ಲಖನೌ: ನಾರಾಯಣ ಜಗದೀಶನ್ ಅವರು ಅಮೋಘ ಅರ್ಧಶತಕದ ಮೂಲಕ ಆಸ್ಟ್ರೇಲಿಯಾ ಎ ತಂಡದ ವಿರುದ್ಧ ಭಾರತ ಎ ತಂಡದ ಹೋರಾಟಕ್ಕೆ ಬಲ ತುಂಬಿದರು.
ಏಕನಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‘ಟೆಸ್ಟ್’ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ತಂಡವು 30 ಓವರ್‌ಗಳಲ್ಲಿ 1 ವಿಕೆಟ್‌ಗೆ 116 ರನ್ ಗಳಿಸಿದೆ. ಜಗದೀಶನ್ (ಬ್ಯಾಟಿಂಗ್ 50) ಮತ್ತು ಸಾಯಿ ಸುದರ್ಶನ್ (ಬ್ಯಾಟಿಂಗ್ 20) ಕ್ರೀಸ್‌ನಲ್ಲಿದ್ದಾರೆ.
ಆಸ್ಟ್ರೇಲಿಯಾ ಎ ತಂಡವು ಬೆಳಿಗ್ಗೆ ಮೊದಲ ಇನಿಂಗ್ಸ್‌ನಲ್ಲಿ 98 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 532 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಗ್ಲೆನ್ ಫಿಲಿಪ್ (ಔಟಾಗದೇ 123; 87ಎ, 4X18, 6X4) ಮತ್ತು ಲಿಯಾಮ್ ಸ್ಕಾಟ್ (81; 122ಎ, 4X8, 6X2) ಅವರು ತಂಡದ ಮೊತ್ತವನ್ನು ಬೆಳೆಸಿದರು. ಮೊದಲ ದಿನವಾದ ಮಂಗಳವಾರ ಆಸ್ಟ್ರೇಲಿಯಾ ತಂಡವು 5 ವಿಕೆಟ್‌ಗಳಿಗೆ 337 ರನ್ ಗಳಿಸಿತ್ತು. ಸ್ಯಾಮ್ ಕೋನ್ಸ್ಟಾಸ್ ಅವರು ಗಳಿಸಿದ ಶತಕದಿಂದಾಗಿ ದೊಡ್ಡ ಮೊತ್ತ ಪೇರಿಸಿತ್ತು. ಮಂಗಳವಾರ ಈ ಮೊತ್ತಕ್ಕೆ ಮತ್ತೆ 195 ರನ್‌ಗಳನ್ನು ಸೇರಿಸಲು ಫಿಲಿಪ್ ಮತ್ತು ಲಿಯಾಮ್ ಆಟದಿಂದ ಸಾಧ್ಯವಾಯಿತು.
ಆಸ್ಟ್ರೇಲಿಯಾ ತಂಡವು ಡಿಕ್ಲೇರ್ ಮಾಡಿಕೊಂಡ ನಂತರ ಇನಿಂಗ್ಸ್ ಆರಂಭಿಸಿದ ಭಾರತ ಎ ತಂಡಕ್ಕೆ ಅಭಿಮನ್ಯು ಈಶ್ವರನ್ (44; 58ಎ) ಮತ್ತು ಎನ್. ಜಗದೀಶನ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 88 ರನ್ ಸೇರಿಸಿದರು. 22ನೇ ಓವರ್‌ನಲ್ಲಿ ಲಿಯಾಮ್ ಸ್ಕಾಟ್ ಎಸೆತವನ್ನು ಎದುರಿಸುವಲ್ಲಿ ಎಡವಿದ ಈಶ್ವರನ್ ಕ್ಲೀನ್‌ಬೌಲ್ಡ್ ಆದರು.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ ಎ: 98 ಓವರ್‌ಗಳಲ್ಲಿ 6ಕ್ಕೆ532ಡಿಕ್ಲೇರ್ಡ್ (ಲಿಯಾಮ್ ಸ್ಕಾಟ್ 81, ಜೋಶ್ ಫಿಲಿಪ್ ಔಟಾಗದೇ 123, ಝೇವಿಯರ್ ಬಾರ್ಟೆಲೆಟ್ ಔಟಾಗದೇ 39, ಗುರ್ನೂರ್ ಬ್ರಾರ್ 87ಕ್ಕೆ2, ಹರ್ಷ ದುಬೆ 141ಕ್ಕೆ3) ಭಾರತ: 30 ಓವರ್‌ಗಳಲ್ಲಿ 1 ವಿಕೆಟ್‌ಗೆ 116 (ಅಭಿಮನ್ಯು ಈಶ್ವರನ್ 44, ಎನ್. ಜಗದೀಶನ್ ಬ್ಯಾಟಿಂಗ್ 50, ಸಾಯಿ ಸುದರ್ಶನ್ ಬ್ಯಾಟಿಂಗ್ 20)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.