜಿಂಕ್ಸ್‌ (ಅಜಿಂಕ್ಯ ರಹಾನೆ) ಅಮೋಘ ಶತಕ ಹೊಡೆದಿದ್ದಾರೆ‘–

ಪಿತೃತ್ವ ರಜೆಯ ಮೇಲೆ ತವರಿಗೆ ಮರಳಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಟ್ವೀಟ್ ಇದು.

ತಮ್ಮ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ವಹಿಸಿರುವ ರಹಾನೆ ಅವರ ಶತಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ವಿರಾಟ್ ಅಡಿಲೇಡ್ ಟೆಸ್ಟ್‌ ನಂತರ ಭಾರತಕ್ಕೆ ಮರಳಿದ್ದಾರೆ.

ಪಂದ್ಯದ ಮೊದಲ ದಿನ ತಮ್ಮ ನಾಯಕತ್ವ ಕೌಶಲಕ್ಕಾಗಿ ಅಪಾರ ಮೆಚ್ಚುಗೆ ಗಳಿಸಿದ್ದ ರಹಾನೆ, ಎರಡನೆ ದಿನ ತಮ್ಮ ಬ್ಯಾಟಿಂಗ್‌ನಿಂದಾಗಿ ಗಮನ ಸೆಳೆದಿದ್ದಾರೆ. ಪಂದ್ಯದ ನಂತರ ಆಸ್ಟ್ರೇಲಿಯಾದ ಬೌಲರ್ ಮಿಚೆಲ್ ಸ್ಟಾರ್ಕ್ ಕೂಡ ರಹಾನೆ ಆಟವನ್ನು ಕೊಂಡಾಡಿದ್ದಾರೆ.

’ರಹಾನೆ ಅಮೋಘವಾದ ಬ್ಯಾಟಿಂಗ್ ಮಾಡಿದರು. ನಮ್ಮ ಮೊದಲ ಇನಿಂಗ್ಸ್‌ ಸ್ಕೋರ್‌ ಚುಕ್ತಾ ಮಾಡುವ ಮುನ್ನವೇ ಭಾರತವು ಆತಂಕದಲ್ಲಿತ್ತು. ಅದನ್ನು ರಹಾನೆ ತಪ್ಪಿಸಿದ್ದಾರೆ. ಎಲ್ಲ ಒತ್ತಡವನ್ನೂ ತಮ್ಮ ಮೇಲೆಳೆದುಕೊಂಡು ತಂಡಕ್ಕೆ ನಿರಾಳತೆ ನೀಡಿದ್ದಾರೆ‘ ಎಂದಿದ್ದಾರೆ.

ಎರಡನೇ ದಿನದ ಪ್ರಮುಖ ಅಂಶಗಳು...

* 2 ಮೆಲ್ಬರ್ನ್‌ನಲ್ಲಿ ಶತಕ ದಾಖಲಿಸಿದ ಭಾರತ ತಂಡದ ಎರಡನೇ ನಾಯಕ ರಹಾನೆ. 1999ರಲ್ಲಿ ಸಚಿನ್ ತೆಂಡೂಲ್ಕರ್ 116 ರನ್ ಗಳಿಸಿದ್ದರು

*14 ಆಸ್ಟ್ರೇಲಿಯಾ ಎದುರು ಶತಕ ಗಳಿಸಿದ ಭಾರತದ ನಾಯಕರಲ್ಲಿ ರಹಾನೆ ಹದಿನಾಲ್ಕನೇಯವರು

* 12 ಟೆಸ್ಟ್ ಕ್ರಿಕೆಟ್‌ನಲ್ಲಿ ಅಜಿಂಕ್ಯ ರಹಾನೆ ಗಳಿಸಿರುವ ಒಟ್ಟು ಶತಕಗಳು

*2 ಮೆಲ್ಬರ್ನ್‌ನಲ್ಲಿ ಅಜಿಂಕ್ಯ ರಹಾನೆ ದಾಖಲಿಸಿದ ಶತಕಗಳು

*34 ಬರವೀಂದ್ರ ಜಡೇಜ 50ನೇ ಟೆಸ್ಟ್ ಆಡುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೂವತ್ತನಾಲ್ಕನೇ ಆಟಗಾರನಾದರು

*250 ವಿಕೆಟ್‌ ಗಳಿಕೆಯಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಸಾಧಿಸಿದ ಮೈಲುಗಲ್ಲು‌‌

*
ಮುಂಬೈನ ಖಡೂಸ್ ಶೈಲಿಯ ಬ್ಯಾಟಿಂಗ್ ನೋಡಲು ಸಾಧ್ಯವಾಯಿತು. ಆದರೂ ಪಂದ್ಯದಲ್ಲಿ ಭಾರತ ಏರಬೇಕಾದ ಎತ್ತರ ಇನ್ನೂ ಬಹಳ ಇದೆ.
–ಬಿಷನ್ ಸಿಂಗ್ ಬೇಡಿ ಮಾಜಿ ಕ್ರಿಕೆಟಿಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.