
ರಾಜ್‌ಕೋಟ್ (ಪಿಟಿಐ): ಋತುರಾಜ್ ಗಾಯಕವಾಡ್ (ಔಟಾಗದೇ 68;83ಎ, 4x9) ಅವರ ಅಜೇಯ ಅರ್ಧಶತಕ ಮತ್ತು ಬೌಲರ್‌ಗಳ ಪರಿಣಾಮಕಾರಿ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ಎ ತಂಡವು ಭಾನುವಾರ ಎರಡನೇ ‘ಏಕದಿನ’ ಪಂದ್ಯದಲ್ಲಿ 9 ವಿಕೆಟ್‌ಗಳಿಂದ ಮಣಿಸಿತು.
ತಿಲಕ್ ವರ್ಮಾ ನಾಯಕತ್ವದ ಭಾರತ ಎ ತಂಡವು ಒಂದು ಪಂದ್ಯ ಬಾಕಿ ಇರುವಂತೆ ಮೂರು ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ ಸಾಧಿಸಿದೆ. ಕೊನೆಯ ಪಂದ್ಯ ಬುಧವಾರ ಇದೇ ತಾಣದಲ್ಲಿ ನಡೆಯಲಿದೆ.
ಟಾಸ್ ಗೆದ್ದ ಪ್ರವಾಸಿ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ವೇಗಿ ಹರ್ಷಿತ್ ರಾಣಾ (21ಕ್ಕೆ 3) ಮತ್ತು ಸ್ಪಿನ್ನರ್ ನಿಶಾಂತ್ ಸಂಧು (16ಕ್ಕೆ 4) ಅವರ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ಎ ತಂಡವು 30.3 ಓವರ್‌ಗಳಲ್ಲಿ 132 ರನ್‌ಗಳಿಗೆ ಆಲೌಟ್ ಆಯಿತು. ಆರಂಭಿಕ ಆಟಗಾರ ರಿವಾಲ್ಡೊ ಮೂನ್ಸಾಮಿ (33; 34ಎ) ಹೊರತುಪಡಿಸಿ ಉಳಿದವರು ನಿರಾಸೆ ಮೂಡಿಸಿದರು.
ಸುಲಭ ಗುರಿಯನ್ನು ಬೆನ್ನಟ್ಟಿದ ಭಾರತ ಎ ತಂಡವು ಇನ್ನೂ 133 ಎಸೆತಗಳು ಬಾಕಿ ಇರುವಂತೆ ಒಂದು ವಿಕೆಟ್‌ಗೆ 135 ರನ್ ಗಳಿಸಿ ಜಯ ಸಾಧಿಸಿತು. ಮೊದಲ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿದ್ದ ಗಾಯಕವಾಡ್ ಮತ್ತೆ ತಂಡದ ನೆರವಿಗೆ ನಿಂತರು. ಅವರು ಮತ್ತು ಅಭಿಷೇಕ್ ಶರ್ಮಾ (32; 22ಎ) ಮೊದಲ ವಿಕೆಟ್‌ಗೆ 53 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಅಭಿಷೇಕ್ ಔಟಾದ ಬಳಿಕ ಗಾಯಕವಾಡ್ ಅವರನ್ನು ಸೇರಿಕೊಂಡ ತಿಲಕ್ (ಔಟಾಗದೇ 39) ಮುರಿಯದ ಎರಡನೇ ವಿಕೆಟ್ ಜೊತೆಯಾಟದಲ್ಲಿ 82 ರನ್ ಪೇರಿಸಿ ತಂಡವನ್ನು ದಡ ಸೇರಿಸಿದರು.
ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ ಎ: 30.3 ಓವರ್‌ಗಳಲ್ಲಿ 132 (ರಿವಾಲ್ಡೊ ಮೂನ್ಸಾಮಿ 33; ಹರ್ಷಿತ್ ರಾಣಾ 21ಕ್ಕೆ 3, ನಿಶಾಂತ್ ಸಂಧು 18ಕ್ಕೆ 4). ಭಾರತ ಎ: 27.5 ಓವರ್‌ಗಳಲ್ಲಿ 1 ವಿಕೆಟ್‌ಗೆ 135 (ಋತುರಾಜ್ ಗಾಯಕವಾಡ್ ಔಟಾಗದೇ 68, ಅಭಿಷೇಕ್ ಶರ್ಮಾ 32, ತಿಲಕ್ ವರ್ಮಾ ಔಟಾಗದೇ 29). ಫಲಿತಾಂಶ: ಭಾರತ ಎ ತಂಡಕ್ಕೆ 9 ವಿಕೆಟ್‌ಗಳ ಗೆಲುವು. ಪಂದ್ಯದ ಆಟಗಾರ: ನಿಶಾಂತ್ ಸಂಧು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.