
ಗುವಾಹಟಿ: ಶನಿವಾರ ಟೆಸ್ಟ್ ಕ್ರಿಕೆಟ್ ಮಾದರಿಯ ಸೊಬಗು ಉಣಬಡಿಸಿದ್ದ ಪಿಚ್ ಭಾನುವಾರ ಮತ್ತಷ್ಟು ಹದಗೊಂಡಿತು. ಬ್ಯಾಟರ್‌ಗಳು ಇದರ ಭರಪೂರ ಲಾಭ ಪಡೆದು ಚೆಂದದ ಆಟವಾಡಿದರು.
ಅಸ್ಸಾಂ ಕ್ರಿಕೆಟ್ ಸಂಸ್ಥೆ (ಎಸಿಎ) ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ತುಸು ಮೇಲುಗೈ ಸಾಧಿಸಿದ್ದ ಭಾರತದ ಬೌಲರ್‌ಗಳು ಎರಡನೇ ದಿನದಾಟದಲ್ಲಿ ಮಂಕಾದರು. ಐದು ಗಂಟೆಗಳಲ್ಲಿ 70 ಓವರ್‌ಗಳನ್ನು ಆಡಿದ ಪ್ರವಾಸಿ ತಂಡದ ಕೆಳಕ್ರಮಾಂಕದ ಬ್ಯಾಟರ್‌ಗಳು 243 ರನ್‌ಗಳನ್ನು ಗಳಿಸಿದರು. ಅದರಲ್ಲೂ ಮೊದಲ ದಿನದಾಟದ ಅಂತ್ಯಕ್ಕೆ (6ಕ್ಕೆ247) ಕ್ರೀಸ್‌ನಲ್ಲಿ ಉಳಿದಿದ್ದ ಸೆನುರನ್ ಮುತ್ತುಸಾಮಿ (109; 206ಎ, 4X10, 6X2) ಶತಕ ಸಂಭ್ರಮ ಆಚರಿಸಿದರು. ಮಾರ್ಕೊ ಯಾನ್ಸೆನ್ (93; 91ಎ, 4X6, 7X6) ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಶತಕ ದಾಖಲಿಸುವ ಅವಕಾಶವನ್ನು ಅಲ್ಪ ಅಂತರದಲ್ಲಿ ಕಳೆದುಕೊಂಡರು. ಆದರೆ ಇಬ್ಬರೂ ಸೇರಿ ಆತಿಥೇಯರ ಹಿಡಿತದಿಂದ ಇನಿಂಗ್ಸ್ ಅನ್ನು ದೂರ ಸೆಳೆದೊಯ್ದರು. ತಂಡವು 151.1 ಓವರ್‌ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 489 ರನ್ ಗಳಿಸಿತು.
ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಭಾರತ ತಂಡವು ಮಂದಬೆಳಕಿನ ಕಾರಣ ದಿನದಾಟ ಸ್ಥಗಿತಗೊಂಡಾಗ ವಿಕೆಟ್ ನಷ್ಟವಿಲ್ಲದೇ 9 ರನ್ ಗಳಿಸಿತ್ತು. ಯಶಸ್ವಿ ಜೈಸ್ವಾಲ್ (ಔಟಾಗದೇ 7) ಮತ್ತು ಕೆ.ಎಲ್. ರಾಹುಲ್ (ಔಟಾಗದೇ 2) ಕ್ರೀಸ್‌ನಲ್ಲಿದ್ದಾರೆ.
ಸೆನುರನ್ ಅವರು ದಕ್ಷಿಣ ಆಫ್ರಿಕಾದ ದೇಶಿ ಕ್ರಿಕೆಟ್‌ನಲ್ಲಿ 5 ಸಾವಿರ ರನ್ ಗಳಿಸಿರುವ ಅನುಭವಿ. ಇಲ್ಲಿ ಉತ್ಕೃಷ್ಟ ದರ್ಜೆಯ ಶತಕ ದಾಖಲಿಸಿದರು. ತಾಳ್ಮೆ ಮತ್ತು ಯೋಜನಾಬದ್ಧ ಬ್ಯಾಟಿಂಗ್ ಮೂಲಕ ಚೆಂದದ ಆಟವಾಡಿದರು. ಕೈಲ್ ವೆರಿಯೆನ್ ಜೊತೆಗೆ ಅವರು 88 ರನ್ ಸೇರಿಸಿದರು. ಇದರಿಂದಾಗಿ ದಿನದ ಮೊದಲ ಅವಧಿಯಲ್ಲಿ ಭಾರತಕ್ಕೆ ಒಂದೂ ವಿಕೆಟ್ ಲಭಿಸಲಿಲ್ಲ. ಸೆನುರನ್ 48 ರನ್ ಗಳಿಸಿದ್ದ ಸಂದರ್ಭದಲ್ಲಿ ಡಿಆರ್‌ಎಸ್‌ನಲ್ಲಿ ಜೀವದಾನ ಪಡೆದರು. ವೆರಿಯನ್ (45 ರನ್)ಔಟಾದ ಮೇಲೆ ಕ್ರೀಸ್‌ಗೆ ಬಂದ ಮಾರ್ಕೊ ಬೀಸಾಟ ಆರಂಭಿಸಿದರು.
6.7 ಅಡಿ ಎತ್ತರದ ಮಾರ್ಕೊ ಸತತ ಬೌಂಡರಿಗಳನ್ನು ಬಾರಿಸುವ ಮೂಲಕ ಬೌಲರ್‌ಗಳಿಗೆ ಬಿಸಿ ಮುಟ್ಟಿಸಿದರು. 9ನೇ ಕ್ರಮಾಂಕದ ಬ್ಯಾಟರ್ ಮಾರ್ಕೊ ಅವರು ಉತ್ತಮ ಎಸೆತಗಳಿಗೆ ರಕ್ಷಣಾತ್ಮಕ ಉತ್ತರ ನೀಡಿ, ಅವಕಾಶ ಸಿಕ್ಕಾಗ ಸಿಕ್ಸರ್ ಎತ್ತಿದರು. ಇವರಿಬ್ಬರೂ ಎಂಟನೇ ವಿಕೆಟ್ ಜೊತೆಯಾಟದಲ್ಲಿ 97 ರನ್ (107ಎಸೆತ) ಸೇರಿಸಿದ್ದು ಭಾರತ ತಂಡದ ತಲೆನೋವು ಹೆಚ್ಚಿಸಿತು. ಅನುಭವಿ ಸ್ಪಿನ್ನರ್ ರವೀಂದ್ರ ಜಡೇಜ (94ಕ್ಕೆ2) ಮತ್ತು ಕುಲದೀಪ್ ಯಾದವ್ (115ಕ್ಕೆ4) ಅವರಿಬ್ಬರನ್ನೂ ಮಾರ್ಕೋ ಬಹಳಷ್ಟು ದಂಡಿಸಿದರು. ಕೊನೆಗೂ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದ ಕುಲದೀಪ್ ಮುಯ್ಯಿ ತೀರಿಸಿಕೊಂಡರು.
ಒಂದು ಓವರ್ ಮುಗಿದ 60 ಸೆಕೆಂಡುಗಳ ಒಳಗೆ ಇನ್ನೊಬ್ಬ ಬೌಲರ್ ಓವರ್ ಆರಂಭಿಸಬೇಕು. ಆದರೆ ಈ ನಿಯಮದ ಉಲ್ಲಂಘನೆಗೆ ಕುಲದೀಪ್ ಅವರಿಗೆ ಅಂಪೈರ್ ಎರಡು ಬಾರಿ ಎಚ್ಚರಿಕೆ ನೀಡಿದರು. ಹಂಗಾಮಿ ನಾಯಕ ರಿಷಭ್ ಪಂತ್ ಅವರ ಅತಿಯಾದ ಸಲಹೆ, ಸೂಚನೆ ಫಲವಾಗಿ ಕುಲದೀಪ್ ವಿಳಂಬ ಮಾಡುತ್ತಿದ್ದರು. ಒಂದು ವೇಳೆ ಮೂರನೇ ಎಚ್ಚರಿಕೆ ಪಡೆದಿದ್ದರೆ ತಂಡಕ್ಕೆ 5 ರನ್‌ಗಳ ದಂಡ ವಿಧಿಸಲಾಗುತ್ತಿತ್ತು. ಬೂಮ್ರಾ (75ಕ್ಕೆ2) ಅವರು ತಮ್ಮ ಪೂರ್ಣ ಸಾಮರ್ಥ್ಯವನ್ನು ವಿನಿಯೋಗಿಸಿದರು. ಆದರೆ ಅವರಿಗೆ ಅದೃಷ್ಟ ಒಲಿಯಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.