
IND vs SA ಎರಡನೇ ಟೆಸ್ಟ್: ಭಾರತಕ್ಕೆ ಮತ್ತೊಮ್ಮೆ ಸೋಲಿನ ಭೀತಿ
ಗುವಾಹಟಿ: ಭಾರತದ ಬೌಲರ್‌ಗಳು ಭಾನುವಾರ ಎರಡನೇ ದಿನದ ಆಟದಲ್ಲಿ ಬಸವಳಿದಿದ್ದರು. ಬೌಲರ್‌ಗಳಿಗೆ ಸ್ಪಂದಿಸದ ಅಸ್ಸಾಂ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದ ಪಿಚ್ ಅನ್ನು ಕುಲದೀಪ್ ಯಾದವ್ ಅವರು ರಸ್ತೆಗೆ ಹೋಲಿಸಿದ್ದರು. ಇದೇ ಪಿಚ್‌ನಲ್ಲಿ ಸೋಮವಾರ ದಕ್ಷಿಣ ಆಫ್ರಿಕಾದ ಬೌಲರ್‌ಗಳನ್ನು ನಿಭಾಯಿಸುವಾಗ ಭಾರತದ ಬ್ಯಾಟರ್‌ಗಳು ಪರದಾಡಿದರು– ಗುಂಡಿಗಳಿಂದ ತುಂಬಿದ್ದ ಬೆಂಗಳೂರಿನ ರಸ್ತೆಗಳಲ್ಲಿ ಚಲಾಯಿಸಲು ದ್ವಿಚಕ್ರವಾಹನ ಸವಾರರು ಕಸರತ್ತು ಮಾಡಿದ ಹಾಗೆ.
ಭಾನುವಾರ ಬ್ಯಾಟ್‌ನಿಂದ ಆತಿಥೇಯ ತಂಡವನ್ನು ಹಿಗ್ಗಾಮುಗ್ಗಾ ದಂಡಿಸಿದ ಮಾರ್ಕೊ ಯಾನ್ಸೆನ್ ಮತ್ತೊಮ್ಮೆ ಕಾಡಿದರು. ಈ ಬಾರಿ ಚೆಂಡಿನಿಂದ. ಈ ಲಂಬೂ ಎಡಗೈ ವೇಗಿ (48ಕ್ಕೆ6) ಕ್ರಿಕೆಟ್ ಜೀವನದಲ್ಲಿ ನಾಲ್ಕನೇ ಬಾರಿ ಐದು ವಿಕೆಟ್ ಗೊಂಚಲು ಪಡೆದರು. ಎರಡನೇ ಟೆಸ್ಟ್‌ನಲ್ಲಿ ಸ್ಪಷ್ಟ ಮೇಲುಗೈ ಸಾಧಿಸಿರುವ ದಕ್ಷಿಣ ಆಫ್ರಿಕಾ ಈಗ 25 ವರ್ಷಗಳ ನಂತರ ಭಾರತದಲ್ಲಿ ಸರಣಿ ಜಯದ ಹೊಸ್ತಿಲಲ್ಲಿದೆ.
ಭಾನುವಾರ ವಿಕೆಟ್ ನಷ್ಟವಿಲ್ಲದೇ 9 ರನ್ ಗಳಿಸಿದ್ದ ಭಾರತ 83.5 ಓವರುಗಳಲ್ಲಿ 201 ರನ್‌ಗಳಿಗೆ ಕುಸಿಯಿತು. 288 ರನ್‌ಗಳ ಭಾರಿ ಮುನ್ನಡೆ ಪಡೆದ ಹರಿಣಗಳ ಪಡೆ, ಸೋಮವಾರ ಮೂರನೇ ದಿನದಾಟದ ಕೊನೆಗೆ ವಿಕೆಟ್ ನಷ್ಟವಿಲ್ಲದೇ 26 ರನ್ ಗಳಿಸಿದೆ. ಒಟ್ಟಾರೆ ಮುನ್ನಡೆ 314ಕ್ಕೆ ಏರಿದೆ.
ಸ್ಪಿನ್ನರ್‌ಗಳಿಂದ ಭಾರತ ಸತ್ವಪರೀಕ್ಷೆ ಎದುರಾಗಬಹುದೆಂದು ಊಹಿಸಲಾಗಿತ್ತು. ಆದರೆ ಬಲವಾದ ಪೆಟ್ಟು ಕೊಟ್ಟಿದ್ದು ಯಾನ್ಸೆನ್. ಮೊದಲ ಸ್ಪೆಲ್ (7–0–21–0) ವಿಕೆಟ್ ಪಡೆಯಲು ವಿಫಲರಾದ ಅವರು ಎರಡನೇ ಸ್ಪೆಲ್‌ನಲ್ಲಿ ಆತಿಥೇಯರ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ಸ್ಪಿನ್ನರ್‌ಗಳು ಆರಂಭಿಕ ಆಘಾತ ನೀಡಿದ ಬಳಿಕ ಯಾನ್ಸೆನ್ ಎರಡನೇ ಸ್ಪೆಲ್‌ನ (8–1–18–4) ಮೊದಲ 25 ಎಸೆತಗಳಲ್ಲಿ ಬರೇ 11 ರನ್ನಿತ್ತು 4 ವಿಕೆಟ್‌ಗಳನ್ನು ಪಡೆದರು.
ಕೆ.ಎಲ್.ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ (58) ಜೋಡಿ ಬೆಳಿಗ್ಗೆ ಆರಾಮವಾಗಿ ಆಡುತ್ತಿರುವಂತೆ ಕಂಡಿತು. ಎಡಗೈ ಸ್ಪಿನ್ನರ್ ಕೇಶವ ಮಹಾರಾಜ್ ಮತ್ತು ಆಫ್ ಸ್ಪಿನ್ನರ್ ಹಾರ್ಮರ್ ತಿರುವು ಮತ್ತು ಬೌನ್ಸ್ ಪಡೆದರು. ರಾಹುಲ್ ಎಚ್ಚರಿಕೆಗೆ ಮೊರೆಹೋದರೆ, ಜೈಸ್ವಾಲ್ ಆಕ್ರಮಣದ ಆಟಕ್ಕೆ ಅವಕಾಶ ಸಿಕ್ಕಾಗ ಸುಮ್ಮನಾಗಲಿಲ್ಲ. ಮೊದಲ ವಿಕೆಟ್‌ಗೆ 65 ರನ್‌ಗಳು ಸೇರಿದವು.
ಈ ವೇಳೆ ಮಹಾರಾಜ್ ಅವರು ದಕ್ಷಿಣ ಆಫ್ರಿಕಾಕ್ಕೆ ಅಗತ್ಯವಿದ್ದ ‘ಆರಂಭ’ ಒದಗಿಸಿದರು. ಅವರ ಬೌಲಿಂಗ್‌ನಲ್ಲಿ ರಾಹಲ್ ಬ್ಯಾಟಿಂಗ್ ತಾಗಿದ ಚೆಂಡನ್ನು ಸ್ಲಿಪ್‌ನಿದ್ದ ಏಡನ್ ಮರ್ಕರಂ ಉತ್ತಮವಾಗಿ ಹಿಡಿದರು. ಅರ್ಧ ಶತಕ ಬಾರಿಸಿದ ಮೇಲೆ ಜೈಸ್ವಾಲ್ ಹೆಚ್ಚುಹೊತ್ತು ನಿಲ್ಲಲಿಲ್ಲ. ಹಾರ್ಮರ್ ಅವರ ಮೂರು ವಿಕೆಟ್‌ಗಳಲ್ಲಿ ಮೊದಲನೆಯವರಾದರು. ಸ್ವಲ್ಪ ವೈಡ್ ಆಗಿದ್ದ ಚೆಂಡನ್ನು ಕಟ್ ಮಾಡಲು ಹೋಗಿ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ಯಾನ್ಸೆನ್ ಹಿಡಿದ ಉತ್ತಮ ಕ್ಯಾಚಿಗೆ ನಿರ್ಗಮಿಸಬೇಕಾಯಿತು. ಬಳಿಕ ಹಾರ್ಮರ್ ಅವರು ಸಾಯಿ ಸುದರ್ಶನ್ (15) ವಿಕೆಟ್ ಸಹ ಪಡೆದರು.
ಯಾನ್ಸೆನ್ ಈ ಪಿಚ್‌ನಲ್ಲಿ ಬೌನ್ಸ್ ಪಡೆಯುವಲ್ಲಿ ಯಶಸ್ಸು ಕಂಡರು. ಅವರ ಬೌಲಿಂಗ್‌ನಲ್ಲಿ ಮೂವರು ಬ್ಯಾಟರ್‌ಗಳು ಬೌನ್ಸರ್‌ಗಳನ್ನು ನಿಭಾಯಿಸುವಲ್ಲಿ ವಿಫಲರಾದರು. 1 ವಿಕೆಟ್‌ಗೆ 95 ರನ್ ಗಳಿಸಿದ್ದ ಭಾರತ ಟೀ ವೇಳೆಗೆ 102 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತ್ತು.
ಹಂಗಾಮಿ ನಾಯಕ ರಿಷಭ್ ಪಂತ ಅವಸರ ತೋರಿದರು. ಯಾನ್ಸೆನ್ ಬೌಲಿಂಗ್‌ನಲ್ಲಿ ಬೀಸಾಟಕ್ಕೆ ಹೋದ ಅವರು ಕೀಪರ್ ವೆರೆಯನ್‌ಗೆ ಕ್ಯಾಚಿತ್ತರು. ನಿತೀಶ್ ರೆಡ್ಡಿ ಅವರು ವಿಕೆಟ್ ಕೀಪರ್ ಒಂದೇ ಕೈಲಿ ಹಿಡಿದ ಡೈವಿಂಗ್ ಕ್ಯಾಚ್‌ಗೆ ಮರಳಬೇಕಾಯಿತು. ರವೀಂದ್ರ ಜಡೇಜ ಅವರು ಬೌನ್ಸರ್ ನಿರ್ವಹಿಸಿದರೂ, ಅದು ಅವರ ಭುಜಕ್ಕೆ ತಾಗಿ ಮರ್ಕರಂ ಮಡಿಲನ್ನು ಸೇರಿತು. ಆಗ ಮೊತ್ತ 7ಕ್ಕೆ 122. ತಂಡ 150 ದಾಟವುದು ಅನುಮಾನವಾಗಿ ಕಂಡಿತು.
ಎಂಟನೇ ಕ್ರಮಾಂಕದಲ್ಲಿ ಆಡಿದ ವಾಷಿಂಗ್ಟನ್ ಸುಂದರ್ ಈ ಬಾರಿಯೂ ಪ್ರತಿರೋಧ ತೋರಿದರು. ಬಂಡೆಯಂತೆ ಬೇರೂರಿದ ಕುಲದೀಪ್ ಯಾದವ್ (19) ಜೊತೆ 72 ರನ್ ಸೇರಿಸಿದರು. ಹಾರ್ಮರ್ ಅವರು ಸುಂದರ್ ವಿಕೆಟ್ ಪಡೆದ ಮೇಲೆ ಯಾನ್ಸೆನ್ ತಮ್ಮ ಕೊನೆಯ ಸ್ಪೆಲ್‌ನಲ್ಲಿ (2.5–2–5–2) ಕುಸಿತ ತ್ವರಿತಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.