ADVERTISEMENT

IND vs ENG 1st Test: ಕನಿಷ್ಠ ಡ್ರಾ ಮಾಡಿಕೊಳ್ಳುವ ಅವಕಾಶವಿದ್ದ ಪಂದ್ಯ ಸೋತ ಭಾರತ

ಏಜೆನ್ಸೀಸ್
Published 9 ಫೆಬ್ರುವರಿ 2021, 10:54 IST
Last Updated 9 ಫೆಬ್ರುವರಿ 2021, 10:54 IST
ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ
ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ    

ಚೆನ್ನೈ: ಆಸ್ಟ್ರೇಲಿಯಾ ತಂಡವನ್ನು ಅದರದ್ದೇ ನೆಲದಲ್ಲಿ 2-1 ಅಂತರದಿಂದ ಮಣಿಸಿ ಐಸಿಹಾಸಿಕ ದಾಖಲೆ ಬರೆದಿದ್ದ ಭಾರತ ಕ್ರಿಕೆಟ್‌ ತಂಡ ಇದೀಗ ತವರಿನಲ್ಲಿ ಮುಖಭಂಗ ಅನುಭವಿಸಿದೆ. ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ನಾಲ್ಕು ಟೆಸ್ಟ್‌ ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು ಬರೋಬ್ಬರಿ 227 ರನ್‌ ಅಂತರದಿಂದ ಸೋತು ಸುಣ್ಣವಾಗಿದೆ.

ಇಲ್ಲಿನ ಚಿದಂಬರಂ ಕ್ರೀಡಾಂಗಣದಲ್ಲಿ ಮುಕ್ತಾಯವಾದ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಮಾಡಿದ ಪ್ರವಾಸಿ‌ ಪಡೆ ನಾಯಕ ಜೋ ರೂಟ್‌ ತಮ್ಮ ನೂರನೇ ಟೆಸ್ಟ್‌ ಪಂದ್ಯದಲ್ಲ ಗಳಿಸಿದ ದಾಖಲೆಯ ದ್ವಿಶತಕದ (218) ರನ್ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 578 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿತ್ತು. ಇದಕ್ಕುತ್ತರವಾಗಿ ವಿರಾಟ್‌ ಕೊಹ್ಲಿ ಪಡೆ ಗಳಿಸಿದ್ದು, ಕೇವಲ 337 ರನ್‌ ಮಾತ್ರ. ಹೀಗಾಗಿ ಟೀಂ ಫಾಲೋಆನ್‌ನಲ್ಲಿ ಸಿಲುಕಿತ್ತು. ಆದರೆ ಫಾಲೋಆನ್‌ ಹೇರದೆ ಎರಡನೇ ಇನಿಂಗ್ಸ್‌‌ ಆರಂಭಿಸಿದ ಇಂಗ್ಲೆಂಡ್‌ ಪಡೆಗೆ ಅಶ್ವಿನ್‌ ಆಘಾತ ನೀಡಿದರು.61 ರನ್‌ ನೀಡಿ ಪ್ರಮುಖ ಆರು ವಿಕೆಟ್‌ಗಳನ್ನು ಉರುಳಿಸಿದರು. ನದೀಂ ಎರಡು, ಜಸ್‌ಪ್ರೀತ್‌ ಬೂಮ್ರಾ ಮತ್ತು ಇಶಾಂತ್‌ ಶರ್ಮಾ ತಲಾ ಒಂದೊಂದು ವಿಕೆಟ್‌ ಪಡೆದರು. ಹೀಗಾಗಿ ಆಂಗ್ಲ ಪಡೆ 178ರನ್‌ಗಳಿಗೆ ಸರ್ವಪತನ ಕಂಡಿತು.

ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಇಳಿಯುವ ಮುನ್ನ ಭಾರತದೆದುರು ಎರಡು ಅಯ್ಕೆಗಳಿದ್ದವು. ಮೊದಲನೇಯದು, ಬೃಹತ್‌ ಗುರಿಯನ್ನುತಲುಪಿ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲೇ ಅತಿಹೆಚ್ಚು ರನ್‌ ಗುರಿ ಬೆನ್ನಟ್ಟಿ ಗೆದ್ದ ದಾಖಲೆ ತನ್ನ ಹೆಸರಿಗೆ ಬರೆದುಕೊಳ್ಳುವುದು. ಎರಡನೇಯದು,ಈಗಾಗಲೇ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿ, 241 ರನ್‌ಗಳ ಹಿನ್ನಡೆಯಲ್ಲಿದ್ದಕಾರಣಈ ಬಾರಿ ವಿಕೆಟ್‌ ಕಳೆದುಕೊಳ್ಳದೆ ಎಚ್ಚರಿಕೆಯ ಆಟವಾಡಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವುದು. ಆ ಮೂಲಕ ಸೋಲಿನಿಂದ ಪಾರಾಗುವುದು.

ಆದರೆ, ಟೀಂ ಇಂಡಿಯಾ ಈ ಎರಡನ್ನೂ ಮಾಡದೆ ಸೋಲಿಗೆ ಶರಣಾಗಿದೆ. ಕೇವಲ198ರನ್‌ ಗಳಿಸಿ ಆಲೌಟ್‌ ಆಗುವುದರೊಂದಿಗೆ ಸರಣಿಯಲ್ಲಿ0-1 ಅಂತರದ ಹಿನ್ನಡೆ ಅನುಭವಿಸಿದೆ.

ಬೃಹತ್‌ ಗುರಿಯ ಪಂದ್ಯದಲ್ಲಿ ಕೈಕೊಟ್ಟ ರೋಹಿತ್
ಸವಾಲಿನ ಗುರಿ ಎದುರು ನಾಲ್ಕನೇ ದಿನದ ಅಂತಿಮ ಅವಧಿಯಲ್ಲಿ ಬ್ಯಾಟಿಂಗ್‌ ಆರಂಭಿಸಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಅನುಭವಿ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸುವಲ್ಲಿ ವಿಫಲರಾದರು. ಮೊದಲ ಇನಿಂಗ್ಸ್‌ನಲ್ಲಿ ಕೇವಲ6 ರನ್‌ ಗಳಿಸಿದ್ದ ರೋಹಿತ್‌ಎರಡನೇ ಇನಿಂಗ್ಸ್‌ನಲ್ಲಿಗಳಿಸಿದ್ದು12ರನ್‌ ಮಾತ್ರ. ಇದು ಕೊಹ್ಲಿ ಪಡೆಗೆದೊಡ್ಡ ಪೆಟ್ಟು ನೀಡಿತು.

ನಾಲ್ಕನೇ ದಿನದಾಟ ಮುಗಿದಾಗ ಭಾರತ 39 ರನ್‌ ಗಳಿಸಿ ಒಂದು ವಿಕೆಟ್‌ ಕಳೆದುಕೊಂಡಿತ್ತು. ಯುವ ಬ್ಯಾಟ್ಸ್‌ಮನ್‌ ಶುಭಮನ್‌ ಗಿಲ್‌ 15 ರನ್‌ ಮತ್ತು ಟೆಸ್ಟ್‌ ಪರಿಣತ ಬ್ಯಾಟ್ಸ್‌ಮನ್‌ ಚೇತೇಶ್ವರ ಪೂಜಾರ12 ರನ್‌ ಗಳಿಸಿ ಕೊನೆಯ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದರು. ಪೂಜಾರ 5ನೇ ದಿನ ತಮ್ಮ ಖಾತೆಗೆ ಇನ್ನು ಮೂರು ರನ್‌ ಸೇರಿಸಿ ಪೆವಿಲಿಯನ್‌ ಸೇರಿಕೊಂಡರು.ಬಳಿಕ ಗಿಲ್‌ (50) ಮತ್ತುಉಪನಾಯಕ ಅಜಿಂಕ್ಯ ರಹಾನೆ (0) ಬೆನ್ನುಬೆನ್ನಿಗೆ ವಿಕೆಟ್‌ ಒಪ್ಪಿಸಿ ಪೂಜಾರ ಹಿಂದೆಯೇ ನಡೆದರು.ಮೊದಲ ಇನಿಂಗ್ಸ್‌ನಲ್ಲಿ ಬಿರುಸಿನ ಬ್ಯಾಟಿಂಗ್‌ ನಡೆಸಿದ ರಿಷಭ್‌ ಪಂತ್‌ (11), ಯುವ ಆಲ್ರೌಂಡರ್‌ ವಾಷಿಂಗ್ಟನ್‌ ಸುಂದರ್‌ (0) ಕೈಕೊಟ್ಟರು.

ನಾಯಕ ವಿರಾಟ್‌ ಕೊಹ್ಲಿ (72) ಪ್ರತಿರೋಧ ತೋರಿದರಾದರೂ ಸಾಕಾಗಲಿಲ್ಲ.ಗಿಲ್‌ ಮತ್ತು ಕೊಹ್ಲಿ ಮಾತ್ರವೇ ಅರ್ಧಶತಕದ ಗಡಿ ದಾಟಿದರು. ಇಲ್ಲವಾದರೆ, ತಂಡದ ಮೊತ್ತ ನೂರರ ಗಡಿ ದಾಟುವುದೂ ಕಷ್ಟವಿತ್ತು.ಒಂದು ವೇಳೆ ಭಾರತ ಕೊನೆಯ ದಿನ ರಕ್ಷಣಾತ್ಮಕ ಆಟವಾಡಿದ್ದರೆ ಪಂದ್ಯವನ್ನು ಡ್ರಾ ಮಾಡಿಕೊಳ್ಳಬುದಾಗಿತ್ತು.

ಇಂಗ್ಲೆಂಡ್‌ ಪರ ಜಾಕ್‌ ಲೀಚ್‌ 4, ಜೇಮ್ಸ್‌ ಆ್ಯಂಡರ್ಸನ್ 3 ವಿಕೆಟ್‌ ಪಡೆದರೆ, ಜೋಫ್ರಾ ಆರ್ಚರ್‌, ಡಾಮಿನಿಕ್‌ ಬೆಸ್‌ ಮತ್ತು ಬೆನ್‌ ಸ್ಟೋಕ್ಸ್‌ ತಲಾ ಒಂದೊಂದು ವಿಕೆಟ್‌ ಹಂಚಿಕೊಂಡರು.

ಕೈಲ್ ಇನಿಂಗ್ಸ್‌ನಿಂದ ಸ್ಫೂರ್ತಿ ಪಡೆದ ಕೊಹ್ಲಿ ಪಡೆ
ಎರಡು ದಿನಗಳ ಹಿಂದೆಯಷ್ಟೇ ವೆಸ್ಟ್‌ ಇಂಡೀಸ್‌ ತಂಡ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಬರೋಬ್ಬರಿ395ರನ್‌ಗಳ ಗುರಿ ಬೆನ್ನತ್ತಿ ಗೆದ್ದಿತ್ತು. ಈ ಪಂದ್ಯದ ಮೂಲಕ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ವಿಂಡೀಸ್‌ ಪಡೆಯ ಕೈಲ್‌ ಮಯರ್ಸ್‌ ಮೊದಲ ದ್ವಿಶತಕ ಸಿಡಿಸಿ ಸಂಭ್ರಮಿಸಿದರು. ವಿಂಡೀಸ್‌ ಪಡೆ59 ರನ್‌ ಗಳಿಸಿ 3 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗಕ್ರೀಸ್‌ಗೆ ಬಂದ ಕೈಲ್‌, ನಾಲ್ಕನೇ ವಿಕೆಟ್‌ ಪಾಲುದಾರಿಕೆಯಲ್ಲಿ ಕ್ರುಮಾ ಬೊನ್ನರ್‌ (86) ಜೊತೆಗೂಡಿ218 ರನ್‌ ಮತ್ತು ಜೊಶುವಾ ಡಿ ಸಿಲ್ವಾ ಜೊತೆ ಆರನೇ ವಿಕೆಟ್‌ ಜೊತೆಯಾಟದಲ್ಲಿ 100 ರನ್‌ ಕೂಡಿಸಿದರು.

ಬರೋಬ್ಬರಿ 310 ಎಸೆತಗಳನ್ನು ಎದುರಿಸಿದ ಕೈಲ್‌,20 ಬೌಂಡರಿ ಮತ್ತು7 ಸಿಕ್ಸರ್‌ ಸಹಿತ210 ರನ್‌ ಸಿಡಿಸಿ ಅಜೇಯರಾಗಿ ಉಳಿದರು. ಮಾತ್ರವಲ್ಲದೆ ತಮ್ಮ ತಂಡಕ್ಕೆ3 ವಿಕೆಟ್‌ ಅಂತರದ ಬೃಹತ್‌ ಜಯ ತಂದುಕೊಟ್ಟರು. ಈ ಮೂಲಕ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ೫ನೇ ಅತಿ ದೊಡ್ಡ ಬೆನ್ನತ್ತಿ ಗೆದ್ದ ಶ್ರೇಯಕ್ಕೆ ವಿಂಡೀಸ್‌ ಪಾತ್ರವಾಯಿತು.

ಸಂಕಷ್ಟದ ಸಂದರ್ಭದಲ್ಲಿ ಸಾಹಸಮಯ ಇನಿಂಗ್ಸ್‌ ಕಟ್ಟಿದ್ದ ಕೈಲ್‌ ಆಟ, ಭಾರತ ತಂಡಕ್ಕೆ ಸ್ಫೂರ್ತಿಯಾಗಬೇಕಿತ್ತು. ಆದರೆ ಹಾಗಾಗಲಿಲ್ಲ.

ವಿಂಡೀಸ್‌ ಪಡೆ 2003ರಲ್ಲಿ ಆಸ್ಟ್ರೇಲಿಯಾ ವಿರುದ್ಧ418 ರನ್‌, ದಕ್ಷಿಣ ಆಫ್ರಿಕಾ 2009ರಲ್ಲಿ ಆಸ್ಟ್ರೇಲಿಯಾ ವಿರುದ್ಧ414 ರನ್‌ ಮತ್ತು ಆಸ್ಟ್ರೇಲಿಯಾ 1948ರಲ್ಲಿ ಇಂಗ್ಲೆಂಡ್‌ ವಿರುದ್ಧ404 ರನ್‌ ಗುರಿ ಬೆನ್ನಟ್ಟಿ ಗೆಲುವು ಸಾಧಿಸಿದ್ದವು. ಭಾರತ ತಂಡ 1975ರಲ್ಲಿ ವಿಂಡೀಸ್‌ ವಿರುದ್ಧ403 ರನ್‌ ಗುರಿ ಮುಟ್ಟಿ ಗೆದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.