ADVERTISEMENT

IND vs SL 2nd T20: ಸರಣಿ ಕೈವಶದತ್ತ ಭಾರತ ಚಿತ್ತ

ಕ್ರಿಕೆಟ್: ದೀಪಕ್ ಹೂಡಾ, ಶಿವಂ ಮಾವಿ ಮೇಲೆ ನಿರೀಕ್ಷೆ; ಶ್ರೀಲಂಕಾ ಎದುರು ಎರಡನೇ ಪಂದ್ಯ ಇಂದು

ಪಿಟಿಐ
Published 4 ಜನವರಿ 2023, 23:22 IST
Last Updated 4 ಜನವರಿ 2023, 23:22 IST
ಭಾರತ ತಂಡದ ದೀಪಕ್ ಹೂಡಾ ಮತ್ತು ಇಶಾನ್ ಕಿಶನ್  –ಎಎಫ್‌ಪಿ ಚಿತ್ರ
ಭಾರತ ತಂಡದ ದೀಪಕ್ ಹೂಡಾ ಮತ್ತು ಇಶಾನ್ ಕಿಶನ್  –ಎಎಫ್‌ಪಿ ಚಿತ್ರ   

ಪುಣೆ: ಭಾರತ ಕ್ರಿಕೆಟ್ ತಂಡವು ಶ್ರೀಲಂಕಾ ಎದುರಿನ ಟಿ20 ಸರಣಿಯನ್ನು ಕೈವಶಪಡಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ.

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ಜಯಿಸುವ ಛಲದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಇದ್ದಾರೆ. ಮುಂಬೈನಲ್ಲಿ ಮಂಗಳವಾರ ನಡೆದಿದ್ದ ಮೊದಲ ಪಂದ್ಯದಲ್ಲಿ ಜಯಿಸಿದ್ದರೂ ಕೂಡ ಕೆಲವು ವೈಫಲ್ಯಗಳೂ ಇದ್ದವು. ಅವುಗಳನ್ನು ಸರಿಪಡಿಸಿಕೊಂಡು ತಂಡವನ್ನು ಕಣಕ್ಕಿಳಿಸುವ ಸವಾಲೂ ಅವರ ಮುಂದಿದೆ.

ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಅವರು ಪವರ್ ಪ್ಲೇನಲ್ಲಿ ಆಡುವ ಶೈಲಿ ಬದಲಾಗಬೇಕಿದೆ. ತಮ್ಮ ಬ್ಯಾಟಿಂಗ್‌ಗೆ ತುಸು ವೇಗ ಮತ್ತು ಹೊಡೆತಗಳಲ್ಲಿ ನಿಖರತೆ ಅಳವಡಿಸಿಕೊಂಡರೆ ಇಶಾನ್ ಕಿಶನ್ ಜೊತೆಗೆ ಉತ್ತಮ ಆರಂಭ ನೀಡಬಲ್ಲರು.

ADVERTISEMENT

ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ಆ ಪಂದ್ಯದಲ್ಲಿ ವಿಫಲರಾಗಿದ್ದರು. ಅವರು ಸಂದರ್ಭದ ಅಗತ್ಯಕ್ಕೆ ತಕ್ಕಂತೆ ಆಟವಾಡುವ ಅಗತ್ಯವಿದೆ. ಆದರೆ ದೀಪಕ್ ಹೂಡಾ ಮತ್ತು ಅಕ್ಷರ್ ಪಟೇಲ್ ತಮ್ಮ ಮೇಲಿನ ನಿರೀಕ್ಷೆ ಉಳಿಸಿಕೊಂಡರು ಅವರಿಬ್ಬರ ಜೊತೆಯಾಟದಿಂದಾಗಿ ತಂಡಕ್ಕೆ ಹೋರಾಟದ ಮೊತ್ತ ಗಳಿಸಲು ಸಾಧ್ಯವಾಯಿತು. ಅಕ್ಷರ್ ಪಂದ್ಯದ ಕೊನೆಯ ಓವರ್‌ನಲ್ಲಿ (ಶ್ರೀಲಂಕಾ ತಂಡದ ಗೆಲುವಿಗೆ 13 ರನ್‌ಗಳು ಬೇಕಿದ್ದವು) ಭಾರತ ತಂಡಕ್ಕೆ ಜಯದ ಕಾಣಿಕೆ ನೀಡಿದರು.

ಬೌಲಿಂಗ್ ವಿಭಾಗದಲ್ಲಿ ಹೊಸಪ್ರತಿಭೆ ಶಿವಂ ಮಾವಿ, ಉಮ್ರಾನ್ ಮಲಿಕ್ ಉತ್ತಮವಾಗಿ ಆಡಿದ್ದಾರೆ. ನಾಲ್ಕು ವಿಕೆಟ್ ಪಡೆದಿರುವ ಮಾವಿ ಮತ್ತು 155 ಕಿ.ಮೀ ವೇಗದಲ್ಲಿ ಎಸೆತ ಹಾಕಿ ದಾಖಲೆ ಬರೆದ ಉಮ್ರಾನ್ ಭರವಸೆ ಮೂಡಿಸಿದ್ದಾರೆ. ಆದರೆ ಕೊನೆಯ ಹಂತದ ಓವರ್‌ಗಳಲ್ಲಿ ಬೌಲರ್‌ಗಳು ಬಿಗಿ ದಾಳಿ ನಡೆಸಿದರೆ ಮಾತ್ರ ಜಯಗಳಿಸುವುದು ಸುಲಭ.

ಶ್ರೀಲಂಕಾ ತಂಡದ ನಾಯಕ ದಸುನ್ ಶನಕಾ, ಕುಶಾಲ ಮೆಂಡಿಸ್, ಚಮಿಕಾ ಕರುಣರಾತ್ನೆ ಮತ್ತು ವಣಿಂದು ಹಸಜರಂಗಾ ಅವರು ಡೆತ್ ಓವರ್‌ಗಳಲ್ಲಿ ಬೀಸಾಟವಾಡಿ ರನ್‌ ಗಳಿಸುವ ಸಮರ್ಥರಾಗಿದ್ದಾರೆ. ಮೊದಲ ಪಂದ್ಯದಲ್ಲಿಯೂ ಅವರು ತಮ್ಮ ಆಟ ತೋರಿದ್ದಾರೆ.

ಪ್ರವಾಸಿ ಬಳಗವು ಸ್ಪಿನ್‌ ಬೌಲರ್‌ಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಮಧ್ಯಮವೇಗಿ ಕಸುನ್ ರಜಿತಾ ಲಯಕ್ಕೆ ಮರಳುವ ಅಗತ್ಯವಿದೆ.

ಪುಣೆಯಲ್ಲಿ ಮುಸ್ಸಂಜೆ ಹೊತ್ತಿನಲ್ಲಿ ಇಬ್ಬನಿ ಸುರಿಯುವುದರಿಂದ ಟಾಸ್ ಗೆದ್ದವರು ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.

ತಂಡಗಳು:

ಭಾರತ: ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್ (ವಿಕೆಟ್‌ಕೀಪರ್), ಋತುರಾಜ್ ಗಾಯಕವಾಡ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ಉಪನಾಯಕ), ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ಆರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಶಿವಂ ಮಾವಿ, ಮುಖೇಶ ಕುಮಾರ್

ಶ್ರೀಲಂಕಾ: ದಸುನ್ ಶನಾಕ (ನಾಯಕ), ಪಥುಮ್ ನಿಸಾಂಕ, ಕುಶಾಲ ಮೆಂಡಿಸ್ (ವಿಕೆಟ್‌ಕೀಪರ್, ಧನಂಜಯ ಡಿಸಿಲ್ವಾ, ಚರಿತ ಅಸಲೆಂಕಾ, ಭಾನುಕಾ ರಾಜಪಕ್ಷ, ವಣಿಂದು ಹಸರಂಗಾ, ಚಾಮಿಕಾ ಕರುಣಾರತ್ನೆ, ಮಹೀಷ ತೀಕ್ಷಣ, ಕಸುನ್ ರಜಿತಾ, ದಿಲ್ಶಾನ್ ಮಧುಶಂಕಾ, ನುವಾನ್ ತುಷಾರ.

ಪಂದ್ಯ ಆರಂಭ: ರಾತ್ರಿ 7

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್. ಹಾಟ್‌ಸ್ಟಾರ್ ಆ್ಯಪ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.