ADVERTISEMENT

IND vs ENG Test: ಆತಿಥೇಯರ ತಂತ್ರಕ್ಕೆ ‘ಹಾರ್ಟ್ಲಿ‘ ತಿರುಮಂತ್ರ

​ಪ್ರಜಾವಾಣಿ ವಾರ್ತೆ
Published 28 ಜನವರಿ 2024, 12:40 IST
Last Updated 28 ಜನವರಿ 2024, 12:40 IST
<div class="paragraphs"><p>ಟಾಮ್ ಹಾರ್ಟ್ಲಿ</p></div>

ಟಾಮ್ ಹಾರ್ಟ್ಲಿ

   

ಹೈದರಾಬಾದ್: ಆತಿಥೇಯ ಭಾರತ ತಂಡದ ತಂತ್ರಕ್ಕೆ ತಿರುಮಂತ್ರ ಹಾಕಿದ ಇಂಗ್ಲೆಂಡ್ ತಂಡದ ನವಪ್ರತಿಭೆ ಟಾಮ್ ವಿಲಿಯಮ್ ಹಾರ್ಟ್ಲಿ ತಮ್ಮ ಪದಾರ್ಪಣೆ ಟೆಸ್ಟ್ ಪಂದ್ಯವನ್ನು ಅವಿಸ್ಮರಣೀಯಗೊಳಿಸಿಕೊಂಡರು.

ರಾಜೀವಗಾಂಧಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್‌ನಲ್ಲಿ ಎಡಗೈ ಸ್ಪಿನ್ನರ್ ಹಾರ್ಟ್ಲಿ (26.2–5–62–7) ಇಂಗ್ಲೆಂಡ್ ತಂಡಕ್ಕೆ 28 ರನ್‌ಗಳ ಗೆಲುವಿನ ಕಾಣಿಕೆ ನೀಡಿದರು. ಇದರೊಂದಿಗೆ ಪ್ರವಾಸಿ ಬಳಗವು ಐದು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಗಳಿಸಿತು.

ADVERTISEMENT

ಪಂದ್ಯದ ನಾಲ್ಕನೇ ದಿನವಾದ ಭಾನುವಾರ 231 ರನ್‌ಗಳ ಜಯದ ಗುರಿ ಬೆನ್ನಟ್ಟಿದ್ದ ಭಾರತ ತಂಡವು 69.2 ಓವರ್‌ಗಳಲ್ಲಿ 202 ರನ್‌ ಗಳಿಸಿ ಆಲೌಟ್ ಆಯಿತು. ಕೆಳಹಂತದಲ್ಲಿ ಪುಟಿಯುತ್ತಿದ್ದ ಚೆಂಡು ಮೊನಚಾಗಿ ತಿರುವು ಪಡೆಯುತ್ತಿತ್ತು. ಹಾರ್ಟ್ಲಿ ಎಸೆತಗಳ ಚಲನೆಯನ್ನು ಗುರುತಿಸುವಲ್ಲಿ ಪರದಾಡಿದ ಭಾರತದ ಬ್ಯಾಟರ್‌ಗಳು ತಲೆತಗ್ಗಿಸಿದರು. ರೋಹಿತ್ ಶರ್ಮಾ (39; 58ಎ, 4X7), ಕೆ.ಎಲ್. ರಾಹುಲ್ (22; 48ಎ, 4X3), ಶ್ರೀಕರ್ ಭರತ್ (28; 59ಎ), ಆರ್. ಅಶ್ವಿನ್ (28; 84ಎ) ಹಾಗೂ ಕಟ್ಟಕಡೆಯ ಬ್ಯಾಟರ್ ಮೊಹಮ್ಮದ್ ಸಿರಾಜ್ (12; 20ಎ) ಅವರ ಹೋರಾಟಕ್ಕೆ ಫಲ ಸಿಗಲಿಲ್ಲ.

ಮೂರನೇ ಕ್ರಮಾಂಕದ ಬ್ಯಾಟರ್ ಶುಭಮನ್ ಗಿಲ್ ಸೊನ್ನೆ ಸುತ್ತಿದರು. ಮೊದಲ ಇನಿಂಗ್ಸ್‌ನಲ್ಲಿ ಮಿಂಚಿದ್ದ ರವೀಂದ್ರ ಜಡೇಜ 2 ರನ್ ಗಳಿಸಿ ರನೌಟ್ ಆದರು. ಅಲ್ಲದೇ ಯಶಸ್ವಿ ಜೈಸ್ವಾಲ್ ಹಾಗೂ ಶ್ರೇಯಸ್ ಅಯ್ಯರ್ ಅವರು ದೀರ್ಘ ಇನಿಂಗ್ಸ್‌ ಆಡುವಲ್ಲಿ ವಿಫಲರಾದರು.

ತಂಡವು 119 ರನ್‌ಗಳಿಗೆ ಏಳು ವಿಕೆಟ್ ಕಳೆದುಕೊಂಡಿದ್ದಾಗ, ಭರತ್ ಮತ್ತು ಅಶ್ವಿನ್ ಅವರು ಜೊತೆಯಾಟದಲ್ಲಿ 57 ರನ್ ಸೇರಿಸಿ ಜಯದ ಭರವಸೆ ಮೂಡಿಸಿದ್ದರು. ಆದರೆ ಚಹಾ ವಿರಾಮದ ನಂತರದ ಆಟದಲ್ಲಿ ಭರತ್ ಅವರನ್ನು ಬೌಲ್ಡ್ ಆಡಿದ ಹಾರ್ಟ್ಲಿ ಮತ್ತೆ ಪೆಟ್ಟುಕೊಟ್ಟರು. ಅಶ್ವಿನ್ ಹಾಗೂ ಸಿರಾಜ್ ವಿಕೆಟ್‌ಗಳನ್ನೂ ಹಾರ್ಟ್ಲಿ ಅವರೇ ಕಬಳಿಸಿದರು.

ಪಿಚ್ ಪರಿಸ್ಥಿತಿಯನ್ನು ಚೆನ್ನಾಗಿ ಅರಿತುಕೊಂಡ ನಾಯಕ ಬೆನ್ ಸ್ಟೋಕ್ಸ್‌ ಅವರು ಸ್ಪಿನ್ನರ್‌ಗಳಿಗೆ ಹೆಚ್ಚು ಓವರ್‌ಗಳನ್ನು ಕೊಟ್ಟಿದ್ದು ಫಲ ನೀಡಿತು.

2013ರಿಂದ ಇಲ್ಲಿಯವರೆಗೆ ಭಾರತ ತಂಡವು ತವರಿನಲ್ಲಿ ಸೋತ ನಾಲ್ಕನೇ ಟೆಸ್ಟ್ ಇದಾಗಿದೆ.

ದ್ವಿಶತಕ ತಪ್ಪಿಸಿಕೊಂಡ ಪೋಪ್

ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಮುನ್ನಡೆ ಗಳಿಸಿದ್ದ ಭಾರತ ತಂಡದ ಕೈಯಿಂದ ಗೆಲುವನ್ನು ಕಸಿದುಕೊಂಡವರು ಬ್ಯಾಟರ್ ಒಲಿ ಪೋಪ್. ಶನಿವಾರ ನಡೆದಿದ್ದ ಎರಡನೇ ಇನಿಂಗ್ಸ್‌ನಲ್ಲಿ ಪೋಪ್ 148 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದರು. ನಾಲ್ಕನೇ ದಿನ ಆಟ ಮುಂದುವರಿಸಿದ ಅವರು ತಮ್ಮ ತಂಡದ ಮೊತ್ತವನ್ನು ಹೆಚ್ಚಿಸಿದರು. ಬ್ಯಾಟಿಂಗ್‌ನಲ್ಲೂ ಮಿಂಚಿದ ಹಾರ್ಟ್ಲಿ (34; 52ಎ, 4X4) ಅವರೊಂದಿಗೆ ಪೋಪ್ ಎಂಟನೇ ವಿಕೆಟ್ ಜೊತೆಯಾಟದಲ್ಲಿ 80 ರನ್‌ ಸೇರಿಸಿದರು.

ದ್ವಿಶತಕದತ್ತ ಸಾಗಿದ್ದ ಪೋಪ್ (196; 278ಎ, 4X21) ಬೂಮ್ರಾ ಎಸೆತದಲ್ಲಿ ಕ್ಲೀನ್‌ಬೌಲ್ಡ್ ಆದರು. ಇಂಗ್ಲೆಂಡ್ ತಂಡವು 102.1 ಓವರ್‌ಗಳಲ್ಲಿ 420 ರನ್ ಗಳಿಸಿತು.

ಗುರಿ ಬೆನ್ನತ್ತಿದ್ದ ಭಾರತ ತಂಡಕ್ಕೆ ರೋಹಿತ್ ಮತ್ತು ಯಶಸ್ವಿ ಮೊದಲ ವಿಕೆಟ್ ಜೊತೆಯಾಟದಲ್ಲಿ 42 ರನ್‌ ಗಳಿಸಿ ಉತ್ತಮ ಆರಂಭ ನೀಡಿದರು. ಆದರೆ 12ನೇ ಓವರ್‌ ಒಂದರಲ್ಲಿಯೇ ಯಶಸ್ವಿ ಮತ್ತು ಶುಭಮನ್ ವಿಕೆಟ್ ಗಳಿಸಿದ ಹಾರ್ಟ್ಲೀ ತಮ್ಮ ಬೇಟೆ ಆರಂಭಿಸಿದರು.

ಸಂಕ್ಷಿಪ್ತ ಸ್ಕೋರು

ಮೊದಲ ಇನಿಂಗ್ಸ್: ಇಂಗ್ಲೆಂಡ್: 64.3 ಓವರ್‌ಗಳಲ್ಲಿ 246. ಭಾರತ: 121 ಓವರ್‌ಗಳಲ್ಲಿ 436. ಎರಡನೇ ಇನಿಂಗ್ಸ್: 102.1 ಓವರ್‌ಗಳಲ್ಲಿ 420 (ಒಲಿ ಪೋಪ್ 196, ರೆಹಾನ್ ಅಹಮದ್ 28, ಟಾಮ್ ಹಾರ್ಟ್ಲಿ 34, ಜಸ್‌ಪ್ರೀತ್ ಬೂಮ್ರಾ 41ಕ್ಕೆ4, ಆರ್. ಅಶ್ವಿನ್ 126ಕ್ಕೆ3, ರವೀಂದ್ರ ಜಟೇಜ 131ಕ್ಕೆ2) ಭಾರತ: 69.2 ಓವರ್‌ಗಳಲ್ಲಿ 202 (ರೋಹಿತ್ ಶರ್ಮಾ 39, ಕೆ.ಎಲ್. ರಾಹುಲ್ 22, ಶ್ರೀಕರ್ ಭರತ್ 28, ಆರ್. ಅಶ್ವಿನ್ 28, ಟಾಮ್ ಹಾರ್ಟ್ಲಿ 62ಕ್ಕೆ7) ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ 28 ರನ್‌ಗಳ ಜಯ. ಪಂದ್ಯಶ್ರೇಷ್ಠ: ಒಲಿ ಪೋಪ್.

ಭಾರತದ ರೋಹಿತ್‌ ಶರ್ಮಾ 39 ರನ್‌ಗಳಿಸಿದರು. ಉಳಿದ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು.  2ನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಒಲಿ ಪೋಪ್ ಅವರ ಅಮೋಘ 196 ರನ್‌ ಹಾಗೂ ಟಾಮ್ ಹಾರ್ಟ್ಲಿ 7 ವಿಕೆಟ್‌ ಪಡೆಯುವ ಮೂಲಕ ತಂಡದ ಗೆಲುವಿಗೆ ಕಾರಣರಾದರು.

ಸಂಕ್ಷಿಪ್ತ ಸ್ಕೋರ್:

ಇಂಗ್ಲೆಂಡ್: 246 ಮತ್ತು 420

ಭಾರತ: 436 ಮತ್ತು 202

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.